ನಾರಾಯಣ ಹೆಗಡೆ

ಹಾವೇರಿ(ಏ.18): ಲಾಕ್‌ಡೌನ್‌ ಮಧ್ಯೆಯೂ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಆರಂಭಗೊಂಡಿದ್ದು, ಕೊರೋನಾದಿಂದ ಕಂಗೆಟ್ಟಿರುವ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಇದು ಸಂಜೀವಿನಿಯಂತೆ ಕೈಡಿದಿದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಕೂಲಿ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದಾರೆ.

ಕೊರೋನಾ ಮಹಾಮಾರಿ ಎಲ್ಲೆಡೆ ಕರಾಳ ಹಸ್ತ ಚಾಚಿದ್ದು, ಅದು ಬಡ ಕೂಲಿ ಕಾರ್ಮಿಕ ಕುಟುಂಬಗಳ ದೈನಂದಿನ ಜೀವನಕ್ಕೇ ಕೊಳ್ಳಿ ಇಟ್ಟಿದೆ. ಸುಮಾರು ಒಂದು ತಿಂಗಳೀಚೆಗೆ ಕಾರ್ಮಿಕರು ಕೆಲಸವಿಲ್ಲದೇ ಕೂರುವಂತಾಗಿದೆ. ಒಂದು ಕಡೆ ಕೊರೋನಾ ಆತಂಕದಿಂದ ಮನೆಯಿಂದ ಹೊರಬೀಳುವಂತಿಲ್ಲ, ಇನ್ನೊಂದೆಡೆ ಎಲ್ಲೂ ಕೆಲಸ ಸಿಗದ್ದರಿಂದ ಗ್ರಾಮೀಣ ಬಡ ಕುಟುಂಬಗಳು ತೊಂದರೆಗೆ ಸಿಲುಕಿದ್ದವು. ಈಗ ಸಾಮಾಜಿಕ ಅಂತರ ಕಾಯ್ದುಕೊಂಡು, ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಗೊಂಡಿದೆ. ನಿತ್ಯ ನಾಲ್ಕೈದು ಸಾವಿರ ಕಾರ್ಮಿಕರು ಬರುತ್ತಿದ್ದಾರೆ.

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಅಂತರ ಕಾಯ್ದುಕೊಂಡೇ ಕೆಲಸ:

ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲೂ ಅನುಸರಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಸ್ಯಾನಿಟೈಸರ್‌, ಕೈತೊಳೆಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ತಿಳಿಸಲಾಗಿದೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಂಡು ಕಾಮಗಾರಿ ನಡೆಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದ ಆತಂಕವಿಲ್ಲದೇ ಕೆಲಸ ನಿರ್ವಹಿಸಲು ಕಾರ್ಮಿಕರಿಗೆ ಅನುಕೂಲವಾಗಿದೆ.

ಜಿಲ್ಲೆಯಲ್ಲಿ ಏಪ್ರಿಲ್‌ ತಿಂಗಳಲ್ಲಿ ಒಂದೂವರೆ ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿತ್ತು. ಆದರೆ, ಕೊರೋನಾ ವಕ್ಕರಿಸಿದ್ದರಿಂದ ಎಲ್ಲವೂ ಬುಡಮೇಲಾಗಿದೆ. ಕೇಂದ್ರ ಸರ್ಕಾರ ಕೂಲಿ ಮೊತ್ತವನ್ನು . 249ರಿಂದ . 275ಕ್ಕೆ ಹೆಚ್ಚಿಸಿದ್ದು, ವಾರದೊಳಗೆ ಹಣವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡುವ ನಿರ್ಧಾರ ಕೈಗೊಂಡಿದೆ. ಏ. 1ರಿಂದ 16ರ ವರೆಗೆ 27,721 ಮಾನವ ದಿನಗಳು ಸೃಜನೆಯಾಗಿವೆ. 2660 ಕಾಮಗಾರಿಗಳಿಗೆ ಅನುಮತಿ ನೀಡಲಾಗಿದ್ದು, ಆ ಪೈಕಿ 849 ಕಾಮಗಾರಿ ಶುರುವಾಗಿವೆ. ನಿತ್ಯ 6 ಸಾವಿರ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ.

ಕಾರ್ಮಿಕರಿಗೆ ಜಾಗೃತಿ:

ಕೊರೋನಾ ಆತಂಕದಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿರಲಿಲ್ಲ. ಕೂಲಿ ಮೊತ್ತ ಹೆಚ್ಚಿಸಿದ್ದರೂ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕೆಲವು ದಿನಗಳಿಂದ ಅಗತ್ಯ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟಿದ್ದರಿಂದ ಈಗ ಕೆಲಸಕ್ಕೆ ಬರುತ್ತಿದ್ದಾರೆ.

ಮುಖ್ಯವಾಗಿ ಬದು ನಿರ್ಮಾಣ, ತೋಟಗಾರಿಕೆ, ಕೆರೆ ಹೂಳೆತ್ತುವುದು, ಅರಣ್ಯೀಕರಣ, ರಸ್ತೆ ಇತ್ಯಾದಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಬ್ಬನೇ ಕಾರ್ಮಿಕ ಕೆಲಸ ಬೇಕೆಂದರೂ ನೀಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 1.15 ಲಕ್ಷ ಕುಟುಂಬಗಳು ಜಾಬ್‌ಕಾರ್ಡ್‌ ಹೊಂದಿದ್ದು, 2.43 ಲಕ್ಷ ಸಕ್ರಿಯ ಕಾರ್ಮಿಕರಿದ್ದಾರೆ. ಆದರೂ ಸದ್ಯದ ಕೊರೋನಾ ಆತಂಕದಿಂದ ಕೆಲಸಕ್ಕೆ ಕಾರ್ಮಿಕರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗದ್ದರಿಂದ ನಿಧಾನವಾಗಿ ಕಾರ್ಮಿಕರು ಕೆಲಸಕ್ಕೆ ಬರಲು ಶುರುಮಾಡಿದ್ದಾರೆ. ಬಡ ಕುಟುಂಬಗಳಿಗೆ ಖಾತ್ರಿ ಯೋಜನೆ ಆಸರೆಯೆನಿಸಿದೆ.

ಈ ಬಗ್ಗೆ ಮಾತನಾಡಿದ ಜಿಪಂ ಸಿಇಒ ರಮೇಶ ದೇಸಾಯಿ ಅವರು, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾಜಿಕ ಅಂತರ ನಿಯಮ ಕಾಯ್ದುಕೊಂಡೇ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡು ಕೂಲಿ ಕಾರ್ಮಿಕರು ಕೆಲಸ ಮಾಡಲು ಯಾವುದೇ ಸಮಸ್ಯೆಯಿಲ್ಲ. ಯಾರೇ ಉದ್ಯೋಗ ಕೇಳಿಕೊಂಡು ಬಂದರೂ ನೀಡಲಾಗುವುದು ಎಂದು ಹೇಳಿದ್ದಾರೆ.