ಆಸ್ಪ್ರೇಲಿಯಾ ಕ್ರೀಡೆಗಾಗಿ ಕೂಲಿ ಮಾಡುತ್ತಿರುವ ರನ್ನರ್‌!

ರಾಷ್ಟ್ರೀಯ ಮಟ್ಟದ ಅನೇಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಿಂದುಳಿದ ಜಿಲ್ಲೆಯಾದ ಯಾದಗಿರಿಗೆ ಹೆಸರು ತಂದುಕೊಟ್ಟಾತ. ಇಂಥ ಪ್ರತಿಭಾವಂತನಿಗೆ ಈ ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುವ ಅಪರೂಪದ ಅವಕಾಶ ಹುಡುಕಿಕೊಂಡು ಬಂದಿದೆ. ಆದರೆ ಇದಕ್ಕೆ ಬಡತನ ಅಡ್ಡಿಯಾಗಿದೆ. 

Yadgir Poor Athlete Faces Money Problem For His Next Dream

ಆನಂದ್‌ ಎಂ. ಸೌದಿ

ಯಾದಗಿರಿ [ಮಾ.12]: ಈತ ಭರವಸೆಯ ಓಟಗಾರ. ರಾಷ್ಟ್ರೀಯ ಮಟ್ಟದ ಅನೇಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಿಂದುಳಿದ ಜಿಲ್ಲೆಯಾದ ಯಾದಗಿರಿಗೆ ಹೆಸರು ತಂದುಕೊಟ್ಟಾತ. ಇಂಥ ಪ್ರತಿಭಾವಂತನಿಗೆ ಈ ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುವ ಅಪರೂಪದ ಅವಕಾಶ ಹುಡುಕಿಕೊಂಡು ಬಂದಿದೆ. ಆದರೂ ಈತನ ಮುಖದಲ್ಲಿ ಗೆಲುವಿಲ್ಲ. ಕಾರಣ ಇಷ್ಟೇ, ತೀರಾ ಬಡ ಗ್ರಾಮೀಣ ಕುಟುಂಬದ ಹಿನ್ನೆಲೆಯಿಂದ ಬಂದ ಈತನ ಕೈಯಲ್ಲಿ ಆಸ್ಪ್ರೇಲಿಯಾಗೆ ಹೋಗುವಷ್ಟುಕಾಸಿಲ್ಲ!

"

ಹೌದು, ಇದು ಯಾದಗಿರಿ ತಾಲೂಕಿನ ಹಳಗೇರಾ ಗ್ರಾಮದ ದೊಡ್ಡಪ್ಪ ನಾಯಕ್‌(29) ಅವರ ಕಥೆ-ವ್ಯಥೆ. ಹೇಳಿಕೊಳ್ಳಲೊಂದು ತಾತ್ಕಾಲಿಕ ಕೋಚ್‌ ಕೆಲಸವಿದ್ದರೂ ಸಿಗುವ ಹಣ ಅಷ್ಟಕ್ಕಷ್ಟೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಖರ್ಚು ನಿಭಾಯಿಸಬೇಕಿದ್ದರೆ ಕೂಲಿ ನಾಲಿ ಮಾಡಲೇಬೇಕು. ಇಂಥ ಸಂಘರ್ಷದ ಬದುಕಿನ ನಡುವೆಯೂ ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ದೊಡ್ಡಪ್ಪ ನಾಯಕ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡುವ ತುಡಿತ. ಅಂಥದ್ದೊಂದು ಅವಕಾಶ ಈಗ ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಕ್ರೀಡಾಕೂಟ(12ನೇ ಪ್ಯಾನ್‌ ಫೆಸಿಫಿಕ್‌ ಮಾಸ್ಟರ್ಸ್‌ ಗೇಮ್ಸ್‌) ರೂಪದಲ್ಲಿ ಹುಡುಕಿಕೊಂಡು ಬಂದಿದೆ. ಆದರೆ, ಆಸ್ಪ್ರೇಲಿಯಾಗೆ ತೆರಳಲು ಬೇಕಾಗುವಷ್ಟುಹಣ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ದೊಡ್ಡಪ್ಪ ನಾಯಕ್‌ ಕಳೆದುಕೊಳ್ಳುವ ಸಾಧ್ಯತೆ ಇದೆ.

ಯಾದಗಿರಿ ಜಿಲ್ಲೆಗೆ ಹೆಸರು ತಂದುಕೊಟ್ಟ ಹೆಮ್ಮೆಯ ಕ್ರೀಡಾಪಟು ದೊಡ್ಡಪ್ಪ ನಾಯಕ್‌! 

ಮಾಸ್ಟ​ರ್‍ಸ್ ಗೇಮ್ಸ್‌ ಫೆಡರೇಶನ್ಸ್‌ (ಇಂಡಿಯಾ)ದಿಂದ ಇದೇ ಫೆ.5 ರಿಂದ ಫೆ.9ರವರೆಗೆ ಗುಜರಾತಿನ ವಡೋದರಾದಲ್ಲಿ ನಡೆದ 3ನೇ ರಾಷ್ಟ್ರೀಯ ಮಾಸ್ಟ​ರ್‍ಸ್ ಗೇಮ್ಸ್‌-2020ನಲ್ಲಿ, 400 ಮೀ. ವೈಯುಕ್ತಿಕ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 4*100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಆಧಾರದ ಮೇಲೆ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಈಗ ಆಯ್ಕೆಯಾಗಿದ್ದಾರೆ.

ಚಿಕ್ಕಂದಿನದಲ್ಲೇ ತಂದೆಯನ್ನು ಕಳೆದುಕೊಂಡ ದೊಡ್ಡಪ್ಪ ನಾಯಕ್‌, ಹೈಸ್ಕೂಲ್‌ ಮಟ್ಟದಲ್ಲೇ ಗುಡ್ಡಗಾಡು ಓಟ, ಅಥ್ಲೆಟಿಕ್ಸ್‌, ಕಬಡ್ಡಿ, ಖೋ ಖೋ, ಲಾಂಗ್‌ಜಂಪ್‌ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದರು. ಗುಲ್ಬರ್ಗ ವಿವಿಯಲ್ಲಿ ಎಂಪಿ.ಇಡಿ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಬೆಂಗಳೂರಿನ ಸಾಯ್‌ನಲ್ಲಿ ಎನ್‌ಐಎಸ್‌ (ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋಟ್ಸ್‌ರ್‍) ಮುಗಿಸಿದ್ದಾರೆ.

ಹೆಚ್ಚಿನ ಲ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾತ್ಕಾಲಿಕ ಕೋಚ್‌: ಬಡತನದ ಬೇಗೆ ಮಧ್ಯೆ ಸ್ನಾತಕೋತ್ತರ ಪದವಿ ಮುಗಿಸಿ, ವಿವಿಧ ಪಂದ್ಯಾವಳಿಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಸೇವೆ ಮೇಲೆ ಅಥ್ಲೆಟಿಕ್‌ ಕೋಚ್‌ ಆಗಿ ಸದ್ಯ ದೊಡ್ಡಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಡುವಿನ ವೇಳೆ ತಾಯಿ ಭೀಮವ್ವಳ ಜೊತೆ ಕೂಲಿ ಕೆಲಸಕ್ಕೆ ಹೋಗಿ ಒಂದಷ್ಟುಹಣ ಸಂಪಾದಿಸುತ್ತಾರೆ. ಇವರ ಹಿರಿಯ ಸಹೋದರ ನರಸಪ್ಪ ಕೂಡ ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದು, ತಮ್ಮನ ಸಾಧನೆಗೆ ನೀರೆರೆಯುತ್ತಿದ್ದಾರೆ. ಗುಜರಾತ್‌ನಲ್ಲಿ ನಡೆದ ಮಾಸ್ಟ​ರ್‍ಸ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಿದ್ದೇನೋ ಆಯ್ತು. ಆದರೆ, ಮುಂದಿನ ಹಂತದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯುವ ಪಂದ್ಯಾವಳಿಗೆ ತೆರಳಲು ಹಣಕಾಸಿನ ಮುಗ್ಗಟ್ಟು ಕಾಡುತ್ತಿದೆ. ಆಸ್ಪ್ರೇಲಿಯಾಗೆ ಹೋಗಬೇಕೆಂದರೆ ಏನಿಲ್ಲವೆಂದರೂ ಸುಮಾರು 1.5ಲಕ್ಷ ದಿಂದ 2 ಲಕ್ಷ ರುಪಾಯಿಯ ಅವಶ್ಯವಿದೆ. ಆದರೆ, ಅಷ್ಟೊಂದು ಹಣಕ್ಕಾಗಿ ಈಗ ಅವರು ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ದೊಡ್ಡಪ್ಪನ ಸಾಧನೆಗೆ ಸಂತಸಗೊಂಡ ಹಳಿಗೇರಾ ಗ್ರಾಮಸ್ಥರು, ಪಿಡಿಒ ರೇಣುಕಾ ಅವರು ಸೇರಿಕೊಂಡು .10 ಸಾವಿರ ನೆರವು ನೀಡಿದ್ದಾರೆ. ಉಳಿದ ಹಣಕ್ಕಾಗಿ ದೊಡ್ಡಪ್ಪ ಪರದಾಡುತ್ತಿದ್ದಾರೆ. ಹಣ ಹೊಂದಾಣಿಕೆಯಾದರೆ ಆಸ್ಪ್ರೇಲಿಯಾಗೆ ಹೋಗ್ತೇನೆ ಎಂದು ನೋವಿನಿಂದ ನುಡಿಯುತ್ತಾರೆ ದೊಡ್ಡಪ್ಪ.

ಆಸ್ಪ್ರೇಲಿಯಾಕ್ಕೆ ಹೋಗಲು ಏನಿಲ್ಲವೆಂದರೂ ಒಂದೂವರೆಯಿಂದ ಎರಡು ಲಕ್ಷ ರು.ಗಳ ಖರ್ಚಾಗುತ್ತದೆ. ಅಷ್ಟೊಂದು ಹಣ ನಮ್ಮ ಬಳಿ ಇಲ್ಲವೇ ಇಲ್ಲ. ಸಾಧನೆ ಮಾಡಿದ್ದು ನಿಜ. ಆದರೆ, ಬಡತನ ಇದಕ್ಕೆ ಅಡ್ಡಿಯಾಗಿದೆ. ಹಣ ಹೊಂದಾಣಿಕೆಯಾದರೆ ಆಸ್ಪ್ರೇಲಿಯಾ, ಇಲ್ಲವಾದಲ್ಲಿ ಇಲ್ಲೇ ಕೂಲಿಗೆ ಹೋಗುತ್ತೇನೆ.

- ದೊಡ್ಡಪ್ಪ ನಾಯಕ್‌, ಅಥ್ಲೆಟಿಕ್‌ ಕೋಚ್‌, ಯಾದಗಿರಿ ಜಿಲ್ಲಾ ಕ್ರೀಡಾಂಗಣ

ದಾನಿಗಳು ನೆರವು ನೀಡುವ ಬಯಸುವವರು

* ದೊಡ್ಡಪ್ಪ ಎಂ. ನಾಯಕ್‌

- ಉಳಿತಾಯ ಖಾತೆ ಸಂಖ್ಯೆ: 8532500100897001

- ಕರ್ನಾಟಕ ಬ್ಯಾಂಕ್‌, ಯಾದಗಿರಿ ಶಾಖೆ.

- ಐಎಫ್‌ಎಸ್‌ಸಿ: ಕೆಎಆರ್‌ಬಿ0000853

 ಮೊಬೈಲ್ ನಂಬರ್ :  6362400143 : ದೊಡ್ಡಪ್ಪ ನಾಯಕ್

Latest Videos
Follow Us:
Download App:
  • android
  • ios