ಯಶವಂತಪುರ ರೈಲ್ವೆ ಸ್ಟೇಷನ್ಗೂ ಏರ್‌ಪೋರ್ಟ್ ಲುಕ್
ಬೈಯಪ್ಪನಹಳ್ಳಿ ನಿಲ್ದಾಣದಂತೆ ಯಶವಂಪುರ ರೈಲು ನಿಲ್ದಾಣಕ್ಕೂ ಆಧುನಿಕತೆ ಮೆರುಗು| ಬಸ್ ಬೇ, ಬೈಟಿಂಗ್ ಹಾಲ್ ಸೇರಿ ಹಲವು ಸೌಲಭ್ಯ| 3 ತಿಂಗಳಲ್ಲಿ ಕಾಮಗಾರಿ ಪೂರ್ಣ|

ಬೆಂಗಳೂರು(ಅ.27): ನಗರದ ಎರಡನೇ ಹೆಚ್ಚು ಪ್ರಯಾಣಿಕರ ದಟ್ಟಣೆಯ ರೈಲು ನಿಲ್ದಾಣವಾದ ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು, ಜನವರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ನೈಋುತ್ಯ ರೈಲ್ವೆಯು 11.50 ಕೋಟಿ ರು. ವೆಚ್ಚದಲ್ಲಿ ನಿಲ್ದಾಣ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ನಿಲ್ದಾಣದ ಹೊರ ಆವರಣ ಮರು ವಿನ್ಯಾಸ, ಆ್ಯಂಪಿಥಿಯೇಟರ್, ನಿಲ್ದಾಣದ ಸಂಪರ್ಕಿಸುವ ರಸ್ತೆಗಳ ಅಗಲೀಕರಣ, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ನಿಲ್ದಾಣ, ಬಸ್ ಬೇ, ವೈಟಿಂಗ್ ಹಾಲ್ ಅಭಿವೃದ್ಧಿ ಸೇರಿದಂತೆ ನಿಲ್ದಾಣಕ್ಕೆ ಆಧುನಿಕತೆಯ ಮೆರಗು ನೀಡಲಾಗುತ್ತಿದೆ.
ಏರ್‌ಪೋರ್ಟ್ ಮಾದರಿ ಚಾವಣಿ:
ರೈಲು ನಿಲ್ದಾಣದ ಮುಖ್ಯ ಕಟ್ಟಡದ ಚಾವಣಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾವಣಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸುಮಾರು 200 ಮೀಟರ್ ಉದ್ದದ ಚಾವಣಿ ಇದಾಗಿದೆ. ನಿಲ್ದಾಣದ ಆವರಣದಲ್ಲಿ ಬಸ್ ಬೇ ನಿರ್ಮಿಸುತ್ತಿದ್ದು, ಬಿಎಂಟಿಸಿ ಬಸ್‌ಗಳು ನೇರವಾಗಿ ಟರ್ಮಿನಲ್ ಬಳಿಗೆ ಬರಲಿದೆ. ಇದರಿಂದ ಪ್ರಯಾಣಿಕರು ಕೆಲವೇ ನಿಮಿಷಗಳಲ್ಲಿ ನಿಲ್ದಾಣ ಪ್ರವೇಶಿಸಿ, ರೈಲು ಹಿಡಿಯಲು ಅನುಕೂಲವಾಗಲಿದೆ. ಯಶವಂತಪುರ ಮೆಟ್ರೋ ರೈಲು ನಿಲ್ದಾಣದ ಸಂಪರ್ಕವೂ ಸುಲಭವಾಗಲಿದೆ.
ಬೆಂಗಳೂರಿನ 3ನೇ ಬೃಹತ್ ರೈಲು ನಿಲ್ದಾಣ ಸಿದ್ಧ
ದಟ್ಟಣೆ ಸಮಸ್ಯೆಗೆ ಪರಿಹಾರ:
ಕೆಎಸ್‌ಆರ್ ರೈಲು ನಿಲ್ದಾಣದ ಬಳಿಕ ನಗರದ ಎರಡನೇ ಅತಿದೊಡ್ಡ ರೈಲು ನಿಲ್ದಾಣವಾಗಿರುವ ಯಶವಂತಪುರ ರೈಲು ನಿಲ್ದಾಣದಲ್ಲಿ ಆರು ಪ್ಲಾಟ್ ಫಾರ್ಮ್‌ಗಳಿವೆ. ಸದಾ ಪ್ರಯಾಣಿಕರ ಹಾಗೂ ರೈಲು ಸಂಚಾರ ದಟ್ಟಣೆಯಿಂದ ಕೂಡಿದೆ. ಇದೀಗ ಬೈಯಪ್ಪನಹಳ್ಳಿ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.
ಈ ನೂತನ ಟರ್ಮಿನಲ್ ಏಳು ಪ್ಲಾಟ್ ಫಾರ್ಮ್ ಹೊಂದಿದೆ. ಇದರಿಂದ ಕೆಎಸ್‌ಆರ್ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದಲ್ಲಿನ ರೈಲು ಹಾಗೂ ಪ್ರಯಾಣಿಕರ ಒತ್ತಡ ಸಮಸ್ಯೆ ಕಡಿಮೆಯಾಗಲಿದೆ. ಈ ಎರಡೂ ರೈಲು ನಿಲ್ದಾಣಗಳಿಂದ ದೂರದ ಊರುಗಳಿಗೆ ಸಂಚರಿಸುವ ಸುಮಾರು 60ಕ್ಕೂ ಅಧಿಕ ರೈಲುಗಳನ್ನು ಬೈಯಪ್ಪನಹಳ್ಳಿಗೆ ಟರ್ಮಿನಲ್‌ಗೆ ಸ್ಥಳಾಂತರಿಸಲು ನೈಋುತ್ಯ ರೈಲ್ವೆ ತೀರ್ಮಾನಿಸಿದೆ.