ಬೆಂಗಳೂರು(ಅ.11): ರಾಜಧಾನಿಯ ಹೃದಯ ಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದಲ್ಲಿನ ರೈಲು ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಮೂರನೇ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು ಹಾಗೂ ಹೊರ ರಾಜ್ಯದ ವಿವಿಧ ನಗರಗಳ ನಡುವೆ ರೈಲುಗಳ ಸಂಖ್ಯೆ ಹೆಚ್ಚಳವಾದಂತೆ ಕೆಎಸ್‌ಆರ್‌ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ರೈಲುಗಳ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ದಟ್ಟಣೆ ತಗ್ಗಿಸಿ, ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನೈಋುತ್ಯ ರೈಲ್ವೆ ಸುಮಾರು 190 ಕೋಟಿ ರು. ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ಏಳು ಪ್ಲಾಟ್‌ ಫಾರ್ಮ್‌ ಒಳಗೊಂಡ ಮೂರನೇ ಕೋಚಿಂಗ್‌ ಟರ್ಮಿನಲ್‌ ನಿರ್ಮಿಸಿದೆ.

ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಿರುವ ಈ ಟರ್ಮಿನಲ್‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿ ವಿನ್ಯಾಸ ಹೊಂದಿದೆ. ಪ್ಲಾಟ್‌ ಫಾಮ್‌ರ್‍ಗಳ ಶೆಲ್ಟರ್‌, ಒಳಾಂಗಣ ವಿನ್ಯಾಸ ಆಕರ್ಷವಾಗಿದೆ. ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು, ಕೆಫೆಟೇರಿಯಾ, ಫುಡ್‌ ಕೋರ್ಟ್‌, ಟಿಕೆಟ್‌ ಕೌಂಟರ್‌ಗಳು, ವಾಹನ ನಿಲುಗಡೆ, ಪ್ಲಾಟ್‌ ಫಾರ್ಮ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಸಬ್‌ ವೇಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಟರ್ಮಿನಲ್‌ನ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣ ಪ್ರಮಾಣದ ಕೆಲಸಗಳು ನಡೆಯುತ್ತಿವೆ. ಹೀಗಾಗಿ ನವೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ಈ ಟರ್ಮಿನಲ್‌ ಉದ್ಘಾಟಿಸಿ ಸೇವೆಗೆ ಮುಕ್ತಗೊಳಿಸುವ ಸಾಧ್ಯತೆಯಿದೆ.

ಬೆಂಗಳೂರು: ಏರ್‌ಪೋರ್ಟ್‌ ಪ್ರಯಾಣಿಕರಿಗಾಗಿ ಹಾಲ್ಟ್‌ ರೈಲು

ನೀರು ಮರುಬಳಕೆಗೆ ಎಸ್‌ಟಿಪಿ

ಅತ್ಯಾಧುನಿಕ ಟರ್ಮಿನಲ್‌ನಲ್ಲಿ ನೀರಿನ ಮಿತಬಳಕೆ ಹಾಗೂ ಮರುಬಳಕೆ ಮಾಡಲು ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಒಮ್ಮೆಗೆ ನಾಲ್ಕು ಲಕ್ಷ ಲೀಟರ್‌ ತ್ಯಾಜ್ಯ ನೀರು ಶುದ್ಧೀಕರಿಸಿ ಮರುಬಳಕೆ ಮಾಡಬಹುದಾಗಿದೆ. ರೈಲುಗಳು, ಪ್ಲಾಟ್‌ ಫಾಮ್‌ರ್‍ ಹಾಗೂ ಹಳಿಗಳ ಸ್ವಚ್ಛತೆಗೆ ಈ ನೀರು ಬಳಕೆಯಾಗಲಿದೆ. ಅಂತೆಯೆ ಟರ್ಮಿನಲ್‌ಗೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಟರ್ಮಿನಲ್‌ನಲ್ಲಿ ಹೊರಭಾಗದಲ್ಲಿ ಬಸ್‌ ಬೇ ನಿರ್ಮಿಸಲಾಗಿದೆ. ವಿದ್ಯುತ್‌ ಉಳಿತಾಯಕ್ಕಾಗಿ ಟರ್ಮಿನಲ್‌ನಲ್ಲಿ ಕಡಿಮೆ ವಿದ್ಯುತ್‌ ಬೇಡುವ ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ. ಟರ್ಮಿನಲ್‌ನಲ್ಲಿ ಹಿರಿಯ ನಾಗರಿಕರು, ಅಂಗವಿಕಲರ ಅನುಕೂಲಕ್ಕಾಗಿ ಎಸ್ಕಲೇಟರ್‌, ಲಿಫ್ಟ್‌ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

60 ರೈಲುಗಳ ಸ್ಥಳಾಂತರ

ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಪ್ರತಿ ನಿತ್ಯ 150 ಹಾಗೂ ಯಶವಂತಪುರದಿಂದ 100 ರೈಲುಗಳು ರಾಜ್ಯ ಹಾಗೂ ಹೊರರಾಜ್ಯಗಳಿಗೆ ತೆರಳುತ್ತಿವೆ. ಇದರಿಂದ ಈ ಎರಡೂ ನಿಲ್ದಾಣಗಳಲ್ಲಿ ರೈಲು ಹಾಗೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ನಿಲ್ದಾಣಗಳಿಂದ ಚೆನ್ನೈ ಹಾಗೂ ಮುಂಬೈ ಸೇರಿದಂತೆ ದೂರದ ನಗರಗಳಿಗೆ ಸಂಚರಿಸುವ 60ಕ್ಕೂ ಹೆಚ್ಚು ರೈಲುಗಳನ್ನು ಈ ಟರ್ಮಿನಲ್‌ಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.