ರೇಷ್ಮೆನಗರಿ ರಾಮನಗರದಲ್ಲಿ ಯಾತ್ರೆ, ಸಮಾವೇಶ ಪರ್ವ
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗರಿಗೆದರಿ ನಿಂತಿರುವ ರಾಜಕೀಯ ಪಕ್ಷಗಳು ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಸಾಲು ಸಾಲು ಸಭೆಗಳು, ರಥಯಾತ್ರೆಗಳ ಜೊತೆಗೆ ಬೃಹತ್ ಸಮಾವೇಶಗಳನ್ನು ಆಯೋಜಿಸಲು ಅಣಿಯಾಗುತ್ತಿವೆ.
ಎಂ.ಅಫ್ರೋಜ್ ಖಾನ್
ರಾಮನಗರ : ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗರಿಗೆದರಿ ನಿಂತಿರುವ ರಾಜಕೀಯ ಪಕ್ಷಗಳು ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಸಾಲು ಸಾಲು ಸಭೆಗಳು, ರಥಯಾತ್ರೆಗಳ ಜೊತೆಗೆ ಬೃಹತ್ ಸಮಾವೇಶಗಳನ್ನು ಆಯೋಜಿಸಲು ಅಣಿಯಾಗುತ್ತಿವೆ.
ಜೆಡಿಎಸ್ ವರಿಷ್ಠ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಪ್ರತಿನಿಧಿಸುವ ಕಾರಣ ರಾಮನಗರ ಜಿಲ್ಲೆಯು ಹಳೇ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಸಾಕಷ್ಟುಗಮನ ಸೆಳೆಯುತ್ತಿದೆ.
ರಾಮನಗರದ ಮೂಲಕವೇ ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷದ ಪ್ರಭಾವದ ಮುದ್ರೆಯೊತ್ತಲು, ಮತದಾರರ ಮನದೊಳಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಾಲೀಮು ನಡೆಸುತ್ತಿವೆ. ಪ್ರಮುಖ ಮೂರು ಪಕ್ಷಗಳು ಸದ್ಯ ರಾಮನಗರವನ್ನೂ ಕೇಂದ್ರವಾಗಿರಿಸಿಕೊಂಡು ಚುನಾವಣಾ ಪೂರ್ವಭಾವಿ ಪ್ರಚಾರ ಆರಂಭಿಸಿದ್ದಾರೆ.
ಜೆಡಿಎಸ್ - ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ರವರು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ತಮ್ಮ ಸಾಮಥ್ಯರ್ ಸಾಬೀತು ಪಡಿಸಬೇಕಾಗಿರುವ ಕಾರಣ ಚುನಾವಣೆ ಪ್ರತಿಷ್ಠೆಯಾಗಿದೆ.
ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ರವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಸ್ವ ಕ್ಷೇತ್ರಗಳಲ್ಲಿಯೇ ಕಟ್ಟಿಹಾಕುವ ರಣತಂತ್ರವನ್ನು ಬಿಜೆಪಿ ನಾಯಕರು ರೂಪಿಸುತ್ತಿದ್ದಾರೆ. ಮೂರು ಪಕ್ಷಗಳು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸಾಲು ಸಾಲು ರಥಯಾತ್ರೆಗಳು, ಪಾದಯಾತ್ರೆಗಳು, ಸರಣಿ ಸಮಾವೇಶಗಳು, ಜಾತಿಗೊಂದು ಸಮುದಾಯಕ್ಕೊಂದು ಸಭೆಗಳನ್ನು ಆಯೋಜಿಸುತ್ತಿವೆ. ಆ ಮೂಲಕ ಜಿಲ್ಲೆಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ನಾಯಕರು ಸನ್ನದ್ಧರಾಗುತ್ತಿದ್ದಾರೆ.
ಪಾದಯಾತ್ರೆ ಬಳಿಕ ಪ್ರಜಾಧ್ವನಿಯಾತ್ರೆ:
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ವರ್ಷದ ಹಿಂದೆಯೇ ಚುನಾವಣಾ ತಾಲೀಮು ಆರಂಭಿಸಿತ್ತು. ಪಕ್ಷ ಸಂಘಟನೆಯ ಉದ್ದೇಶದಿಂದ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮೇಕೆದಾಟಿನಿಂದ ಬೆಂಗಳೂರುವರೆಗೆ ಎರಡು ಹಂತಗಳಲ್ಲಿ ಐತಿಹಾಸಿಕ ಪಾದಯಾತ್ರೆ ನಡೆಸಿತ್ತು. ಮೊದಲ ಹಂತದಲ್ಲಿ ಜನವರಿ 9ರಿಂದ 12ವರೆಗೆ ನಡೆದಿದ್ದ ಪಾದಯಾತ್ರೆ ಕೋವಿಡ್ ಕಾರಣದಿಂದಾಗಿ ಹೈಕೋರ್ಚ್ ಎಚ್ಚರಿಕೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆನಂತರ ಎರಡನೇ ಹಂತದ ಪಾದಯಾತ್ರೆ ಫೆ.27ರಿಂದ ಆರಂಭವಾಗಿ ಮಾಚ್‌ರ್3ರವರೆಗೆ ನಡೆದಿತ್ತು.
ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ರಾಮನಗರ ಜಿಲ್ಲೆಗೆ ಪ್ರವೇಶಿಸುತ್ತಿದೆ. ಮಾಚ್‌ರ್ 10ರಂದು ಮಾಗಡಿ ಕ್ಷೇತ್ರ ವ್ಯಾಪ್ತಿಯ ಜಾಲಮಂಗಲ, ಮಾಗಡಿ ಪಟ್ಟಣ ಹಾಗೂ ಕುದೂರಿನಲ್ಲಿ ಸಂಚರಿಸಲಿದೆ. ಮಾ.11ರಂದು ರಾಮನಗರ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ - ಮರಳವಾಡಿ, ರಾಮನಗರ ಟೌನ್ ನಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಸ್ವಾಗತಿಸಿಕೊಳ್ಳಲು ಕಾಂಗ್ರೆಸ್ ಪಾಳಯದಲ್ಲಿ ಸಿದ್ಧತೆಗಳು ನಡೆದಿವೆ.
ಜಲಧಾರೆ ತರುವಾಯ ರೋಡ್ ಶೋ:
ಇನ್ನು ಜೆಡಿಎಸ್ ನಾಯಕರು ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನಾಲ್ಕೈದು ತಿಂಗಳಿಂದಲೇ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಜನತಾ ಜಲಧಾರೆ ಬಳಿಕ ಪಂಚರತ್ನ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ವಿಶ್ವಾಸ ಗಳಿಸಲು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಈಗ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಮೈಸೂರಿನಲ್ಲಿ ಆಯೋಜಿಸುತ್ತಿದೆ. ಕುಂಬಳಗೋಡಿನಿಂದ ಮೈಸೂರಿನವರೆಗೆ ಸುಮಾರು 100 ಕಿ.ಮೀ ಬೃಹತ್ ರೋಡ್ ಶೋನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ತೆರೆದ ವಾಹನದಲ್ಲಿ ಕರೆದೊಯ್ದು ಮೈಸೂರು ಸಮಾವೇಶವನ್ನು ಐತಿಹಾಸಿಕವನ್ನಾಗಿ ಮಾಡುವುದು ಜೆಡಿಎಸ್ ನಾಯಕರು ಉದ್ದೇಶವಾಗಿದೆ.
ಪಾದಯಾತ್ರೆ ಬಳಿಕ ವಿಜಯ ಸಂಕಲ್ಪ ಯಾತ್ರೆ:
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸ ಕಾರ್ಯತಂತ್ರ ಹೆಣೆಯುತ್ತಲೇ ಇದೆ. ಒಂದೊಂದು ಲೋಕಸಭಾ ಕ್ಷೇತ್ರಗಳನ್ನು ಒಬ್ಬೊಬ್ಬರು ಕೇಂದ್ರ ಸಚಿವರಿಗೆ ಜವಾಬ್ದಾರಿ ವಹಿಸಿತ್ತು. ಅದರಂತೆ ಕಳೆದ ಆಗಸ್ಟ್ ನಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಹಾರೋಹಳ್ಳಿ ಮತ್ತು ರಾಮನಗರ ಭಾಗಗಳಿಗೆ ಭೇಟಿ ನೀಡಿ ಪಾದಯಾತ್ರೆ ನಡೆಸಿದ್ದರು. ಈಗಷ್ಟೇ ಕಂದಾಯ ಸಚಿವ ಆರ್ .ಅಶೋಕ್ ನೇತೃತ್ವದಲ್ಲಿ ವಿಜಯಸಂಕಲ್ಪ ರಥಯಾತ್ರೆ ಎರಡು ದಿನಗಳ ಕಾಲ ಚನ್ನಪಟ್ಟಣ , ರಾಮನಗರ , ಮಾಗಡಿ ಹಾಗೂ ಕನಕಪುರ ಕ್ಷೇತ್ರಗಳಲ್ಲಿ ಸಂಚರಿಸಿ ತೆರಳಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರು, ಪಕ್ಷದ ಪ್ರಭಾವಿ ನಾಯಕರನ್ನು ಕರೆತಂದು ಕಾರ್ಯಕ್ರಮ ಆಯೋಜಿಸುವ ಲೆಕ್ಕಾಚಾರಗಳು ಕಮಲ ಪಾಳಯದಲ್ಲಿ ನಡೆದಿವೆ.
ಜಿಲ್ಲೆಯಲ್ಲಿ ರಾಜಕೀಯ ಕಸರತ್ತು
ರಾಮನಗರ ಜಿಲ್ಲೆಯಲ್ಲಿ ಉತ್ತಮ ಸಾಧನೆ ತೋರಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿವೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೇಂದ್ರ-ರಾಜ್ಯಗಳ ಸಚಿವರು, ಪಕ್ಷದ ನಾಯಕರು ರಾಮನಗರದತ್ತ ಮುಖ ಮಾಡುತ್ತಿದ್ದಾರೆ. ವಿವಿಧ ಅಭಿವೃದ್ಧಿ, ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ, ಫಲಾನುಭವಿಗಳಿಗೆ ಸೌಲಭ್ಯ, ಹಕ್ಕುಪತ್ರ ವಿತರಣೆ, ಸರ್ಕಾರದ ವಿರುದ್ಧ ಆರೋಪ, ಜನಾಕ್ರೋಶ , ಪ್ರಜಾಧ್ವನಿ, ಪಂಚರತ್ನ ಹೀಗೆ ವಿವಿಧ ಹೆಸರಲ್ಲಿ ಸಮಾವೇಶ, ಯಾತ್ರೆಗಳ ಮೆರವಣಿಗೆ ಜೋರಾಗಿಯೇ ಸದ್ದು ಮಾಡತೊಡಗಿದೆ.