ಗ್ರಾಮ ಪಂಚಾಯಿತಿಗಳು ನಡೆಸಿದ ತೆರಿಗೆ ವಸೂಲಾತಿ ಅಭಿಯಾನದಲ್ಲಿ, ಒಂದೇ ದಿನದಲ್ಲಿ ₹3.12 ಕೋಟಿಗಳ ದಾಖಲೆಯ ತೆರಿಗೆ ಸಂಗ್ರಹವಾಗಿದೆ. ಈ ಯಶಸ್ಸಿಗೆ ಗ್ರಾಮೀಣ ಜನರ ಉತ್ತಮ ಸ್ಪಂದನೆಯೇ ಕಾರಣವಾಗಿದ್ದು, ಸಂಗ್ರಹವಾದ ಅನುದಾನವನ್ನು ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುವುದು.

ಯಾದಗಿರಿ: ಗ್ರಾಮ ಅಭಿವೃದ್ಧಿಗೆ ಜನರಿಂದ ಸಂಗ್ರಹಿಸಿದ ತೆರಿಗೆಯ ವಿಶೇಷ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಜಿಲ್ಲಾ ಪಂಚಾಯತ್‌ ಅರಿವು ತೆರಿಗೆ ಸಂಗ್ರಹ ಕಾರ್ಯಕ್ರಮ ಯಶ ಕಾಣುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾದ ತೆರಿಗೆ ವಸೂಲಾತಿ ಅಭಿಯಾನಕ್ಕೆ ಗ್ರಾಮೀಣ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಒಂದೇ ದಿನದಲ್ಲಿ (ಜ.19) 3,12,55,667 ರೂಪಾಯಿಗಳ ದಾಖಲೆಯ ತೆರಿಗೆ ಸಂಗ್ರಹವಾಗಿದೆ. ಯಾದಗಿರಿ ಜಿಲ್ಲೆಯ ಗ್ರಾಮೀಣ ಜನರು ತೆರಿಗೆ ಪಾವತಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಜಿಪಂ ಸಿಇಒ ಲವೀಶ್ ಒರಡಿಯಾ ಹರ್ಷ ವ್ಯಕ್ತಪಡಿಸಿದ್ದಾರೆ.

ತೆರಿಗೆ ವಸೂಲಾತಿ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಜಿಲ್ಲೆಯಲ್ಲಿ 3ನೇ ಬಾರಿಗೆ ತೆರಿಗೆ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರೇಡ್–1 ಹಾಗೂ ಗ್ರೇಡ್–2 ಕಾರ್ಯದರ್ಶಿಗಳು, ಕರ ವಸೂಲಿಗಾರರು, ದ್ವಿತೀಯ ದರ್ಜೆ ಸಹಾಯಕರು, ಗ್ರಂಥಾಲಯ ಮೇಲ್ವಿಚಾರಕರು, ಎನ್‌ಆರ್‌ಎಲ್‌ಎಂ ಯೋಜನೆಯ ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ಇತರೆ ಸಿಬ್ಬಂದಿ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿದೆ.

ಯಾದಗಿರಿ ಜಿಲ್ಲೆ 13ನೇ ಸ್ಥಾನ

ಜ.19ರಂದು ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ, ಗ್ರಾಮೀಣ ಜನರು ಉತ್ಸಾಹದಿಂದ ತೆರಿಗೆ ಪಾವತಿಸಿದ್ದು, ಜಿಲ್ಲೆಯ ಒಟ್ಟು 17.27 ಕೋಟಿ ರುಪಾಯಿಗಳ ಚಾಲ್ತಿ ಬೇಡಿಕೆಗೆ ಎದುರಾಗಿ, 11.56 ಕೋಟಿ ರೂಪಾಯಿ (ಶೇ.66.70) ತೆರಿಗೆ ವಸೂಲಿ ಮಾಡಲಾಗಿದೆ. ಇದರೊಂದಿಗೆ ರಾಜ್ಯ ಮಟ್ಟದಲ್ಲಿ ಯಾದಗಿರಿ ಜಿಲ್ಲೆ 13ನೇ ಸ್ಥಾನ ಪಡೆದಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಾಗಿ ಈ ತೆರಿಗೆ ಅನುದಾನ ಅತ್ಯಂತ ಅಗತ್ಯವಾಗಿದ್ದು, ವಿಶೇಷ ಕ್ರಿಯಾ ಯೋಜನೆ ತಯಾರಿಸಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಳಸಲಾಗುತ್ತದೆ. ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ ಕಾಯ್ದೆ–1993ರಂತೆ ಕ್ರಮ ಕೈಗೊಳ್ಳಲಾಗುವುದು. ಸಂಗ್ರಹಿತ ಮೊತ್ತದಲ್ಲಿ ಲೋಪದೋಷ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತೆರಿಗೆ ಸಂಗ್ರಹಣೆಯ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿ, ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗುವುದು. ಅಭಿಯಾನದಲ್ಲಿ ಭಾಗವಹಿಸಿ ಹೆಚ್ಚಿನ ತೆರಿಗೆ ಸಂಗ್ರಹಣೆಗೆ ಕಾರಣರಾದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಲವೀಶ್ ಒರಡಿಯಾ ತಿಳಿಸಿದ್ದಾರೆ.

ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಗಳು

ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮ ಪಂಚಾಯಿತಿಯಲ್ಲಿ 9,98,336 ರೂಪಾಯಿ, ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮ ಪಂಚಾಯಿತಿಯಲ್ಲಿ 8,69,033 ರೂಪಾಯಿ, ಹುಣಸಗಿ ತಾಲ್ಲೂಕಿನ ಅರಕೇರಾ (ಜೆ) ಗ್ರಾಮ ಪಂಚಾಯಿತಿಯಲ್ಲಿ 6,17,095 ರೂಪಾಯಿ, ಶಹಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮ ಪಂಚಾಯಿತಿಯಲ್ಲಿ 6,03,310 ರೂಪಾಯಿ, ಯಾದಗಿರಿ ತಾಲ್ಲೂಕಿನ ಸೈದಾಪುರ ಗ್ರಾಮ ಪಂಚಾಯಿತಿಯಲ್ಲಿ 5,31,968 ರೂಪಾಯಿ ತೆರಿಗೆ ವಸೂಲಾತಿ ಮಾಡಲಾಗಿದೆ.

ತಾಲೂಕು ಮಟ್ಟದಲ್ಲಿ ಹೆಚ್ಚಿನ ಕರ ಸಂಗ್ರಹ

ತಾಲೂಕು ಮಟ್ಟದಲ್ಲಿ ಶಹಾಪುರ ತಾಲೂಕು ರೂ.77.59 ಲಕ್ಷ ರೂಪಾಯಿ ತೆರಿಗೆ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದ್ದು, ನಂತರ ಸುರಪುರ (ರೂ.69.30 ಲಕ್ಷ), ಯಾದಗಿರಿ (ರೂ.56.21 ಲಕ್ಷ), ಹುಣಸಗಿ (ರೂ.44.22 ಲಕ್ಷ), ಗುರುಮಠಕಲ್ (ರೂ.41.09 ಲಕ್ಷ) ಮತ್ತು ವಡಗೇರಾ (ರೂ.24.12 ಲಕ್ಷ) ತಾಲೂಕುಗಳು ಸ್ಥಾನ ಪಡೆದಿವೆ.

  • ಕಳೆದ ವರ್ಷ ಕರ ಸಂಗ್ರಹ ಅಭಿಯಾನದಲ್ಲಿ ₹1.46 ಕೋಟಿ ರು.ಗಳ ಸಂಗ್ರಹಿಸಲಾಗಿತ್ತು.
  • ಕಳೆದ ನವೆಂಬರ್‌ ನಲ್ಲಿ ಕರ ಸಂಗ್ರಹ ಅಭಿಯಾನದಲ್ಲಿ ₹2.68 ಕೋಟಿ ಸಂಗ್ರಹಿಸಲಾಗಿತ್ತು.
  • ಜ. 21 ರಂದು ₹3.12 ಕೋಟಿ ದಾಖಲೆಯ ಸಂಗ್ರಹ

ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದ ಜಿ.ಪ. ಸಿಇಒ

ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾದ ತೆರಿಗೆ ವಸೂಲಾತಿ ಅಭಿಯಾನಕ್ಕೆ ಗ್ರಾಮೀಣ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕೊಂಕಲ್‌ ಗ್ರಾಮದಲ್ಲಿ ಕರ ಪಾವತಿಸಿದ ಗ್ರಾಮಸ್ಥರಿಗೆ ಜಿಪಂ ಸಿಇಒ ಲವೀಶ್ ಒರಡಿಯಾ ಧನ್ಯವಾದಗಳ ಅರ್ಪಿಸಿದರು.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ವಂಚಕರ ಪತ್ತೆಗೆ ಬೇಟೆ ಶುರು