Asianet Suvarna News Asianet Suvarna News

ಅಪರಿಚಿತನಿಗೆ ಮೊಬೈಲ್ ಕೊಟ್ಟು ಪೇಚಿಗೆ ಸಿಲುಕಿದ ಯುವಕ: ಲವರ್‌ ಜೊತೆಗಿನ ಖಾಸಗಿ ಫೋಟೋ ಲೀಕ್

ಟೀ ಸ್ಟಾಲ್‌ ಬಳಿ ಒಂದು ಕರೆ ಮಾಡಲು ಅಪರಿಚಿತನಿಗೆ ಫೋನ್ ಕೊಟ್ಟ ಯುವಕ
ಮೊಬೈಲ್‌ ಪಾಸ್ ವರ್ಡ್ ಬಳಕೆ ನೋಡಿಕೊಂಡು ಫೋನ್ ಕದ್ದು ಪರಾರಿ
ಖಾಸಗಿ ಫೋಟೋಗಳನ್ನು ಶೇರ್‌ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಅಪರಿಚಿತ

Young man gave a mobile phone to a stranger Private photo with a lover is leaked sat
Author
First Published Jan 1, 2023, 11:50 AM IST

ಬೆಂಗಳೂರು (ಜ.1): ಗುರುತು ಪರಿಚಯ ಇಲ್ಲದವರಿಗೆ ಫೋನ್ ಕೊಟ್ಟು ಹಲವು ತೊಂದರೆಗೆ ಸುಲುಕಿದ ಹಾಗೂ ಹಣವನ್ನು ಕಳೆದುಕೊಂಡ ಘಟನೆ ಸಾಕಷ್ಟು ನಡೆಯುತ್ತಿವೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಯುವಕನಿಂದ ಫೋನ್ ಪಡೆದುಕೊಂಡ ಕಳ್ಳ ಅದರೊಳಗಿದ್ದ ಆತನ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್‌ಗೆ ಕಳುಹಿಸಿಕೊಂಡಿದ್ದಾನೆ. ನಂತರ ಖಾಸಗಿ ಫೋಟೋಗಳನ್ನು ವೈರಲ್ ಮಾಡುತ್ತೇನೆಂದು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ಹಣ ಬೇಡಿಕೆಯಿಟ್ಟ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. 

ಡಿ.25ರಂದು ಅಸ್ಸಾಂ ಮೂಲದ ಪ್ರಸ್ತುತ ಹೆಬ್ಬಾಳ ನಿವಾಸಿಯಾಗಿರುವ 21 ವರ್ಷದ ಯುವಕ ಮತ್ತಿಕೆರೆ ಟೀ ಶಾಪ್‌ ಒಂದರ ಬಳಿ ಇದ್ದಾಗ ಪವನ್‌ ಎಂಬಾತ ಯುವಕನನ್ನು ಮಾತನಾಡಿಸಿದ್ದಾನೆ. ಬಳಿಕ ತನ್ನ ಮೊಬೈಲ್‌ ಕೆಟ್ಟು ಹೋಗಿದ್ದು ತುರ್ತಾಗಿ ಮಾತನಾಡಬೇಕಿದೆ ಎಂದು ಹೇಳಿ ಮೊಬೈಲ್‌ ಕೇಳಿ ಪಡೆದಿದ್ದಾನೆ. ಆತನ ಮಾತನ್ನು ನಂಬಿದ ಯುವಕ ತನ್ನ ಮೊಬೈಲ್‌ ಕೊಟ್ಟಿದ್ದ. ಯಾವುದೋ ನಂಬರ್ ಗೆ ಕರೆ ಮಾಡಿದ ಆತ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಯಾಮಾರಿಸಿ ಅಲ್ಲಿಂದ ಪರಾರಿಯಾಗಿದ್ದನು. ಇತ್ತ ತನ್ನದೇ ಮೊಬೈಲ್‌ ಕೊಟ್ಟು, ಕಳೆದುಕೊಂಡು ಯುವಕ ಕಂಗಾಲಾಗಿದ್ದನು.

ಹಣಕ್ಕಾಗಿ ಬ್ಲ್ಯಾಕ್‌ ಮೇಲೆ ಮಾಡಿದ ಕಳ್ಳ: ಯುವಕನಿಂದ ಮೊಬೈಲ್‌ ಪಡೆದು ಹೋಗಿದ್ದ ಪವನ್‌ ಲಾಕ್‌ ತೆರೆದು ನೋಡಿದಾಗ ಅದರಲ್ಲಿ ಯುವಕನ ಪ್ರೇಯಸಿ ಜತೆಗಿನ ಖಾಸಗಿ ಫೋಟೋ, ವಿಡಿಯೋಗಳು ಇರುವುದು ಗಮನಿಸಿದ್ದಾನೆ. ನಂತರ, ಇದನ್ನೇ ಬಂಡವಾಳ ಮಾಡಿಕೊಂಡು ಅದೇ ಮೊಬೈಲ್‌ನಿಂದ ಯುವಕನ ಪ್ರೇಯಸಿ, ಸ್ನೇಹಿತರಿಗೆ ಪೋಟೋ, ವಿಡಿಯೋ ಕಳಿಸಿದ್ದಾನೆ. ನಂತರ ನೀನು ಕೂಡಲೇ 1 ಲಕ್ಷ ರೂ. ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಅಷ್ಟೇ ಅಲ್ಲದೆ, ಯುವಕನ ತಾಯಿಯ ಮೊಬೈಲ್‌ಗೆ ಪೋಟೋ ಕಳಿಸಿ 50 ಸಾವಿರ ರೂ. ಕೊಡುವಂತೆ ಡಿಮ್ಯಾಂಡ್‌ ಮಾಡಿದ್ದನು.

ಮೊಬೈಲ್ ಕೈಯಲ್ಲಿ ಇಲ್ಲದಾಗರೂ, ಕೆಲವು ಮಕ್ಕಳು ಮಾತೇ ಆಡೋಲ್ಲ! ಯಾಕೀ ಮೌನ?

ಲಾಕ್ ತೆರೆಯುವುದನ್ನು ಗಮನಿಸಿದ್ದ: ಆರೋಪಿ ಪವನ್‌ ಕುಮಾರ್‌, ಯುವಕ ಫೋನ್‌ ನೀಡಿದಾಗ ಲಾಕ್‌ ಓಪನ್‌ ಮಾಡುವುದನ್ನು ನೋಡಿಕೊಂಡಿದ್ದ. ಹೀಗಾಗಿ, ಕಳವು ಮಾಡಿಕೊಂಡು ಹೋದ ಮೇಲೆ ಪುನಃ ಸುಲಭವಾಗಿ ಲಾಕ್‌ ತೆರೆದು ನೋಡಿದಾಗ ಫೋನ್‌ನಲ್ಲಿ ಖಾಸಗಿ ವಿಚಾರಗಳು ಗೊತ್ತಾಗಿದ್ದವು. ಆರೋಪಿ ಬಳಿಯಿದ್ದ ಮೊಬೈಲ್‌ ಜಪ್ತಿ ಮಾಡಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ದೂರು ನೀಡಲು ಪೋಷಕರ ಸಾಥ್: ಫೋನ್‌ ಕಳೆದುಕೊಂಡಿದ್ದಲ್ಲದೇ ತನ್ನ ಖಾಸಗಿ ವೀಡಿಯೋಗಳನ್ನು ಹಂಚಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ವಿಚಾರ ತಿಳಿದುಕೊಂಡ ಯುವಕ ಪೋಷಕರ ಸಲಹೆ ಮೇರೆಗೆ ಧೈರ್ಯ ಮಾಡಿ ಯಶವಂತಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಸುರೇಶ್‌ ನೇತೃತ್ವದ ತಂಡದ ಸದಸ್ಯರು, ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಯತ್ನಿಸಿದ್ದ ಆರೋಪಿ ಪವನ್‌ ಕುಮಾರ್‌ (26)ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. 

ನ್ಯೂ ಇಯರ್ ಪಾರ್ಟಿ: ಕುಡಿದ ಮತ್ತಿನಲ್ಲಿ ಗನ್‌ಫೈರ್‌ ಮಾಡಿದ ತಂದೆ: ಮಗನ ದೇಹ ಹೊಕ್ಕ ಬುಲೆಟ್‌, ದುರಂತ ಸಾವು

ಮೊಬೈಲ್‌ ಕಳೆದರೆ ಏನು ಮಾಡಬೇಕು?: ಇನ್ನು ಯಾರೇ ತಮ್ಮ ಫೋನ್ ಕಳೆದುಹೋದದ್ದು ಖಾತ್ರಿ ಯಾದ ತಕ್ಷಣವೇ ಪೊಲೀಸರಿಗೆ ದೂರು ನೀಡಿ. ಕಸ್ಟಮರ್ ಕೇರ್ ಗೆ ಕರೆ ಮಾಡಿ ಸಿಮ್ ಅನ್ನು ಡಿ ಆಕ್ಟಿವೇಟ್ ಮಾಡಿಸಿ. ಗೂಗಲ್ ಅಕೌಂಟ್‌ ಅನ್ನು ಎರೇಸ್‌ ಆಲ್ ಡಾಟ್ ರಿಮೋಟ್‌ ಆಯ್ಕೆ ಮಾಡಿ ಫೋನ್ ದಾಖಲೆಗಳನ್ನು ಅಳಿಸಿ ಹಾಕಿ. ನಂತರ ನಿಮ್ಮ ಬ್ಯಾಂಕ್ ಖಾತೆ ಮತ್ತು ಆನ್ ಲೈನ್ ಖಾತೆಗಳ ಪಾಸ್ ವರ್ಡ್ ಬದಲಾಯಿಸಬೇಕು. ಅದೇ ರೀತಿ ಫೇಸ್ ಬುಕ್, ಟ್ವಿಟರ್ ಇತ್ಯಾದಿ ಸಾಮಾಜಿಕ ಜಾಲತಾಣ, ಜಿ-ಮೇಲ್ ಗಳ ಪಾಸ್ ವರ್ಡ್ ಅನ್ನು ಬದಲಾಯಿಸಬೇಕು ಗೂಗಲ್ ಡ್ರೈವ್ ಡ್ರಾಪ್ ಬಾಕ್ಸ್ ಇತ್ಯಾದಿಗಳನ್ನು ಅನ್ ಲಿಂಕ್ ಮಾಡಬೇಕು.

Follow Us:
Download App:
  • android
  • ios