ರಾಮನಗರ: ಯುವಕನ ಸಮಯ ಪ್ರಜ್ಞೆಯಿಂದ ಉಳಿದ ಮಗುವಿನ ಪ್ರಾಣ..!
ಮಗು ಕೈನಿಂದ ಜಾರಿ ಕಾರಿನ ಚಕ್ರಕ್ಕೆ ಸಿಲುಕಬೇಕು ಎನ್ನುವಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಮಗುವನ್ನು ಕೆಳಗೆ ಬೀಳದಂತೆ ರಕ್ಷಣೆ ಮಾಡಿದ್ದಾನೆ.
ರಾಮನಗರ(ಸೆ.28): ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಹಸುಗೂಸಿನ ಪ್ರಾಣ ಉಳಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ರಸ್ತೆಯಲ್ಲಿ ದಂಪತಿ ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಸಮೀಪ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮಗು ಎತ್ತಿಕೊಂಡು ಪತಿ ಕಾರಿನಿಂದ ಇಳಿದಿದ್ದಾನೆ. ಪಕ್ಕದ ಸೀಟಿನಲ್ಲಿ ಕುಳಿತ ತನ್ನ ಪತ್ನಿಗೆ ಕುಳಿತ ಭಾಗದ ಬಾಗಿಲಿನಿಂದ ಕೆಳಕ್ಕೆ ಇಳಿಯುವಂತೆ ಸೂಚನೆ ನೀಡಿದ್ದಾನೆ.
ಪತ್ನಿ ಡೋರ್ ತೆಗೆದು ಕೆಳಗೆ ಇಳಿಯುವಾಗ ಅಕಸ್ಮಾತ್ ಹ್ಯಾಂಡ್ ಬ್ರೇಕ್ ಮೇಲೆ ಕೈ ಇಟ್ಟಿದ್ದಾಳೆ. ಇದ್ದಕ್ಕಿದ್ದಂತೆ ಕಾರು ಮುಂದೆ ಚಲಿಸಲು ಪ್ರಾರಂಭಿಸಿದೆ. ಕಾರಿನಿಂದ ಹೊರಗೆ ಇಳಿದಿದ್ದ ಪತಿ ಕೂಡಲೇ ಮಗುವನ್ನು ಕೈಯಲ್ಲೇ ಹಿಡಿದುಕೊಂಡು ಗಾಬರಿಯಿಂದ ಕಾರಿನ ಡೋರ್ ತೆಗೆದು ಕಾರು ಹತ್ತಲು ಪ್ರಯತ್ನಿಸಿದ್ದಾನೆ.
ಕಾವೇರಿ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಫಲಿಸಲ್ಲ: ಸಚಿವ ಗುಂಡೂರಾವ್
ಈ ವೇಳೆ ಮಗು ಕೈನಿಂದ ಜಾರಿ ಕಾರಿನ ಚಕ್ರಕ್ಕೆ ಸಿಲುಕಬೇಕು ಎನ್ನುವಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಮಗುವನ್ನು ಕೆಳಗೆ ಬೀಳದಂತೆ ರಕ್ಷಣೆ ಮಾಡಿದ್ದಾನೆ.
ಇತ್ತ ಚಲಿಸುತ್ತಿದ್ದ ಕಾರಿಗೆ ಹೇಗೋ ಹತ್ತಿ ಕಾರನ್ನು ಪತಿ ನಿಲ್ಲಿಸಿದ್ದಾನೆ. ಅಕ್ಕಪಕ್ಕದಲ್ಲಿದ್ದವರು ಕೂಡ ರಕ್ಷಣೆಗೆ ಧಾವಿಸಿ ಕಾರು ತಡೆದಿದ್ದಾರೆ. ಅದೃಷ್ಟವಶಾತ್ ಮಗು ಅಪಾಯದಿಂದ ಪಾರಾಗಿ ದುರಂತ ತಪ್ಪಿದೆ. ಸಮಯಪ್ರಜ್ಞೆ ಮೆರೆದು ತಮ್ಮ ಮಗುವನ್ನು ರಕ್ಷಣೆ ಮಾಡಿದ ಯುವಕನಿಗೆ ದಂಪತಿ ಕೃತಜ್ಞತೆ ಸಲ್ಲಿಸಿದರು.