ಬ್ರಹ್ಮಾನಂದ ಹಡಗಲಿ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಾಕಷ್ಟು ಜನರ ಹೊಟ್ಟೆ ಮೇಲೆ ಹೊಡೆದಿದೆ. ಇಲ್ಲಿನವರ ಬದುಕಿನ ಮೇಲೂ ಸವಾರಿ ಮಾಡಿದೆ. ಮಾತ್ರವಲ್ಲ, ಇಲ್ಲಿನ ಹಬ್ಬ, ಹರಿದಿನ ಮತ್ತು ಸಂಸ್ಕೃತಿಯ ಮೇಲೂ ಅದು ದಾಳಿ ಮಾಡಿದೆ ಎಂದರೆ ಆಶ್ಚರ್ಯಪಡಬೇಕಿಲ್ಲ.

ಒಂದಿಲ್ಲ ಒಂದು ಬಗೆಯಲ್ಲಿ ನಿತ್ಯ ಚೀನಾ ವಸ್ತುಗಳನ್ನು ಬಳಸುವ ಜನತೆ, ಈಗ ಅದೇ ವಸ್ತುಗಳನ್ನು ಕಂಡಾಕ್ಷಣ ಕೊರೋನಾ ಎಂಬ ಆತಂಕ ಒಂದು ಕ್ಷಣ ಕಣ್ ಮುಂದೆ ಹಾದು ಹೋದಂತೆ ಅವರ ಭಾಸವಾಗುತ್ತಿದೆ. ಮಾತ್ರವಲ್ಲ ಮನದ ಮೂಲೆಯಲ್ಲಿ ಅವರಿಗೆ ಭಯವನ್ನೂ ಮೂಡಿಸುತ್ತಿದೆ.

ಕೊರೋನಾ ಭೀತಿ: ದೇಶಾದ್ಯಂತ ಎಲ್ಲ ರೈಲು ಸಂಚಾರ ಸಂಪೂರ್ಣ ಬಂದ್

ಬೆಳಗಾವಿಗರ ಸಂಸ್ಕೃತಿ, ದೇವರ ದರ್ಶನಕ್ಕೂ ಸೋಂಕು:

ದೇಶದ ಎಲ್ಲ ಭಾಗಗಳಲ್ಲಿ ಆಚರಿಸುವಂತೆ ಕುಂದಾನಗರಿ ಬೆಳಗಾವಿಯಲ್ಲಿ ಹೋಳಿಹಬ್ಬ ಆಚರಿಸುತ್ತಾರೆ. ಆದರೆ, ಇಲ್ಲಿನ ಹೋಳಿಹಬ್ಬವೇ ಇಲ್ಲಿನವರಿಗೆ ವೈಶಿಷ್ಟಪೂರ್ಣ. ಗಂಡು ಹೆಣ್ಣು ಎಂಬ ಭೇದಭಾವ ಇಲ್ಲದೆ, ಜಾತಿ, ಮತ, ಪಂಥ ಎಂಬ ಭೇದಭಾವ ಇಲ್ಲದೇ ಎಲ್ಲರೂ ಸಮಾನರು ಎಂಬ ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಹಬ್ಬ. ಇಲ್ಲಿ ಎಲ್ಲರೂ ಒಟ್ಟಿಗೆ ಕೂಡಿಕೊಂಡೇ ಹೋಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಅದಕ್ಕಾಗಿ ಶಾಸಕ ಅಭಯ ಪಾಟೀಲ ಅವರು ‘ಹೋಳಿ ಮಿಲನ್’ ಎಂಬ ಹೆಸರಿನಲ್ಲಿ ಎಲ್ಲ ಮಹಿಳೆಯರು ಮತ್ತು ಪುರುಷರಿಗೆಂದೇ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಇದಕ್ಕೂ ಕೊರೋನಾ ಸೋಂಕು ತಗುಲಿತು.

ಭಾರತೀಯ ಸಂಸ್ಕೃತಿಯಂತೆ ಯುಗಾದಿ ನಮಗೆಲ್ಲ ಹೊಸ ವರ್ಷ. ಆದರೆ, ಈ ಬಾರಿ ಹೊಸ ವರ್ಷಕ್ಕೆ ದೇವರ ದರ್ಶನವಿಲ್ಲದಂತಾಗಿದೆ. ಸವದತ್ತಿಯ ಯಲ್ಲಮ್ಮ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ, ಮಹಾರಾಷ್ಟ್ರದ ಜತ್ತ ತಾಲೂಕಿನ ದಾನಮ್ಮದೇವಿಯಂತಹ ದೇವತೆಗಳ ದರ್ಶನಾಶೀರ್ವಾದ ಇಲ್ಲಿನ ಜನರಿಗೆ ತಲುಪದಂತೆ ಈ ಕೊರೋನಾ ತಡೆಯೊಡ್ಡಿದೆ. ಮನೆ ಮಕ್ಕಳು, ಸಂಬಂಧಿಕರು ಒಟ್ಟಿಗೆ ಸೇರಿಕೊಂಡು ಆಚರಿಸುವ ಯುಗಾದಿಗೆ ಒಬ್ಬರನ್ನೊಬ್ಬರು ತಾಗದಂತೆ ಮಾಡಿದೆ ಕೊರೋನಾ.

ಬೀದಿಗೆ ಬಂದ ಬದುಕು:

ಬೆಳಗಾದರೆ ಸಾಕು ಬೆಳಗಾವಿ, ಘಟಪ್ರಭಾ, ಹುಕ್ಕೇರಿ, ಚ.ಕಿತ್ತೂರು, ಖಾನಾಪುರ, ಗೋಕಾಕ, ಬೈಲಹೊಂಗಲ ತಾಲೂಕಿನ ನಾನಾ ಗ್ರಾಮಗಳಲ್ಲಿ ತಾವು ಬೆಳೆದಿದ್ದ ತರಕಾರಿ, ಸೊಪ್ಪು, ನಾನಾ ಬಗೆಯ ಹಣ್ಣುಗಳನ್ನು ತೆಗೆದುಕೊಂಡು ಬೆಳಗಾವಿ ಮಾರುಕಟ್ಟೆಗೆ ಮಾರಾಟ ಮಾಡಲು ಬರುತ್ತಿದ್ದ ಸಾವಿರಾರು ರೈತರು ಹೊಟ್ಟೆ ಮೇಲೂ ಕೊರೋನಾ ಏಟು ನೀಡಿದೆ. ರೈತರು ತಂದ ತರಕಾರಿ, ಹಣ್ಣುಗಳನ್ನು ಕೊಂಡು ಬೀದಿಯಲ್ಲಿ ಮಾರಾಟ ಮಾಡುತ್ತಿದ್ದವರ ಬದುಕು ಕೂಡ ಈಗ ಬೀದಿಗೆ ಬಂದಿದೆ. ನಿತ್ಯ ಗೋವಾಕ್ಕೆ ಹೋಗುತ್ತಿದ್ದ ತರಕಾರಿ, ಹಣ್ಣುಗಳು ಮೂಟೆಯಲ್ಲಿಯೇ ಇದ್ದು, ರೈತರ ಬದುಕು ಮೂರಾಬಟ್ಟೆಯಾಗುವಂತಾಗಿದೆ. ಯುಗಾದಿ ವೇಳೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದ ಬೆಳಗಾವಿ ಪ್ರಸಿದ್ಧ ಮಾವಿನ ಹಣ್ಣುಗಳು ಮಾಯವಾಗಿವೆ. ಕರ್ನಾಟಕದಲ್ಲಿಯೇ ಅತೀ ಕಡಿಮೆ ವೆಚ್ಚದಲ್ಲಿ ವಿವಾಹ ಆಮಂತ್ರಣ ಕಾರ್ಡ್‌ಗಳು ಸಿಗುವುದು ಬೆಳಗಾವಿಯಲ್ಲಿಯೇ. ಗೋವಾ, ಮಹಾರಾಷ್ಟ್ರದ ಜನರು ಕೂಡ ಇದಕ್ಕಾಗಿ ಮದುವೆ ಕಾರ್ಡ್ ಕೊಳ್ಳಲೆಂದೇ ಬೆಳಗಾವಿ ಬರುತ್ತಿದ್ದರು. ಈಗ ಅಂತಹ ಕಲ್ಯಾಣ ಕಾರ್ಯಕ್ಕೂ ಕೊರೋನಾ ಸೋಂಕು ತಗುಲಿದೆ.

ಕೊರೋನಾ ಆತಂಕ: ಶಾಸಕ ಅಭಯ್ ಪಾಟೀಲ್‌ರಿಂದ ಸ್ಯಾನಿಟೈಸೇಷನ್ ಕಾರ್ಯ!

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬೆಳಗಾವಿ ಕುಂದಾ, ಗೋಕಾಕ ಕರದಂಟನ್ನೇ ಮಾರಾಟ ಮಾಡಿಕೊಂಡೇ ಜೀವನ ಮಾಡುತ್ತಿದ್ದವರ ಜನರ ಜೀವನದ ಮೇಲೂ ಕೊರೋನಾ ಪರಿಣಾಮ ಬೀರಿದೆ. ನಿತ್ಯ ನೂರಾರು ಕೆಜಿ ಕುಂದಾ, ಕರದಂಟು ಮಾರುತ್ತಿದ್ದ ಬೇಕರಿಗಳು ಈಗ ಬೀಗಿ ಹಾಕಿಕೊಂಡಿವೆ.

ಇವೆಲ್ಲದರ ನಡುವೆ ವಾರದ ಕೊನೆಗೆ, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ಗೋವಾ, ಮಹಾರಾಷ್ಟ್ರಗಳಲ್ಲಿ ನೆಲೆಸಿದ್ದ ತಮ್ಮ ಸಂಬಂಧಿಗಳೊಂದಿಗೆ ಬೆರೆಯಲು ಕೂಡ ಕೊರೋನಾ ಬಿಡುತ್ತಿಲ್ಲ. ಎಲ್ಲರನ್ನೂ ಮನೆಯಲ್ಲಿಯೇ ಬಂಧಿಯಾಗಿಸಿದೆ. ಸಂಬಂಧಿಗಳನ್ನು ದೂರ ಮಾಡಿದೆ. ವ್ಯಾಪಾರ, ವಹಿವಾಟು ಎಲ್ಲಕ್ಕಿಂತ ಸಂಬಂಧಗಳನ್ನು, ಮನುಷ್ಯರು ಮನುಷ್ಯರೊಂದಿಗೆ ಬೆರೆಯುವುದನ್ನೇ ತಡೆದಿದೆ ಈ ಮಾರಕ ಸೋಂಕು.