ವಿಜಯಪುರದಲ್ಲಿದೆ ಜಗತ್ತಿನ ಅತಿದೊಡ್ಡ ಲಿಪಿ ಕಟ್ಟಡ: ಭೂಕಂಪನಕ್ಕೂ ಇದು ಜಗ್ಗಲ್ಲ..!
* 60 ವರ್ಷಗಳ ಕಾಲ ಗೋಧಿ ಪ್ರಸಾದ ತ್ಯಜಿಸಿದ್ದ ಶ್ರೀಗಳು
* ಭಕ್ತರಿಗೆ 100 ಕ್ವಿಂಟಲ್ ಬೂಂದಿ ಊಟದ ವ್ಯವಸ್ಥೆ
* ಮಹಾತ್ಯಾಗಿ ಎಂತಲೆ ಕರೆಯಿಸಿಕೊಳ್ಳುವ ಚನ್ನಬಸವ ಮಹಾಸ್ವಾಮಿಗಳು
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಜೂ.09): ಸಮಸ್ತ ಭೂ ಮಂಡಲದಲ್ಲಿ ಒಂದಿಲ್ಲೊಂದು ವಿಶೇಷತೆಗಳನ್ನು ಹೊಂದಿರುವ ಹಲವು ಕಟ್ಟಡಗಳು ನಮಗೆ ನೋಡಲು ಸಿಗುತ್ತವೆ. ಆದ್ರೆ ಜಗತ್ತಿನಲ್ಲೇ ಅತಿದೊಡ್ಡ ಲಿಪಿ ಕಟ್ಟಡವೊಂದು ವಿಶ್ವಗುರು ಬಸವಣ್ಣನ ನಾಡಿನಲ್ಲಿ ನಿರ್ಮಾಣವಾಗಿದೆ. ಕಳೆದ 24 ವರ್ಷಗಳಿಂದ ನಿರ್ಮಿಸಲಾದ ವನಚ ಶಿಲಾ ಮಂಟಪವನ್ನ ರಾಜ್ಯಪಾಲರು ಲೋಕಾರ್ಪಣೆಗೊಳಿಸಿದ್ದಾರೆ.
ಬಸವ ಜನ್ಮಸ್ಥಳದಲ್ಲಿದೆ ವಚನ ಶಿಲಾ ಮಂಟಪ
ಶೆಲ್ಲಿಕೇರಿ ಕಲ್ಲಿನಲ್ಲೇ ನಿರ್ಮಾಣವಾಗಿ, ವಚನಗಳ ಕೆತ್ತನೆ ಮಾಡಿರುವ ಈ ವಚನ ಶಿಲಾ ಮಂಟಪ ಇರುವುದು ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ. 12ನೇ ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ್ದ ವಿಶ್ವಗುರು ಬಸವಣ್ಣನ ವಚನಗಳು ಅಜರಾಮರವಾಗಿರಬೇಕು ಎಂಬ ದೃಷ್ಠಿಯಿಂದ ಇಂಗಳೇಶ್ವರ ವಿರಕ್ತ ಮಠದ ಪೂಜ್ಯರಾದ ಚನ್ನಬಸವ ಮಹಾಸ್ವಾಮಿಗಳು ಸುದೀರ್ಘ 45 ವರ್ಷಗಳ ನಿರಂತರ ಶ್ರಮಪಟ್ಟು ಬಸವೇಶ್ವರ ವಚನ ಶಿಲಾಶಾಸನ ಮಂಟಪ ನಿರ್ಮಿಸಿದ್ದಾರೆ.
INDIA@75: ವಿಜಯಪುರದ ಕೋಟ್ನಾಳದಲ್ಲಿ ಕಟ್ಟಲಾಗಿತ್ತು ಬ್ರಿಟಿಷರ ವಿರುದ್ಧ ಸೈನ್ಯ
ಜಗತ್ತಿನ ಅತಿದೊಡ್ಡ ಲಿಪಿ ಕಟ್ಟಡದ ಖ್ಯಾತಿ
ಈ ಮಂಟಪದಲ್ಲಿ ಸುಮಾರು 1ಲಕ್ಷ 70 ಸಾವಿರ ಅಕ್ಷರಗಳುಳ್ಳ 1500ಕ್ಕೂ ಅಧಿಕ ವಚನಗಳ ಕೆತ್ತನೆ ಮಾಡಲಾಗಿದ್ದು, ಇದು ಜಗತ್ತಿನ ಅತಿದೊಡ್ಡ ಲಿಪಿ ಕಟ್ಟಡ ಎನ್ನಲಾಗಿದೆ. ಬಸವಣ್ಣನವರ ವಚನಗಳನ್ನು ಶಾಶ್ವತವಾಗಿ ಉಳಿಸಲು ಕಟ್ಟಡಕ್ಕೆ ಬಳಸಲಾದ ಗೋಡೆಯ ಕಲ್ಲುಗಳ ಮೇಲೆಯೇ ವಚನ ಕೆತ್ತಿಸಿ ಕಟ್ಟಡ ನಿರ್ಮಿಸಲಾಗಿದ್ದು, ನೋಡುತ್ತಿದ್ದರೆ ಜನರನ್ನ ಮಂತ್ರಮುಗ್ದಗೊಳಿಸುವಂತಿದೆ. ಇದನ್ನ ನೋಡಲೆಂದೇ ನಾನಾ ಕಡೆಗಳಿಂದ ಭಕ್ತರು, ಶರಣು ಭೇಟಿ ನೀಡ್ತಾರೆ. ದೇಶ ವಿದೇಶದಿಂದ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಿದ್ದು, ಇದೊಂದು ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿ ಪರಿಣಮಿಸಿದೆ.
ಭೂಕಂಪನಕ್ಕೂ ಜಗ್ಗಲ್ಲ ಈ ಕಟ್ಟಡ
ಈ ಕಟ್ಟಡ ಭೂಕಂಪನಕ್ಕೂ ಜಗ್ಗದ ರೀತಿಯಲ್ಲಿ ವಿಶಿಷ್ಠ ತಂತ್ರಜ್ಞಾನದಲ್ಲಿ ನಿರ್ಮಿತವಾಗಿದೆ. ಷಟ್ಕೋನದ ಆಕೃತಿಯಲ್ಲಿರುವ ಈ ಕಟ್ಟಡ 93 ಅಡಿ ಹೊರಾಂಗಣ 43ಅಡಿ ಒಳಾಂಗಣ ಹೊಂದಿದೆ. ಅಲ್ಲದೆ ಇಲ್ಲಿನ ಕಂಬಗಳು ಸಹ ಶಟಸ್ಥಲ ರೀತಿಯಲ್ಲೇ ನಿರ್ಮಿತವಾಗಿವೆ. ಷಟ್ಕೋನಾಕಾರದಲ್ಲಿ ವಿಶಿಷ್ಟ ತಂತ್ರಜ್ಞಾನದ ಮೂಲಕ ನಿರ್ಮಾಣವಾಗಿರುವ ಕಾರಣ ಇದಕ್ಕೆ ಯಾವುದೇ ಭೂಕಂಪನದ ಪರಿಣಾಮ ಆಗೋದಿಲ್ಲ ಎನ್ನಲಾಗಿದೆ. ಹೀಗಾಗಿ ಈ ಕಟ್ಟಡವನ್ನ ಭೂಕಂಪಕ್ಕು ಜಗ್ಗದ ವಚನ ಶಿಲಾ ಮಂಟಪ ಎನ್ನಲಾಗುತ್ತೆ.
60 ವರ್ಷಗಳ ಕಾಲ ಗೋಧಿ ಪ್ರಸಾದ ತ್ಯಜಿಸಿದ್ದ ಶ್ರೀಗಳು
1968ರಿಂದ ಇಲ್ಲಿಯವರೆಗೂ ಶ್ರಮ ವಹಿಸಿದ ಚನ್ನಬಸವ ಮಹಾಸ್ವಾಮಿಗಳು ಭಾರತದ ಇತಿಹಾಸದಲ್ಲೂ ಮಹತ್ವದ ಕಾರ್ಯ ಮಾಡಿದ್ದಾರೆ. ಇಂತಹ ಶ್ರೀಗಳಿಗೆ ಇದೀಗ 93 ವರ್ಷ ವಯಸ್ಸಾಗಿದ್ದು, ಮಹಾತ್ಯಾಗಿ ಎಂತಲೆ ಕರೆಯಿಸಿಕೊಳ್ತಿದ್ದಾರೆ. ಮಹಾತ್ಯಾಗಿಗಳು ಎನ್ನುವ ಬಿರುದು ಬರೋದಕ್ಕೂ ಒಂದು ಕಾರಣವಿದೆ. ಏನಂದ್ರೆ ಕಳೆದ 60ವರ್ಷಗಳ ವರೆಗೆ ಭಕ್ತರಿಗಾಗಿ ಗೋಧಿ ಪ್ರಸಾದವನ್ನೇ ತ್ಯಜಿಸಿದ್ದರು. ಗೋಧಿ ಚಪಾತಿ, ಗೋಧಿ ಸಜ್ಜಕ, ಗೋಧಿ ಹುಗ್ಗಿ ಸೇರಿದಂತೆ ಗೋಧಿಯಿಂದ ತಯಾರಾಗುವ ಹೋಳಿಗೆ, ಸೇರಿ ಎಲ್ಲ ಪದಾರ್ಥಗಳನ್ನು ತ್ಯಜಿಸಿದ್ದರು. ಇಂಥ ಶ್ರೀಗಳು ದಾಸೋಹ ಪ್ರೇಮಿ ಇವರು ಎಂಬುದು ಮತ್ತೊಂದು ವಿಶೇಷ.
ಬಸವ ಜನ್ಮಭೂಮಿಯಲ್ಲಿ Vijayapura DCಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ!
ರಾಜ್ಯಪಾಲರಿಂದ ಲೋಕಾರ್ಪಣೆ
ಇಂಥ ಅದ್ಭುತವನ್ನ ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್ ಉದ್ಘಾಟಿಸುವ ಮೂಲಕ ಲೋಕಾರ್ಪಣೆ ಗೊಳಿಸಿದ್ದಾರೆ. ವಿಜೃಂಭಣೆಯಿಂದ ನಡೆದ ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಾಡಿದ ಸ್ವಾಮೀಜಿಗಳು, ರಾಜಕಾರಣಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
100 ಕ್ವಿಂಟಲ್ ಬೂಂದಿ ಊಟದ ವ್ಯವಸ್ಥೆ
ವಚನ ಶಿಲಾ ಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದ ಭಕ್ತರಿಗಾಗಿ 100 ಕ್ವಿಂಟಲ್ ಬೂಂದಿ ಹಾಗೂ 70 ಟ್ರ್ಯಾಕ್ಟರ್ ರೊಟ್ಟಿ ಸೇರಿದಂತೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇದೆಲ್ಲವನ್ನೂ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ 830ಕ್ಕೂ ಅಧಿಕ ಹಳ್ಳಿಗಳ ಭಕ್ತರು ಪೂರೈಸಿದ್ದಾರೆ ಅನ್ನೋದು ಮತ್ತೊಂದು ಅಚ್ಚರಿಯ ಸಂಗತಿ.