ರಾಜಕೀಯ ತಂತ್ರ, ಕುತಂತ್ರ: ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್‌ ಹಗ್ಗ ಜಗ್ಗಾಟ..!

ತಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್‌ ಹಗ್ಗ ಜಗ್ಗಾಟ| ಇಂದು ಯಲಬುರ್ಗಾ ತಾಪಂ ಉಪಾಧ್ಯಕ್ಷರ ಚುನಾವಣೆ| ಎಲ್ಲ ಸದಸ್ಯರಿಗೆ ವಿಪ್‌ ಜಾರಿ| ತಾಲೂಕು ಪಂಚಾಯಿತಿ 13 ಜನ ಸದಸ್ಯ ಬಲದಲ್ಲಿ 7 ಕಾಂಗ್ರೆಸ್‌, 6 ಬಿಜೆಪಿ ಸದಸ್ಯರಿದ್ದಾರೆ|

Yelburga Taluk Panchayat Vice President Election Will Be Held on Today

ಶಿವಮೂರ್ತಿ ಇಟಗಿ

ಯಲಬುರ್ಗಾ(ಜು.23): ಸ್ಥಳೀಯ ತಾಲೂಕು ಪಂಚಾಯಿತಿಯಲ್ಲಿ ತೆರವಾಗಿರುವ ಉಪಾಧ್ಯಕ್ಷ ಸ್ಥಾನದ ಚುನಾವಣೆ ಜು. 23ರಂದು ನಿಗದಿಯಾಗಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ತಾಲೂಕಾಧ್ಯಕ್ಷರು ತಮ್ಮ ತಮ್ಮ ಪಕ್ಷದ ಸದಸ್ಯರಿಗೆ ವಿಪ್‌ ಜಾರಿಗೊಳಿಸಲು ಮುಂದಾಗಿದ್ದಾರೆ. ವಿಪ್‌ ನಿಯಮ ಉಲ್ಲಂಘನೆ ಮಾಡುವ ಸದಸ್ಯರ ವಿರುದ್ಧ ಉಚ್ಚಾಟನೆ ಮಾಡುವ ಅಸ್ತ್ರವನ್ನು ಪ್ರಯೋಗಿಸಲು ಎರಡು ಪಕ್ಷಗಳ ಅಧ್ಯಕ್ಷರು ಮುಂದಾಗಿದ್ದು, ರಾಜಕೀಯ ಬೆಳವಣಿಗೆಗೆ ತಾಪಂ ಉಪಾಧ್ಯಕ್ಷ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮಾಟಲದಿನ್ನಿ ತಾಪಂ ಸದಸ್ಯೆ ಹಾಗೂ ಹಾಲಿ ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪ ಗೌಡ್ರ ಹಾಗೂ ಹಿರೇವಂಕಲಕುಂಟಾ ತಾಪಂ ಸದಸ್ಯ ಹಾಗೂ ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ಟು ಪಾಲಿಗೆ ವಿಪ್‌ ಜಾರಿ ಅಸ್ತ್ರ ಬಿಸಿತುಪ್ಪವಾಗಿ ಪರಿಣಮಿಸಿದೆ.

ಕೊಪ್ಪಳ: ಹುಲಿಗಿ ರಸಗೊಬ್ಬರ ಕಾರ್ಖಾನೆ ಬಂದ್‌..!

ಲಕ್ಷ್ಮೀ ಅವರು ಕಾಂಗ್ರೆಸ್‌ ಸದಸ್ಯೆ ಆದರೆ, ಹಿಂದೆ ಅಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಸದಸ್ಯರ ಬೆಂಬಲ ಪಡೆದ ಅಧ್ಯಕ್ಷರಾಗಿದ್ದಾರೆ. ರುದ್ರಪ್ಪ ಮರಕಟ್ಟಿಬಿಜೆಪಿ ಸದಸ್ಯ. ಆದರೆ ಕಾಂಗ್ರೆಸ್‌ ಸದಸ್ಯರ ಬೆಂಬಲದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಮೂಲ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಅಥವಾ ರಾಜಕೀಯ ಸಂಕಷ್ಟಕಾಲದಲ್ಲಿ ಬಾಹ್ಯ ಬೆಂಬಲ ಕೊಟ್ಟ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎನ್ನುವ ಅನಿವಾರ್ಯತೆಯನ್ನು ವಿಪ್‌ ಸೃಷ್ಟಿಮಾಡಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ.

ವಿಪ್‌ ಉಲ್ಲಂಘನೆ ಹಾಗೂ ನಿಯಮ ಪಾಲನೆ ಮಾಡಿದರೆ ಮುಂದಿನ ದಿನಗಳಲ್ಲಿ ಆಗುವ ರಾಜಕೀಯ ಲಾಭ ನಷ್ಟಗಳ ಬಗ್ಗೆ ಈ ಇಬ್ಬರು ಸದಸ್ಯರು ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದಾರೆ. ತಜ್ಞರು ಕೂಡ ಅಂತಿಮ ಆಯ್ಕೆಯನ್ನು ಸದಸ್ಯರ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ ಎನ್ನಲಾಗಿದೆ.

ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಅಧ್ಯಕ್ಷೆ ಲಕ್ಷ್ಮೀ ಗೌಡ್ರರನ್ನು ಕಾಂಗ್ರೆಸ್‌ ಮುಖಂಡರ ನಿಯೋಗ ಖುದ್ದಾಗಿ ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ಪರ ಬೆಂಬಲಿಸುವಂತೆ ಮನವಿ ಮಾಡಿಕೊಂಡು ವಿಪ್‌ ಜಾರಿ ಪತ್ರಕ್ಕೆ ಸಹಿ ಪಡೆದುಕೊಳ್ಳುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಿಜೆಪಿಯವರು ಕೂಡ ರುದ್ರಪ್ಪ ಮರಕಟ್ಟಿಗೆ ವಿಪ್‌ ಜಾರಿ ಮಾಡುವುದಕ್ಕೆ ಮುಂದಾಗಿದ್ದಾರೆ. ವಿಪ್‌ ಉಲ್ಲಂಘನೆ ಮಾಡಿ ಪಕ್ಷದಿಂದ ಉಚ್ಚಾಟನೆಗೆ ಬಲಿಯಾಗದೆ ಇರುವ ಸ್ಥಾನವನ್ನು ಅಧಿಕಾರ ಇರುವಷ್ಟುದಿನಗಳ ಕಾಲ ಭದ್ರವಾಗಿಸಿಕೊಂಡು ಅಧಿಕಾರ ಮುಗಿದ ಬಳಿಕ ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಇಷ್ಟವಾದ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುವುದಕ್ಕೆ ರುದ್ರಪ್ಪ ಮರಕಟ್ಟು ಹಾಗೂ ಲಕ್ಷ್ಮೀಗೌಡ್ರ ದೃಢ ನಿರ್ಧಾರ ಮಾಡಿದ್ದಾರೆ ಎನ್ನುವ ಮಾತುಗಳು ಅವರ ಬೆಂಬಲಿಗರಿಂದ ಕೇಳಿ ಬಂದಿವೆ.

ತಾಲೂಕು ಪಂಚಾಯಿತಿ 13 ಜನ ಸದಸ್ಯ ಬಲದಲ್ಲಿ 7 ಕಾಂಗ್ರೆಸ್‌, 6 ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್‌ ಪಕ್ಷ ಈ ಸ್ಥಾನವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು. ಕೊನೆ ಗಳಿಗೆಯಲ್ಲಿ ಕೈಕೊಟ್ಟರೆ ಪಕ್ಷ ವಿರೋಧಿ ಚಟುವಟಿಕೆ ಕಾಯ್ದೆ ಮೂಲಕ ಅಂತವರ ಮೇಲೆ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಆದರೆ ಬಿಜೆಪಿಯವರು ಕೂಡ ಇದಕ್ಕೆ ಹೊರತಾಗಿಲ್ಲ. ಎರಡು ಪಕ್ಷದವರು ಈ ಸ್ಥಾನ ಪಡೆಯುವುದಕ್ಕಾಗಿ ರಾಜಕೀಯ ತಂತ್ರ, ಕುತಂತ್ರಗಳು ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.
 

Latest Videos
Follow Us:
Download App:
  • android
  • ios