ಬೆಳಗಾವಿ(ಏ.02): ಜಿಲ್ಲೆಯ ಸುಕ್ಷೇತ್ರ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮಂಗಳಸೂತ್ರ ಹರಿದು ಬಿದ್ದಿದೆ ಎಂದು ಕೆಲವರು ವದಂತಿ ಹಬ್ಬಿಸಿದ್ದಾರೆ. ಯಾರೂ ಅದನ್ನು ನಂಬಬಾರದು ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಸ್ಪಷ್ಟಪಡಿಸಿದ್ದಾರೆ.

ಇಡೀ ವಿಶ್ವವೇ ಕೊರೋನಾ ಸೋಂಕಿನಿಂದ ಮುಕ್ತವಾಗಲಿ. ಸರ್ವರ ಬಾಳು ಬೆಳಗಲಿ ಎಂದು ಪ್ರಾರ್ಥಿಸಿ ಎಲ್ಲರೂ ಅಮ್ಮ ಯಲ್ಲಮ್ಮನಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ, ಮಾನಸಿಕವಾಗಿ ಬಳಲುತ್ತಿರುವ ಕೆಲವರು ಯಲ್ಲಮ್ಮದೇವಿ ಮಂಗಳಸೂತ್ರ ಹರಿದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ಹರಿಬಿಟ್ಟಿದ್ದಾರೆ. ಇಂತಹ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಭಕ್ತಿಯಿಂದ ಪ್ರಾರ್ಥಿಸಿ, ಯಲ್ಲಮ್ಮನ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.

ಬೆಳಗಾವಿಯಲ್ಲಿ ಸಂಸ್ಕೃತಿ ಸಂಬಂಧಕ್ಕೆ ಕೊರೋನಾ ಬರೆ; ಕುಂದ ಕೇಳೋರೇ ಇಲ್ಲ!

ಮಂಗಳವಾರ ರಾತ್ರಿಯಿಂದ ಇಂಥದ್ದೊಂದು ಸುಳ್ಳು ಸಂದೇಶ ಹರಿದಾಡಿದ್ದರಿಂದ ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ಆತಂಕಗೊಂಡಿದ್ದಾರೆ. ನನಗೆ ಹಾಗೂ ದೇವಸ್ಥಾನ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ವಾಸ್ತವವಾಗಿ ಇಂತಹ ಯಾವ ವಿದ್ಯಮಾನವೂ ನಡೆದಿಲ್ಲ. ಹಾಗಾಗಿ, ಭಕ್ತರು ಆತಂಕಕ್ಕೆ ಒಳಗಾಗಬಾರದು ಎಂದು ಕೋಟಾರಗಸ್ತಿ ಹೇಳಿದ್ದಾರೆ.