ಹಂದಿಗುಂದ(ಏ.11): ಕೊರೋನಾ ತಡೆಗೆ ದೇಶವನ್ನೇ ಲಾಕ್‌ಡೌನ್‌ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕರೆ ನೀಡಲಾಗಿದೆ. ಆದರೆ, ಇಲ್ಲೊಬ್ಬ ಗುತ್ತಿಗೆದಾರ ಮಾತ್ರ ರಸ್ತೆ ಕಾಮಗಾರಿಗೆ ಕೂಲಿಗಳನ್ನು ಕರೆದುಕೊಂಡು ಬಂದು ಕಾಮಗಾರಿ ನಡೆಸಿದ್ದಾನೆ. ಇದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಬಾಂವಿ ಗ್ರಾಮದಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ಪಕ್ಕದಲ್ಲಿ ಕುಡಚಿ ಶಾಸಕ ಪಿ.ರಾಜೀವ್‌ ಅವರ ಅನುದಾನದಡಿ 1 ಕೋಟಿ ವೆಚ್ಚದಲ್ಲಿ ಮುಗಳಖೋಡ ಮಹಾಲಿಂಗಪುರ ಕೆನಾಲ್‌ ರಸ್ತೆಯಿಂದ ಪಾಲಬಾಂವಿ ಶಿವಾನಂದ ಕಾಡಶೆಟ್ಟಿ ತೋಟದವರೆಗಿನ ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆದಾರರೊಬ್ಬರು 25ಕ್ಕೂ ಹೆಚ್ಚು ದಿನಗೂಲಿ ಕೆಲಸಗಾರರನ್ನು ಮೂಡಲಗಿಯಿಂದ ಕರೆತಂದು ಕೆಲಸ ಮಾಡಿಸುತ್ತಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಕೊರೋನಾ ಹೊಡೆತಕ್ಕೆ ನಲುಗಿದ ಬ್ಯಾಂಕ್‌ಗಳು!

ಪತ್ರಕರ್ತರು ವಿಡಿಯೋ ಹಾಗೂ ಫೋಟೋ ತೆಗೆಯಲು ಯತ್ನಿಸಿದಾಗ ಪತ್ರಕರ್ತರೊಂದಿಗೆ ಗುತ್ತಿಗೆದಾರನ ಸಹಾಯಕ ವಾಗ್ವಾದ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಗುತ್ತಿಗೆದಾರ ಆಗಮಿಸಿದರು. ಅಷ್ಟರಲ್ಲೇ ಪೊಲೀಸರು ಹಾಗೂ ಜೆಎಲ್‌ಬಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡ ಕೂಡಲೇ ಕೂಲಿ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ್ದಾರೆ. 

ನಾವು ನಮ್ಮ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿದ್ದು ಅವರಿಗೆ ವಾರಕ್ಕೆ .2 ಸಾವಿರ ಔಷಧ ಖರ್ಚು ಇದ್ದು ಅದನ್ನು ನಿಭಾಯಿಸಲು ದುಡಿಮೆ ಅನಿವಾರ್ಯವಾಗಿದೆ ಎಂದು ಮೂಡಲಗಿ ಕೆಲಸಗಾರ ಸದಾಶಿವ ಗಾಡಿವಡ್ಡರ ಅವರು ತಿಳಿಸಿದ್ದಾರೆ.