ವಿಸ್ತರಿತ ಮಾರ್ಗದ ಪರೀಕ್ಷಾರ್ಥ ಸಂಚಾರ ಪೂರ್ಣ| ರೈಲ್ವೆ ಇಲಾಖೆ ಗ್ರೀನ್‌ ಸಿಗ್ನಲ್‌| ಜ.15ರೊಳಗೆ ಉದ್ಘಾಟನೆ ನಿರೀಕ್ಷೆ| ಸಿಎಂ ದಿನಾಂಕಕ್ಕೆ ಕಾಯುತ್ತಿರುವ ಮೆಟ್ರೋ| ಒಂದೂವರೆ ತಿಂಗಳು ಪರೀಕ್ಷಾರ್ಥ ಸಂಚಾರ| 

ಬೆಂಗಳೂರು(ಡಿ.26): ನಮ್ಮ ಮೆಟ್ರೋ ಹೊಸ ವರ್ಷದ ಆರಂಭದಲ್ಲಿ ಬೆಂಗಳೂರಿನ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ತನ್ನ ಈಗಿರುವ ಹಸಿರು ಮಾರ್ಗ(ನಾಗಸಂದ್ರ-ಯಲಚೇನಹಳ್ಳಿ) ವಿಸ್ತರಿಸಿ ಯಲಚೇನಹಳ್ಳಿಯಿಂದ ಅಂಜನಾಪುರದವರೆಗೆ ಮೆಟ್ರೋ ರೈಲು ಸೇವೆ ಆರಂಭಿಸಲಿದೆ. ಜನವರಿ 15ರೊಳಗೆ ಈ ಹೊಸ ವಿಸ್ತರಿತ ಮಾರ್ಗ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಈ ಮಾರ್ಗದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿದೆ. ಆದರೆ, ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಎಸ್‌.ಯಡಿಯೂರಪ್ಪ ಅವರು ದಿನಾಂಕಕ್ಕೆ ಮೆಟ್ರೋ ನಿಗಮ ಕಾಯುತ್ತಿದೆ.

ವಿಸ್ತರಿತ ಮಾರ್ಗವಾದ ಯಲಚೇನಹಳ್ಳಿ- ಅಂಜನಾಪುರ ನಡುವಿನ 6.29 ಕಿ.ಮೀ ಮಾರ್ಗ ಇದಾಗಿದೆ. ಸುಮಾರು 500 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಯಲಚೇನಹಳ್ಳಿ- ಅಂಜನಾಪುರ ನಡುವೆ ಕೋಣನಕುಂಟೆ ಕ್ರಾಸ್‌ (ಅಂಜನಾಪುರ ರೋಡ್‌ ಕ್ರಾಸ್‌), ಕೃಷ್ಣಲೀಲಾ ಪಾರ್ಕ್ (ದೊಡ್ಡಕಲ್ಲಸಂದ್ರ), ವಾಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್‌ ಎಂಬ ಐದು ಎಲಿವೇಟೆಡ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 2016 ಮೇ ತಿಂಗಳಲ್ಲಿ ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ನಡುವಿನ ಮೆಟ್ರೊ ಮಾರ್ಗದ ಕಾಮಗಾರಿ ಆರಂಭಗೊಂಡಿತ್ತು. ಈಗಾಗಲೇ ರೀಚ್‌-4 ಕಾಮಗಾರಿಯು ಶೇ.100ರಷ್ಟುಪೂರ್ಣಗೊಂಡಿದೆ. ಆಗಸ್ಟ್‌ ಕೊನೆಯ ವಾರದಲ್ಲಿ ಹಳಿಗಳ ಪರೀಕ್ಷೆ ನಡೆದಿತ್ತು. ರೈಲ್ವೆ ಇಲಾಖೆ ಆಯುಕ್ತರು ಹಳಿಗಳ ಪರಿಶೀಲನೆ ನಡೆಸಿದ್ದು ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದ್ದಾರೆ.

5 ನಿಮಿಷಕ್ಕೊಂದು ಮೆಟ್ರೋ ಓಡಿದರೂ ಬಾರದ ಜನರು..!

ಒಂದೂವರೆ ತಿಂಗಳು ಪರೀಕ್ಷಾರ್ಥ ಸಂಚಾರ:

ಸುಮಾರು ಒಂದೂವರೆ ತಿಂಗಳು ಮೆಟ್ರೊ ರೈಲು ಪರೀಕ್ಷಾರ್ಥ ಸಂಚಾರ ನಡೆಸಿದ ಬಳಿಕ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಲಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಆಗುತ್ತಿಲ್ಲ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ನಾಗಸಂದ್ರದಿಂದ ಮಾದಾವರ (ಬಿಐಇಸಿ) ವರೆಗೆ ಹಸಿರು ಮಾರ್ಗದ ವಿಸ್ತರಿತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಸುಮಾರು 3.03 ಕಿ.ಮೀ. ಉದ್ದವಿದೆ. ಇದರಲ್ಲಿಯೂ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದವಾರ ಎಂಬ ಎಲಿವೇಟೆಡ್‌ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಒಟ್ಟಾರೆ ಅಂಜನಾಪುರದಿಂದ ಬಿಐಇಸಿ ವರೆಗೆ ಹಸಿರು ಮಾರ್ಗ ಒಟ್ಟು 33.79 ಕಿ.ಮೀ ಉದ್ದ ಇರಲಿದೆ.