ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜನಪರ ಕಾರ್ಯಕ್ರಮಗಳ ಹಿನ್ನಲೆ ವಿವಿಧ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

 ಪಾವಗಡ : ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜನಪರ ಕಾರ್ಯಕ್ರಮಗಳ ಹಿನ್ನಲೆ ವಿವಿಧ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ಪಟ್ಟಣದ ಮೆಹರ್‌ ಬಾಬಾ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನಿಂದ ಸುಮಾರು 160ಕ್ಕೂ ಹೆಚ್ಚು ಸದಸ್ಯರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ತಾವು ಶಾಸಕರಾಗಿದ್ದ ಅವಧಿಯ ಜನಪರ ಕಾರ್ಯಕ್ರಮ ಹಾಗೂ ಪಕ್ಷದ ನಾಯಕತ್ವದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಬಿಜೆಪಿಯಿಂದ ಆನೇಕ ಮಂದಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದು, ಜೆಡಿಎಸ್‌ನತ್ತ ಜನತೆ ಒಲವು ವ್ಯಕ್ತವಾಗುತ್ತಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪಕ್ಷದಲ್ಲಿ ಉನ್ನತಾ ಸ್ಥಾನಮಾನ ನೀಡುವ ಮೂಲಕ ವಿಶೇಷವಾಗಿ ಪರಿಗಣಿಸಲಾಗುವುದಾಗಿ ಹೇಳಿದರು.

ಇದೇ ವೇಳೆ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಅಂಜಿನಪ್ಪ, ರಾಜ್ಯ ಜೆಡಿಎಸ್‌ ಘಟಕದ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ ಇತರೆ ಮುಖಂಡರು ಮಾತನಾಡಿದರು. ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಎನ್‌.ಎ.ಈರಣ್ಣ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಗೌರವಾಧ್ಯಕ್ಷ ರಾಜಶೇಖರಪ್ಪ, ಗುಟ್ಟಹಳ್ಳಿ ಮಣಿ, ಮಾಜಿ ಪುರಸಭೆ ಸದಸ್ಯರಾದ ಮನುಮಹೇಶ್‌, ಜಿ.ಎ.ವೆಂಕಟೇಶ್‌, ನಾಗೇಂದ್ರಪ್ಪ, ವಸಂತ್‌ಕುಮಾರ್‌, ಗೋಪಾಲ್‌ ಕಾವಲಗೆರೆ, ರಾಮಾಂಜಿನಪ್ಪ ಅಪ್‌ಬಂಡೆ, ಗೋಪಾಲ್‌ ಜಾಲೋಡು, ಪರಮೇಶ್‌ಕೆ.ಟಿ.ಹಳ್ಳಿ, ಸೋಡಾ ಮಂಜುನಾಥ್‌ ಹಾಗೂ ಆನೇಕ ಮಂದಿ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 ಜನತೆಗೆ ಜೆಡಿಎಸ್ ಆಶಾಕಿರಣ

ತುರುವೇಕೆರೆ : ಬಿಜೆಪಿಯ ಚುಕ್ಕಾಣಿ ಹಿಡಿದಿದ್ದ ಬಿ.ಎಸ್‌.ಯಡಿಯೂರಪ್ಪನವರ ಹಿಂದೆಯೇ ಬಿಜೆಪಿಯೂ ಹೋಯ್ತು. ಜೈಲು ಮತ್ತು ಬೇಲು ಇಲ್ಲದವರೆಂದರೆ ಅದು ಜೆಡಿಎಸ್‌ನವರು ಮಾತ್ರ. ಹಾಗಾಗಿ ರಾಜ್ಯದ ಜನರ ಆಶಾಕಿರಣವಾಗಿರುವುದು ಜೆಡಿಎಸ್‌ ಮಾತ್ರ ಎಂದು ರಾಜ್ಯ ಜೆಡಿಎಸ್‌ನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಪಟ್ಟಣದ ಗುರುಭವನ ಆವರಣದಲ್ಲಿ ನಡೆದ ತಾಲೂಕು ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಸಮಾವೇಶದಲ್ಲಿ ಮಾತನಾಡಿದರು

ಕುಮಾರಸ್ವಾಮಿಯವರು ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯ ರೀತಿ ಐವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಮಾಡಲು ಏಕೆ ಆಗಲಿಲ್ಲ. ಈಗ ಮನೆಗೆ 200 ಯುನಿಟ್‌ ವಿದ್ಯುತ್‌ ಫ್ರೀ, ಮನೆ ಯಜಮಾನಿಗೆ 2000 ರು. ಫ್ರೀ ಅಂತ ಹೇಳ್ತಾ ಇದ್ದಾರೆ. ಇದು ಮನೆಯಲ್ಲಿ ಜಗಳ ತಂದಿಡುವ ಸ್ಕೀಂ. ಕಾಂಗ್ರೆಸ್‌ನವರ ಸ್ಕೀಂನಿಂದ ಮನೆ ಮುರಿಯುತ್ತದೆ. ಆದರೆ ಕುಮಾರಸ್ವಾಮಿ ಸ್ಕೀಂನಿಂದ ಮನೆ, ಊರು ಎಲ್ಲವೂ ತಣ್ಣಗಿರುತ್ತದೆ ಎಂದು ಹೇಳಿದರು.

ರಾಜ್ಯಾದ್ಯಂತ ಜೆಡಿಎಸ್‌ ಅಲೆ ಇದೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ನಿಚ್ಚಳ ಬಹುಮತ ಪಡೆದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರು ಖಚಿತ. ರಾಜ್ಯದ ಜನತೆ ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದ ಸಾಧನೆಯನ್ನು ನೋಡಿ ಸಾಕಾಗಿ ಹೋಗಿದ್ದಾರೆ. ಐದು ವರ್ಷಗಳ ಕಾಲ ಜೆಡಿಎಸ್‌ಗೆ ಅಧಿಕಾರ ನೀಡಿದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಜೆಡಿಎಸ್‌ನಲ್ಲಿದ್ದು ನಂತರ ಕಾಂಗ್ರೆಸ್‌ಗೆ ಹೋದ ಬೆಮಲ್‌ ಕಾಂತರಾಜ್‌ರವರ ಮಾತು ಕೇಳಿ ಗುಬ್ಬಿ ಶಾಸಕ ಶ್ರೀನಿವಾಸ್‌ರವರು ತಮ್ಮ ರಾಜಕೀಯ ಜೀವನವನ್ನು ಹಾಳು ಮಾಡಿಕೊಂಡರು. ಈಗ ಜೆಡಿಎಸ್‌ನಲ್ಲೂ ಇಲ್ಲದೇ ಅತ್ತ ಕಾಂಗ್ರೆಸ್‌ಗೂ ಸೇರಲಾಗದೇ ಅತಂತ್ರರಾಗಿದ್ದಾರೆಂದು ಹೇಳಿದರು.

ಬಿಜೆಪಿಯ ಬಿ ಟೀಂ ಕಾಂಗ್ರೆಸ್‌ ಎಂದು ರಾಜ್ಯ ಜೆಡಿಎಸ್‌ನ ಅಲ್ಪಸಂಖ್ಯಾತರ ಮಹಿಳಾ ಘಟಕದ ಉಪಾಧ್ಯಕ್ಷೆ ನಜ್ಮಾ ನಜೀರ್‌ ಹೇಳಿದರು. ಇದುವರೆಗೂ ಕಾಂಗ್ರೆಸ್‌ನವರು ಬಿಜೆಪಿಯನ್ನು ವಿರೋಧಿಸುವ ನಾಟಕವಾಡಿದರು. ಕಾಂಗ್ರೆಸ್‌ನ ಶಾಸಕರನ್ನೇ ಬಿಜೆಪಿಗೆ ಸೇರುವಂತೆ ಮಾಡಿ ಬಿಜೆಪಿ ಸರ್ಕಾರ ಬರಲು ಕಾರಣೀಭೂತರಾದರು. ಈಗ ಬಿಜೆಪಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರನ್ನು ಕಿತ್ತು ತಿನ್ನುವ ಪಕ್ಷವಾಗಿದೆ. ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಗೆ ಮತ ನೀಡಿದರೆ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದರು.