ಬೆಂಗಳೂರು [ಜು.04] :  ಬೆಂಗಳೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ತರಬೇತಿ, ಘನತ್ಯಾಜ್ಯ ಸಮಸ್ಯೆ, ಮಾಲಿನ್ಯ ನಿಯಂತ್ರಣ, ಜಲ ಸಂರಕ್ಷಣೆ ಮತ್ತು ನಾಗರಿಕ ಸಮಸ್ಯೆಗಳ ಕುರಿತು ಬೋಧನೆ ಮತ್ತು ಅಧ್ಯಯನವನ್ನು ಕಡ್ಡಾಯಗೊಳಿಸಿದೆ. ತಪ್ಪಿದರೆ ಕಾಲೇಜುಗಳ ಮಾನ್ಯತೆ ನವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಈ ಸಂಬಂಧ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂ.ವಿವಿ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌, ವಿವಿ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳು ಇನ್ಮುಂದೆ ಯೋಗದ ಜತೆಗೆ ಧ್ಯಾನ, ನಾಗರಿಕ ಸಮಸ್ಯೆಗಳ ಅಧ್ಯಯನ, ಘನ ತ್ಯಾಜ್ಯ ನಿರ್ವಹಣೆ, ವಾಯು ಮಾಲಿನ್ಯ ನಿಯಂತ್ರಣ ಮತ್ತು ಜಲ ಸಂರಕ್ಷಣೆ ವಿಚಾರಗಳನ್ನು ವಾರಕ್ಕೆ ಒಂದು ಗಂಟೆ ಕಡ್ಡಾಯವಾಗಿ ಬೋಧನೆ ಮಾಡಬೇಕು. ಬೋಧನೆ ಮಾಡದಿದ್ದರೆ, ಅಂತಹ ಕಾಲೇಜಿನ ಮಾನ್ಯತೆ ನವೀಕರಿಸುವುದಿಲ್ಲ ಎಂದು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌ ತಿಳಿಸಿದ್ದಾರೆ.

ವಿವಿಯ ವ್ಯಾಪ್ತಿಗೆ 276 ಪದವಿ ಕಾಲೇಜುಗಳಿವೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಯೋಗ, ಧ್ಯಾನ ತರಗತಿಗಳನ್ನು ಕಡ್ಡಾಯ ಮಾಡಲಾಗಿದೆ. ಪಠ್ಯಕ್ರಮ ಯಾವ ರೀತಿ ಇರಬೇಕು? ಯಾವ ರೀತಿಯಲ್ಲಿ ಈ ತರಗತಿ ನಡೆಸಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಕಾಲೇಜುಗಳಿಗೆ ಮಾರ್ಗಸೂಚಿ ರವಾನೆ ಮಾಡಲಾಗುವುದು. ಮುಂದಿನ ಬಾರಿಗೆ ಕಾಲೇಜಿನ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವೇಳೆ ವಿವಿ ಹೇಳಿದ ಎಲ್ಲ ಅಂಶಗಳನ್ನು ಕಾಲೇಜುಗಳು ಅನುಷ್ಠಾನ ಮಾಡುವುದು ಕಡ್ಡಾಯ. ಒಂದು ವೇಳೆ ಪಾಲಿಸದೇ ಇದ್ದರೆ ಅಂತಹ ಕಾಲೇಜುಗಳ ಮಾನ್ಯತೆ ನವೀಕರಿಸುವುದಿಲ್ಲ ಎಂದರು.

ಆನ್‌ನೈಲ್‌ನಲ್ಲೇ ಅಂಕಪಟ್ಟಿ:

ಬೆಂಗಳೂರು ವಿಶ್ವವಿದ್ಯಾಲಯ ಡಿಜಿಟಲ್‌ ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಅಂಕಪಟ್ಟಿದೊರಕಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ವಿವಿಯ ಮೌಲ್ಯಮಾಪನ ಕುಲಸಚಿವ ಸಿ.ಶಿವರಾಜು ಇದೇ ವೇಳೆ ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ತಾಂತ್ರಿಕ ನೆರವಿನೊಂದಿಗೆ ಬೆಂಗಳೂರಿನಲ್ಲಿ 10 ಕಡೆ ಡಿಜಿಟಲ್‌ ಮೌಲ್ಯಮಾಪನ ಕೇಂದ್ರವನ್ನು ತೆರೆಯಲಾಗಿದೆ. ಇದಕ್ಕಾಗಿ ವಿಟಿಯುಗೆ 25 ಲಕ್ಷ ರೂ. ಪಾವತಿಸಬೇಕಿದೆ. ಈ ಹೊಸ ವ್ಯವಸ್ಥೆಯಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾದ 15 ದಿನಗಳಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಬಹುದಾಗಿದೆ. ಇದನ್ನು 2019ನೇ ಸಾಲಿನ ದ್ವಿತೀಯ ಸೆಮಿಸ್ಟರ್‌ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಮೂಲಕ ಈ ಪದ್ಧತಿಯನ್ನು ಜಾರಿಗೆ ತರುತ್ತಿದೆ ಎಂದರು.

ವಿದ್ಯಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ ಮೂಲಕವೇ ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನ್ಯಾಷನಲ್‌ ಅಕಾಡೆಮಿ ಡೆಪಾಸಿಟ್ರಿ(ಎನ್‌ಎಡಿ) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2009ನೇ ಸಾಲಿನಿಂದ ಎಲ್ಲ ಅಂಕಪಟ್ಟಿಗಳನ್ನು ಈ ಎನ್‌ಎಡಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಮೊದಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಆನಂತರ ಆಧಾರ್‌ ಸಂಖ್ಯೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿ ಮುದ್ರಣದ ಪ್ರತಿಯನ್ನು ತೆಗೆದುಕೊಳ್ಳಬಹುದಾಗಿದೆ. ಈಗಾಗಲೇ 10 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆಂದು ತಿಳಿಸಿದರು.

 ಆನ್‌ಲೈನ್‌ಲ್ಲೇ ಪ್ರಶ್ನೆ ಪತ್ರಿಕೆ

ಬೆಂ.ವಿವಿ ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲೇ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಯನ್ನೂ ರವಾನಿಸುವ ಚಿಂತನೆ ನಡೆಸಿದೆ ಎಂದು ಇದೇ ವೇಳೆ ಶಿವರಾಜು ತಿಳಿಸಿದರು. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಸರಬರಾಜಿನಲ್ಲಿ ವಿಳಂಬ, ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಆನ್‌ಲೈನ್‌ ಮೂಲಕ ಪ್ರಶ್ನೆ ಪತ್ರಿಕೆ ರವಾನೆ ಮಾಡಲು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಜಾರಿಯಾಗಲಿದೆ ಎಂದು ಕುಲಪತಿ ವೇಣುಗೋಪಾಲ್‌ ಹೇಳಿದರು.