ಹುಬ್ಬಳ್ಳಿ: ರಾಷ್ಟ್ರಧ್ವಜ ಸಿದ್ಧಪಡಿಸುವವರಿಗೆ ಸಿಕ್ಕಿಲ್ಲ ಪ್ರೋತ್ಸಾಹ ಧನ
3 ಕೋಟಿಗೂ ಅಧಿಕ ಬರಬೇಕಿದೆ ಪ್ರೋತ್ಸಾಹ ಧನ| ಕೊರೋನಾ ಸಮಯದಲ್ಲಿ ನಾವು ಸಂಕಷ್ಟದಲ್ಲಿದ್ದೇವೆ ಈಗಲಾದರೂ ಬಿಡುಗಡೆ ಮಾಡಿ| ಆಗಸ್ಟ್ 15ರಂದು ಸರ್ಕಾರ ನಮಗೆ ಪೋತ್ಸಾಹ ಧನ ಬಿಡುಗಡೆ ಮಾಡಲು ಆಗ್ರಹ|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಆ.02): ರಾಷ್ಟ್ರಧ್ವಜ ತಯಾರಿಸುವ ಕಾರ್ಮಿಕರಿಗೆ ಕಳೆದ ಎರಡ್ಮೂರು ವರ್ಷಗಳಿಂದ ಸರ್ಕಾರ ಸಮರ್ಪಕವಾಗಿ ಪ್ರೋತ್ಸಾಹಧನ ನೀಡಿಲ್ಲ. ಕೊರೋನಾದಿಂದ ರಾಷ್ಟ್ರಧ್ವಜ ತಯಾರಿಕೆಯೂ ಸರಿಯಾಗಿ ಆಗುತ್ತಿಲ್ಲ.
ಪ್ರೋತ್ಸಾಹಧನವನ್ನೂ ಸರ್ಕಾರ ನೀಡುತ್ತಿಲ್ಲ. ಇದರಿಂದ ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂಥ ಸಂಕಷ್ಟ ಸಮಯದಲ್ಲಾದರೂ ಸರ್ಕಾರ ಹಣ ನೀಡಿ ಪುಣ್ಯ ಕಟ್ಟಿಕೊಳ್ಳಲಿ ಎಂಬ ಮನವಿ ಇಲ್ಲಿನ ಕಾರ್ಮಿಕರದ್ದು. ರಾಷ್ಟ್ರಧ್ವಜ ತಯಾರಿಕೆಯಲ್ಲಿ ಭಾರತೀಯ ಮಾಪಕ ಸಂಸ್ಥೆಯಿಂದ (ಬಿಐಎಸ್) ಮಾನ್ಯತೆ ಪಡೆದ ಏಕೈಕ ಸಂಸ್ಥೆ ಇಲ್ಲಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯಾಗಿದೆ. ಹೀಗಾಗಿ ಇಡೀ ದೇಶಕ್ಕೆ ರಾಷ್ಟ್ರಧ್ವಜ ಪೂರೈಕೆಯನ್ನು ಇದೇ ಕೇಂದ್ರದಿಂದ ಮಾಡಲಾಗುತ್ತದೆ.
ರಾಷ್ಟ್ರಧ್ವಜ ತಯಾರಿಕೆಗೆ ಬಟ್ಟೆ, ಲಡಿ (ದಾರ) ಸೇರಿದಂತೆ ಮತ್ತಿತರ ಸಾಮಗ್ರಿಗಳ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಬಟ್ಟೆನೇಯುವಿಕೆ, ಲಡಿ ತಯಾರಿಕೆ ಕೆಲಸ ಇದೇ ಸಂಸ್ಥೆಯ ಬಾಗಲಕೋಟೆ ಜಿಲ್ಲೆಯ ತುಳಸಿಗಿರಿ, ಗದ್ದನಕೇರಿ, ಬೇಲೂರು, ಜಾಲಿಹಾಳ ಕೇಂದ್ರಗಳಲ್ಲಿ ಆಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲೇ 22 ಕೇಂದ್ರಗಳಿವೆ. ಅಲ್ಲಿ ಬಟ್ಟೆನೇಯ್ಗೆ, ನೂಲು, ಲಡಿ ಎಲ್ಲವನ್ನೂ ತಯಾರಿಸಿಕೊಂಡ ಬಳಿಕ ಅವು ಹುಬ್ಬಳ್ಳಿಯ ಬೆಂಗೇರಿ ಕೇಂದ್ರಕ್ಕೆ ಬರುತ್ತವೆ. ಇಲ್ಲಿ ಅವುಗಳನ್ನು ಹೊಲಿದು ರಾಷ್ಟ್ರ ಧ್ವಜ ಸಿದ್ಧಪಡಿಸಲಾಗುತ್ತದೆ.
ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ
ಈ 23 ಕೇಂದ್ರಗಳಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ಮಹಿಳೆಯರು ವಿವಿಧ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಹಿಳೆಯರಿಗೆ ನಿರ್ದಿಷ್ಟಸಂಬಳ ಇರಲ್ಲ. ಅವರು ಮಾಡಿದ ಕೆಲಸದ ಆಧಾರದ ಮೇಲೆ ಅವರಿಗೆ ಸಂಬಳ ನೀಡಲಾಗುತ್ತೆ. ಅಂದರೆ ಪೀಸ್ ವರ್ಕ್ ಕೆಲಸ ಇವರದ್ದು.
ಪ್ರೋತ್ಸಾಹ ಧನ ಏಕೆ?:
ಖಚಿತವಾದ ಸಂಬಳ ಇಲ್ಲದ ಕಾರಣ ಇವರಿಗೆ 2015-16ರಲ್ಲಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಘೋಷಿಸಿತ್ತು. 1000 ಮೀಟರ್ ಲಡಿ ತಯಾರಿಸಿದರೆ. 3, 3 ಮೀಟರ್ ಬಟ್ಟೆ ನೇಯ್ದರೆ 7 ರು. ಪ್ರೋತ್ಸಾಹ ಧನವನ್ನು ಆಗಿನ ಸರ್ಕಾರ ನಿರ್ಧರಿಸಿತ್ತು. ಪ್ರೋತ್ಸಾಹವನ್ನು ಮೂರು ತಿಂಗಳಿಗೊಮ್ಮೆ ಕೊಡುವುದಾಗಿ ಸರ್ಕಾರ ತಿಳಿಸಿತ್ತು. ಇದು ಘೋಷಣೆಯಾಗಿದ್ದಷ್ಟೇ, 2016-17ರಲ್ಲಿ ಯಾವುದೇ ಬಗೆಯ ಪ್ರೋತ್ಸಾಹ ಧನವನ್ನು ಇವರಿಗೆ ಕೊಟ್ಟಿಲ್ಲ. 2017-18ರಲ್ಲಿ 2 ಬಾರಿ ಅಂದರೆ ಆರು ತಿಂಗಳ ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಇನ್ನೂ 2018-19ರಲ್ಲೂ ಎರಡು ಬಾರಿ ಪ್ರೋತ್ಸಾಹ ಧನ ನೀಡಲಾಗಿದೆ. 2019-20ರಲ್ಲೂ ಯಾವುದೇ ಪ್ರೋತ್ಸಾಹ ಧನ ನೀಡಿಲ್ಲ. ಪ್ರಸಕ್ತ 2020-21ರಲ್ಲಿ ಈಗಾಗಲೇ ಒಂದು ಬಾರಿ ನೀಡಬೇಕಿತ್ತು. ಅದನ್ನೂ ನೀಡಿಲ್ಲ. ಹೀಗೆ ಒಟ್ಟು ಈ 900 ಜನರಿಗೆ 3 ಕೋಟಿಗೂ ಅಧಿಕ ಹಣ ನೀಡುವುದನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಡುತ್ತಲೇ ಇಲ್ಲ ಎಂಬ ಆರೋಪ ಇಲ್ಲಿ ಕೆಲಸ ಮಾಡುವ ಮಹಿಳೆಯರದ್ದು.
ಹಲವಾರು ಬಾರಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದೀಗ ಕೊರೋನಾದಿಂದಾಗಿ ಇತ್ತ ರಾಷ್ಟ್ರಧ್ವಜದ ತಯಾರಿಕೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಬೇಡಿಕೆಯೂ ಬಂದಿಲ್ಲ. ಹೀಗಾಗಿ ನಮಗೆ ಕೆಲಸ ಸಿಗುವುದು ಅಷ್ಟಕಷ್ಟೇ ಎಂಬಂತಾಗಿದೆ. ಹಿಂದಿನ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ. ಇದರಿಂದ ನಮ್ಮ ಬದುಕು ಸಾಗಿಸುವುದು ದುಸ್ತರವೆಂಬಂತಾಗಿದೆ. ಆದ್ದರಿಂದ ತಕ್ಷಣ ಪ್ರೋತ್ಸಾಹಧನ ನೀಡುವಂತೆ ಮಹಿಳೆಯರು ಒತ್ತಾಯಿಸುತ್ತಿದ್ದಾರೆ.
ಕೊರೋನಾ ಸಮಯದಲ್ಲಿ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಸರ್ಕಾರ ಘೋಷಿಸಿದೆ. ನಮಗೆ ಯಾವ ಪ್ಯಾಕೇಜ್ ಅಗತ್ಯವಿಲ್ಲ. ಆದರೆ ಆಗಸ್ಟ್ 15ರಂದು ಸರ್ಕಾರ ನಮಗೆ ಪೋತ್ಸಾಹ ಧನ ಬಿಡುಗಡೆ ಮಾಡಬೇಕೆಂದು ಆಗ್ರಹ ಇಲ್ಲಿನವರದ್ದು.
ಇಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಕಳೆದ ಒಂದುವರೆ ವರ್ಷದಿಂದ ಬಿಡುಗಡೆ ಮಾಡಿಲ್ಲ. ಇಲ್ಲಿ ಕೆಲಸ ಮಾಡುವ 900 ಜನರಿಗೆ ಸರಿಸುಮಾರು 3 ಕೋಟಿ ಬಿಡುಗಡೆ ಮಾಡಬೇಕಿದೆ. ಅದನ್ನು ಬಿಡುಗಡೆ ಮಾಡಿದರೆ ಅನುಕೂಲವಾಗುತ್ತೆ ಎಂದು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ತಿಳಿಸಿದ್ದಾರೆ.