Asianet Suvarna News Asianet Suvarna News

ಉಡುಪಿಯಲ್ಲಿ ಫೆ.11ರಿಂದ ಯಕ್ಷಗಾನ ಸಮ್ಮೇಳನ ಆರಂಭ: ಡಾ. ಎಂ.ಪ್ರಭಾಕರ ಜೋಷಿ ಸಮ್ಮೇಳನಾಧ್ಯಕ್ಷ

ಉಡುಪಿಯಲ್ಲಿ ಪ್ರಥಮ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೂಲಕ 2 ಕೋಟಿ ರೂ. ಅನುದಾನ
ಉಡುಪಿಯ ಕುಂಜಿಬೆಟ್ಟುವಿನ ಎ.ಎಲ್.ಎನ್.ರಾವ್ ಕ್ರೀಡಾಂಗಣ ಆಯೋಜನೆ

Yakshagana conference will begin in Udupi on February 11 Prabhakar Joshi conference president sat
Author
First Published Feb 7, 2023, 4:29 PM IST

ಉಡುಪಿ (ಫೆ.07): ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ- 2023, ಉಡುಪಿಯಲ್ಲಿ ಆಯೋಜನೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ 2 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಫೆಬ್ರವರಿ 11 ಮತ್ತು 12 ರಂದು ಸಮ್ಮೇಳನ ನಡೆಯಲಿದೆ. 

ರಾಜ್ಯದ ಹಮ್ಮೆಯ ಕಲೆ ಯಕ್ಷಗಾನ, ಈ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸಬೇಕೆಂಬ ಯಕ್ಷಗಾನಾಸಕ್ತರ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ಉಡುಪಿಯಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸುವುದಾಗಿ ಘೋಷಿಸಿತ್ತು. ಈ ಸಮ್ಮೇಳನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಸಲಹಾ ಸಮಿತಿ ಹಾಗೂ ಶಾಸಕ ಕೆ.ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿನ ಸ್ವಾಗತ ಸಮಿತಿಯು ಸಮ್ಮೇಳನವನ್ನು ಉಡುಪಿಯ ಎ.ಎಲ್.ಎನ್.ರಾವ್ ಕ್ರೀಡಾಂಗಣ, ಎಂ.ಜಿ.ಎಂ. ಕುಂಜಿಬೆಟ್ಟುವಿನಲ್ಲಿ ಆಯೋಜಿಸಲಾಗುತ್ತಿದೆ.

ಉಡುಪಿಯಲ್ಲಿ ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ: ಸಚಿವ ವಿ ಸುನೀಲ್ ಕುಮಾರ್

ಪ್ರಥಮ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಪ್ರಭಾಕರ ಜೋಷಿ ಇವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಸಮ್ಮೇಳನದ ಕಾರ್ಯಾಧ್ಯಕ್ಷರು ಹಾಗೂ ಸಲಹಾ ಸಮಿತಿಯ ಸದಸ್ಯರು ಶ್ರೀಯುತರ ಸ್ವಗೃಹಕ್ಕೆ ಭೇಟಿ ನೀಡಿ ಫಲ ತಾಂಬೂಲದೊಂದಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಕ.ರಘುಪತಿ ಭಟ್ ಇವರ ನೇತೃತ್ವದಲ್ಲಿ ಎ.ಎಲ್.ಎನ್.ರಾವ್‌ ಕ್ರೀಡಾಂಗಣ, ಎಂ.ಜಿ.ಎಂ ಇಲ್ಲಿ ಸಮ್ಮೇಳನದ ಚಪ್ಪರ ಪೂಜೆ ಯು ಸೋಮವಾರ ನೆರವೇರಿತು. ಈ ಸಮಾರಂಭದಲ್ಲಿ ಕಾರ್ಯಾಧ್ಯಕ್ಷರು, ಪ್ರಧಾನ ಸಂಚಾಲಕರು, ಸಂಚಾಲಕರು, ಸಲಹಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ:  ಫೆ.11ರಂದು ಬೆಳಿಗ್ಗೆ 9ಗಂಟೆಗೆ ಸಮ್ಮೇಳನಾಧ್ಯಕ್ಷರು ಹಾಗೂ ಗಣ್ಯರನ್ನು ಮೆರವಣಿಗೆಯೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಡಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 'ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತಿ ವಹಿಸಲಿದ್ದಾರೆ. ವಾಣಿಜ್ಯ ಮಳಿಗೆ ಉದ್ಘಾಟನೆಯನ್ನು ಸಚಿವ ಎಸ್.ಅಂಗಾರ ನೆರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಧ್ವಜಾರೋಹಣ ಮಾಡಲಿದ್ದಾರೆ. ಬಿ‌.ವೈ. ರಾಘವೇಂದ್ರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ಬಿ.ಎಂ. ಸುಕುಮಾರ ಶೆಟ್ಟಿ ಮುಂತಾದವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕರಾವಳಿಯಲ್ಲಿ ಹಬ್ಬದ ವಾತಾವರಣ: ರಾಜಕೀಯ ಪಕ್ಷಗಳಿಂದ ಸಾಂಸ್ಕೃತಿಕ ರಸದೌತಣ

ಗಣ್ಯಾತಿಗಣ್ಯರ ಉಪಸ್ಥಿತಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಕೋಟದ ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ  ಆನಂದ ಸಿ. ಕುಂದರ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ  ಎಸ್. ಪ್ರದೀಪಕುಮಾರ ಕಲ್ಕೂರ,  ಮಹಾಲಕ್ಷ್ಮಿ, ಕೋ.ಆ, ಬ್ಯಾಂಕ್‌ನ ಅಧ್ಯಕ್ಷರಾದ  ಯಶ್‌ಪಾಲ್ ಸುವರ್ಣ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ನಾರಾಯಣ ಕಾರಂತ, ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿಯಾದ ಡಾ.ಬಿ. ಜಗದೀಶ ಶೆಟ್ಟಿ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ  ಎಂ. ಗಂಗಾಧರರಾವ್ ಅಭ್ಯಾಗತಥಾ ಉಪಸ್ಥಿತರಿರುವರು.

ಯಕ್ಷಗಾನ ದಿಗ್ಗಜರ ಆಗಮನ: ಯಕ್ಷಗಾನದ ದಿಗ್ಗಜ ಕಲಾವಿದರಾದ ಮಲ್ಪೆ ಶಂಕರನಾರಾಯಣ ಸಾಮಗ, ಕೆರೆಮನೆ ಶಿವರಾಮ ಹೆಗಡೆ ಮತ್ತು ಅಳಿಕೆ ರಾಮಯ್ಯ ರೈ ಇವರ ಹೆಸರುಗಳಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ 75 ಹಿರಿಯ ಕಲಾವಿದರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ. 6 ಗೋಷ್ಠಿಗಳಲ್ಲಿ, 200 ಜನ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. 18 ಜನ ವಿವಿಧ ವಿಷಯಗಳ ಲೇಖನ ಮಂಡಿಸುತ್ತಾರೆ. 900 ಕೀರ್ತಿಶೇಷ ಕಲಾವಿದರ ಭಾವಚಿತ್ರದ ಜೊತೆಗೆ ಕಿರುಪರಿಚಯದೊಂದಿಗೆ ಪ್ರದರ್ಶನ ಮಾಡಲಾಗುತ್ತದೆ. 

ದೇಶ- ವಿದೇಶಗಳ ಕಲಾತಂಡ ಭಾಗಿ: ಸಮ್ಮೇಳನದಲ್ಲಿ ಹೊರದೇಶ, ಹೊರರಾಜ್ಯದ ತಂಡಗಳು ಸೇರಿದಂತೆ ಒಟ್ಟು 27 ಯಕ್ಷಗಾನ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಇದರಲ್ಲಿ 2 ಗೊಂಬೆಯಾಟ ಮತ್ತು 2 ತಾಳಮದ್ದಲೆಗಳು ಅಲ್ಲದೆ ತುಳು ಯಕ್ಷಗಾನ ಪ್ರದರ್ಶನ ಘಟ್ಟದಕೋಟೆ, ಕೇಳಿಕೆ, ಮೂಡಲಪಾಯ ಪುದರ್ಶನವೂ ಸೇರಿವೆ.ಸಮ್ಮೇಳನದ ಪ್ರಚಾರದ ಸಂಬಂಧ ಎಲ್ಲಾ ಮೇಳದವರು ಈಗಾಗಲೇ ಪ್ರಚಾರ ನೀಡುತ್ತಿದ್ದಾರೆ. ಕಟೌಟ್‌ಗಳನ್ನು ಅಳವಡಿಸಲಾಗಿದೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಕುರಿತ 18 ಪುಸ್ತಕಗಳನ್ನು ಪ್ರಕಟಿಸುತ್ತಿದೆ.

Follow Us:
Download App:
  • android
  • ios