ಬೆಂಗಳೂರು(ಡಿ.13): ಪ್ರತಿ ಐದು ನಿಮಿಷಕ್ಕೊಂದರಂತೆ ಮೆಟ್ರೋ ರೈಲಿನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಹನಗಳ ಕೊರತೆಯಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು ಶನಿವಾರ ಕೇವಲ 1.01 ಲಕ್ಷ ಮಂದಿ ಮಾತ್ರ ಪ್ರಯಾಣಿಸಿದ್ದಾರೆ.

ಬಸ್‌ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲುಗಳು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಪ್ರತಿ 5 ನಿಮಿಷಕ್ಕೊಂದರಂತೆ ಸಂಚರಿಸಲು ನಮ್ಮ ಮೆಟ್ರೋ ನಿಗಮ ವ್ಯವಸ್ಥೆ ಮಾಡಿತ್ತು. ಬಸ್‌ ಮುಷ್ಕರದ ಕಾರಣ ಮೆಟ್ರೋ ರೈಲಿನ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮೆಟ್ರೋ ನಿಲ್ದಾಣಗಳಿಗೆ ಸರಿಯಾಗಿ ಸಂಪರ್ಕ ಕಲ್ಪಿಸುವ ವಾಹನಗಳ ಕೊರತೆಯಿಂದ ಹೆಚ್ಚಿನ ಪ್ರಯಾಣಿಕರು ನಿಲ್ದಾಣಗಳ ಕಡೆಗೆ ಬರಲೇ ಇಲ್ಲ. ಇದರಿಂದ ಈ ಹಿಂದಿನ ದಿನಗಳಿಗಿಂತ 10ರಿಂದ 15 ಸಾವಿರ ಪ್ರಯಾಣಿಕರ ಕೊರತೆ ಕಂಡುಬಂದಿದೆ.

ಬಸ್ಸಿಲ್ಲದಿದ್ರೆ ಏನಾಯ್ತು? ನಾವಿದ್ದೀವಲ್ಲ ಎಂದ ನಮ್ಮ ಮೆಟ್ರೋ; ಪ್ರಯಾಣಿಕರಿಗಾಗಿ ಹೆಚ್ಚುವರಿ ಸಂಚಾರ

ಅಲ್ಲದೇ ಎರಡನೇ ಶನಿವಾರವಿದ್ದ ಕಾರಣ ಸರ್ಕಾರಿ ಕಚೇರಿಗಳು ಮತ್ತು ವಿವಿಧ ಖಾಸಗಿ ಕಂಪನಿಗಳಿಗೆ ರಜೆ ನೀಡಲಾಗಿದೆ. ಇದು ಕೂಡ ಪ್ರಯಾಣಿಕರ ಸಂಖ್ಯೆ ಇಳಿಮುಖಕ್ಕೆ ಕಾರಣವೆನ್ನಬಹುದು. ಬಹುಶಃ ಭಾನುವಾರವೂ ಕೂಡ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ಮೆಟ್ರೋ ರೈಲುಗಳ ಕಾರ್ಯಾಚರಣೆ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಶುಕ್ರವಾರ ನಮ್ಮ ಮೆಟ್ರೋದಲ್ಲಿ 1.13 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸಿದರು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ನೇರಳೆ ಮಾರ್ಗದಲ್ಲಿ ಮೆಟ್ರೋ ಭಾಗಶಃ ಸಂಚಾರ

ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ವಿಸ್ತರಿಸಿದ ಮಾರ್ಗಕ್ಕೆ ವಿದ್ಯುತ್‌ ಕೇಬಲ್‌ ಅಳವಡಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಡಿ.13ರಂದು ಮೈಸೂರು ರಸ್ತೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸಂಚಾರ ಸೇವೆ ಸ್ಥಗಿತಗೊಳ್ಳಲಿದೆ. ಡಿ.14ರಂದು ಬೆಳಗ್ಗೆ 7ಕ್ಕೆ ನೇರಳೆ ಮಾರ್ಗದ ಮೈಸೂರು ರಸ್ತೆ- ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ಸೇವೆ ಲಭ್ಯವಿರಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.