Asianet Suvarna News Asianet Suvarna News

ಕೊಪ್ಪಳ: ಹುಲಿಗಿ ರಸಗೊಬ್ಬರ ಕಾರ್ಖಾನೆ ಬಂದ್‌..!

ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಆದೇಶ| ಹುಲಿಗಿ ಗ್ರಾಮಸ್ಥರ ಹೋರಾಟಕ್ಕೆ ಸಿಕ್ಕ ಫಲ| ಕಾರ್ಖಾನೆಯು ಜನನಿಬಿಡ ಪ್ರದೇಶದಲ್ಲಿದ್ದು ಇದು ಪ್ರತಿವರ್ಷ 1,05,000 ಟನ್‌ಗಳಷ್ಟು ರಸಗೊಬ್ಬರ ಉತ್ಪಾದನೆ| ಇದರಿಂದ ಹುಲಿಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ|

Fertilizer Factory Shut Down in Huligi in Koppal District
Author
Bengaluru, First Published Jul 23, 2020, 8:50 AM IST

ಮುನಿರಾಬಾದ್‌(ಜು.23): ಇಲ್ಲಿನ ಸಮೀಪದ ಹುಲಿಗಿ ಗ್ರಾಮದಲ್ಲಿರುವ ಕೋರಮಂಡಲ್‌ ಅಂತಾರಾಷ್ಟ್ರೀಯ ರಸಗೊಬ್ಬರ ಕಾರ್ಖಾನೆಯನ್ನು ತಕ್ಷಣದಿಂದ ಬಂದ್‌ ಮಾಡಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ಹೊರಡಿಸಿದೆ.

ಆದೇಶದ ಪ್ರತಿಯು ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಇದಲ್ಲದೇ ಕೊಪ್ಪಳ ಜಿಲ್ಲಾಧಿಕಾರಿಗಳು ಕಾರ್ಖಾನೆ ತಕ್ಷಣ ಸೀಜ್‌ ಮಾಡಬೇಕು ಹಾಗೂ ಜೆಸ್ಕಾಂ ಕಂಪನಿಯ ಕಾರ್ಯಪಾಲಕ ಅಭಿಯಂತರರು ಕಾರ್ಖಾನೆಗೆ ಮುಂದಿನ ಆದೇಶದವರೆಗೆ ವಿದ್ಯುತ್‌ ಸರಬರಾಜನ್ನು ಸ್ಥಗಿತಗೋಳಿಸಬೇಕೆಂದು ನಿರ್ದೇಶನ ನೀಡಿರುತ್ತಾರೆ.

ಕಾರ್ಖಾನೆಯು ಜನನಿಬಿಡ ಪ್ರದೇಶದಲ್ಲಿದ್ದು ಇದು ಪ್ರತಿವರ್ಷ 1,05,000 ಟನ್‌ಗಳಷ್ಟು ರಸಗೊಬ್ಬರವನ್ನು ಉತ್ಪಾದನೆ ಮಾಡುತ್ತಿದ್ದು, ಇದರಿಂದ ಹುಲಿಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯವಾಗುತ್ತಿದ್ದು, ಇಂತಹ ಕಾರ್ಖಾನೆಗಳು ಜನವಸತಿ ಪ್ರದೇಶದಲ್ಲಿ ಇರಬಾರದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಿಸಿದ ತಾಂತ್ರಿಕ ಸಲಹಾ ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕಾರ್ಖಾನೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಲಹೆಯನ್ನು ನೀಡಿತ್ತು. ಆದರೆ ಇದಾವುದಕ್ಕೂ ಜಪ್ಪಯ್ಯ ಎನ್ನದ ಕಾರ್ಖಾನೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮುಚ್ಚುವಂತೆ ಆದೇಶ ನೀಡಿದೆ.

ಕೊಪ್ಪಳ: ತುಂಗಭದ್ರಾ ಎಡದಂಡೆ ನಾಲೆಗೆ 25ರಿಂದ ನೀರು

ಹುಲಿಗಿ ಗ್ರಾಮಸ್ಥರ ಹೋರಾಟವೇ ಕಾರಣ

ರಸಗೊಬ್ಬರ ಕಾರ್ಖಾನೆಯು ತಮ್ಮ ಊರಿನ ಪಕ್ಕದಲ್ಲೆ ಇದ್ದು ಇದರಿಂದ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಆಗುತ್ತಿರುವುದರಿಂದ ಹುಲಿಗಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಖಾನೆಯ ಮುಂದೆ ಹಲವು ಬಾರಿ ಪ್ರತಿಭಟನೆ ನಡೆಸಿದರು. ಇದರಿಂದ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಹುಲಿಗಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಖಾಜಾವಲಿ ಜವಳಿ, ಕಿಶೋರ ಕುಮಾರ, ಜಿಯಾಸಾಬ್‌ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಕೋರಮಂಡಲ್‌ ಅಂತಾರಾಷ್ಟ್ರೀಯ ರಸಗೊಬ್ಬರ ಸಂಸ್ಥೆಯ ವಿರುದ್ಧ ದೂರು ನೀಡಿದರು. ಆಗ ಅಧ್ಯಕ್ಷರು 2017ರಲ್ಲಿ ಒಂದು ತಾಂತ್ರಿಕ ಸಲಹಾ ಸಮಿತಿಯನ್ನು ನೇಮಕ ಮಾಡಿ ಕಾರ್ಖಾನೆಗೆ ಭೇಟಿ ನೀಡಿ ವರದಿಯನ್ನು ನೀಡುವಂತೆ ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ನೇಮಕ ಮಾಡಿದ ತಾಂತ್ರಿಕ ಸಲಹಾ ಸಮಿತಿಯ ಇಬ್ಬರು ಸದಸ್ಯರು ಕಾರ್ಖಾನೆಗೆ ಅಕ್ಟೋಬರ್‌ 2, 2017ರಲ್ಲಿ ಭೇಟಿ ನೀಡಿದಾಗ ಅಲ್ಲಿ ಅವರ ಗಮನಕ್ಕೆ ಅನೇಕ ಲೋಪಗಳು ಕಂಡು ಬಂದವು. ಅವರು ಇದನ್ನು ಅಧ್ಯಕ್ಷರ ಗಮನಕ್ಕೆ ತಂದರು.

ಇತ್ತಕಡೆ ಗ್ರಾಮಸ್ಥರಿಂದ ಕಾರ್ಖಾನೆಯ ವಿರುದ್ಧ ಭಾರೀ ಪ್ರಮಾಣದಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಫೆಬ್ರವರಿ 2018ರಲ್ಲಿ ವಾಯುಮಾಲಿನ್ಯದ ವಲಯ ಅಧಿಕಾರಿ ಕಾರ್ಖಾನೆಗೆ ಭೇಟಿ ನೀಡಿ ತಪಾಸಣೆ ಮಾಡಿದರು. ಇದರ ನಂತರ ಮಾ. 9, 2018ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೇ ಖುದ್ದಾಗಿ ಕಾರ್ಖಾನೆಗೆ ಭೇಟಿ ನೀಡಿದರು. ನಂತರ ಜೂನ್‌ 2, 2018 ರಂದು ಪುನಃ ವಾಯುಮಾಲಿನ್ಯದ ವಲಯ ಅಧಿಕಾರಿ ಕಾರ್ಖಾನೆಗೆ 2ನೇ ಬಾರಿ ಭೇಟಿ ಮಾಡಿ ತಪಾಸಣೆ ಮಾಡಿದರು. ಆಗಸ್ಟ್‌ 24, 2018ರಲ್ಲಿ ಕಾರ್ಖಾನೆಗೆ ನೋಟಿಸ್‌ ನೀಡಲಾಯಿತು. ಕಾರ್ಖಾನೆಯಿಂದ ಬಂದ ಉತ್ತರ ಸಮಪರ್ಕವಾಗಿರದ ಹಿನ್ನೆಲೆಯಲ್ಲಿ ಮಾ. 28, 2019ಕ್ಕೆ ಕಾರ್ಖಾನೆಗೆ ಶೋಕಾಸ್‌ ನೋಟಿಸ್‌ ನೀಡಲಾಯಿತು. ಕಾರ್ಖಾನೆಯು ಏಪ್ರಿಲ್‌ 14, 2019ಕ್ಕೆ ಇದಕ್ಕೆ ಉತ್ತರ ನೀಡಿತ್ತು. ಮತ್ತೆ ಪುನಃ ಕಾರ್ಖಾನೆಗೆ ವಲಯ ವಾಯುಮಾಲಿನ್ಯದ ಅಧಿಕಾರಿ ಮೇ 14, 2019ರಂದು 3ನೇ ಬಾರಿ ಭೇಟಿ ನೀಡಿ ತಪಾಸಣೆ ಮಾಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿದ ಸಲಹೆಯನ್ನು ಕಾರ್ಖಾನೆಯು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ ಕಾರ್ಖಾನೆಯು ಜನವಸತಿ ಪ್ರದೇಶದಲ್ಲಿ ಇದ್ದು ಕಾರ್ಖಾನೆಯು ಬಿಡುವ ಹೊಗೆಯು ಗ್ರಾಮಸ್ಥರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಗಮನದಲ್ಲಿಟ್ಟುಕೊಂಡು ಕಾರ್ಖಾನೆಯನ್ನು ಬಂದ ಮಾಡಲಾಗಿದೆ.

ಪ್ರತಿಕ್ರಿಯೆಗೆ ನಿರಾಕರಣೆ

ಕಾರ್ಖಾನೆಯ ಜನಸಂಪರ್ಕ ವ್ಯವಸ್ಥಾಪಕ ಚೇತನ್‌ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಕಂಪನಿಯ ಸಣ್ಣ ವ್ಯಕ್ತಿಯಾಗಿರುವುದರಿಂದ ಇದರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ಇದು ಗ್ರಾಮಸ್ಥರ ಹೋರಾಟಕ್ಕೆ ದಕ್ಕಿದ ಜಯ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕುಮಾರ್‌ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯಿತಿ ಎಷ್ಟುಶಕ್ತಿಶಾಲಿ ಎಂಬುದನ್ನು ಈ ಪ್ರಕರಣ ತೋರಿಸಿ ಕೊಟ್ಟಿದೆ ಎಂದರು.
 

Follow Us:
Download App:
  • android
  • ios