ಸಂಸದ ಸುನೀಲ್ ಬೋಸ್, ಅಯೋಧ್ಯೆ ರಾಮ ಮಂದಿರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಮನ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿಗೆ ಮೊದಲು ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಮುನ್ನ ವಾಲ್ಮೀಕಿ ಪ್ರತಿಮೆ ಸ್ಥಾಪಿಸಬೇಕಿತ್ತು
ಮೈಸೂರು : ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್ ಬೋಸ್ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಮನಿಗೆ ಪೂಜೆ ಸಲ್ಲಿಸುವ ಮೊದಲು ಮಹರ್ಷಿ ವಾಲ್ಮೀಕಿಗೆ ಪೂಜೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ರಾಮನ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೇತಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಸುನೀಲ್ ಬೋಸ್, “ರಾಮನ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ. ಆದ್ದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಮುಂಚೆ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಬೇಕಿತ್ತು. ಮೊದಲು ವಾಲ್ಮೀಕಿಗೆ ಪೂಜೆ ಸಲ್ಲಿಸಿ, ನಂತರ ರಾಮನಿಗೆ ಪೂಜೆ ಸಲ್ಲಬೇಕಾಗಿತ್ತು” ಎಂದು ಹೇಳಿದರು.
ಸಮಾಜಕ್ಕೆ ಶೂದ್ರರ ಕೊಡುಗೆ ಹೆಚ್ಚು
ಮಹರ್ಷಿ ವಾಲ್ಮೀಕಿ ಶೂದ್ರ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ ಅವರು, “ಸಮಾಜದಲ್ಲಿ ಒಂದು ವರ್ಗವನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಎಲ್ಲರೂ ಶೂದ್ರರೆ. ರಾಮನ ಸೃಷ್ಟಿಕರ್ತ ವಾಲ್ಮೀಕಿ ಶೂದ್ರರಾಗಿದ್ದಾರೆ. ಕೃಷ್ಣನ ಮಹಾಭಾರತವನ್ನು ರಚಿಸಿದ ವ್ಯಾಸರು ಬೆಸ್ತ ಸಮುದಾಯಕ್ಕೆ ಸೇರಿದವರು. ಭಾರತೀಯ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಮುದಾಯದವರು. ಇಂತಹ ಮಹತ್ವದ ಕೃತಿ, ಕಾವ್ಯ, ಸಂವಿಧಾನಗಳನ್ನು ಸಮಾಜಕ್ಕೆ ಕೊಟ್ಟವರು ಶೂದ್ರ ಸಮುದಾಯದವರೇ” ಎಂದರು.
ಇತಿಹಾಸದಲ್ಲಿ ಮೇಲ್ಜಾತಿಯಿಂದ ಯಾವುದೇ ಮಹತ್ವದ ಕೃತಿ ಅಥವಾ ಕಾವ್ಯ ಬಂದಿರುವ ಉದಾಹರಣೆ ಇಲ್ಲ ಎಂದು ಸಂಸದ ಸುನೀಲ್ ಬೋಸ್ ಟೀಕಿಸಿದರು. “ಇಂದಿನ ಸಮಾಜದಲ್ಲಿಯೂ ರಾಮಾಯಣದ ಪಾತ್ರಗಳಂತೆಯೇ ಜನರನ್ನು ನೋಡಬಹುದು. ರಾಮ, ಹನುಮ, ವಾಲ್ಮೀಕಿ – ಈ ಎಲ್ಲ ಪಾತ್ರಗಳನ್ನು ಪರಸ್ಪರವಾಗಿ ಲಿಂಕ್ ಮಾಡಲಾಗುತ್ತಿದೆ. ರಾಮ ಅಂದ್ರೆ ವಾಲ್ಮೀಕಿ ಸೃಷ್ಟಿ ಎನ್ನುವ ಸತ್ಯವನ್ನು ಮರೆತುಬಿಡಲಾಗುತ್ತಿದೆ” ಎಂದು ಹೇಳಿದರು.
ಹಿಂದೂ ಧರ್ಮದ ಏಕತೆ ಕುರಿತು ಮಾತನಾಡಿದ ಅವರು, “ನಾವೆಲ್ಲರೂ ಹಿಂದೂಗಳು, ಹಿಂದೂ ಧರ್ಮಕ್ಕೆ ಬನ್ನಿ ಎಂದು ಹೇಳುತ್ತಾರೆ. ಹಾಗಿದ್ದರೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಮುಂಚೆ ವಾಲ್ಮೀಕಿ ಪುತ್ಥಳಿ ಸ್ಥಾಪಿಸಬೇಕಿತ್ತು. ರಾಮ ಮಂದಿರ ಪ್ರವೇಶದ್ವಾರದಲ್ಲೇ ವಾಲ್ಮೀಕಿ ಪ್ರತಿಮೆ ಇರಬೇಕಿತ್ತಲ್ಲ?” ಎಂದು ಪ್ರಶ್ನಿಸಿದರು.
ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಸಂಸದ ಸುನೀಲ್ ಬೋಸ್, “ರಾಮನ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಎಂಬ ಸತ್ಯವನ್ನು ಮರೆಸುವ ಪ್ರಯತ್ನ ನಡೆಯುತ್ತಿದೆ. ನಾವೆಲ್ಲ ಒಂದೇ ಎಂದು ಹೇಳುವವರು ಮೊದಲು ಅಯೋಧ್ಯೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಲಿ. ಮೊದಲು ವಾಲ್ಮೀಕಿಗೆ ಪೂಜೆ ಸಲ್ಲಿಸಲಿ, ನಂತರ ರಾಮನಿಗೆ ಪೂಜೆ ಸಲ್ಲಲಿ” ಎಂದು ಒತ್ತಾಯಿಸಿದರು. ಸಂಸದ ಸುನೀಲ್ ಬೋಸ್ ಅವರ ಈ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ.


