ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಬಂದಿಲ್ಲ ಕೇಂದ್ರದ ಅನುದಾನ, ಕಾಮಗಾರಿ ನಿಧಾನ
ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಜಿಲ್ಲೆಯ ಸುಮಾರು 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು. ಅನುದಾನ ಒದಗಿಸುವುದಾಗಿ ಹೇಳಿತ್ತು. ಕಳೆದ ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕೂಡಾ 5300 ಕೋಟಿ ರು. ಅನುದಾನದ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದವರೆಗೂ ಒಂದು ಪೈಸೆ ಅನುದಾನ ಬಿಡುಗಡೆಯಾಗಿಲ್ಲ.
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ(ಆ.05): ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗಿದೆ. ಗುತ್ತಿಗೆದಾರರಿಗೆ 1156 ಕೋಟಿ ರು. ಹಾಗೂ ಭೂ ಸ್ವಾಧೀನ ಮಾಡಿಕೊಂಡ ಬಾಬತ್ತು ರೈತರಿಗೆ 615 ಕೋಟಿ ರು. ಸೇರಿದಂತೆ ಒಟ್ಟಾರೆ 1794 ಕೋಟಿ ರು. ಬಾಕಿ ಇದ್ದು ಬಹುತೇಕ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಜಿಲ್ಲೆಯ ಸುಮಾರು 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು. ಅನುದಾನ ಒದಗಿಸುವುದಾಗಿ ಹೇಳಿತ್ತು. ಕಳೆದ ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕೂಡಾ 5300 ಕೋಟಿ ರು. ಅನುದಾನದ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದವರೆಗೂ ಒಂದು ಪೈಸೆ ಅನುದಾನ ಬಿಡುಗಡೆಯಾಗಿಲ್ಲ.
ಆಂಧ್ರದಿಂದ ಮತ್ತೆ ಕ್ಯಾತೆ..! ಭದ್ರಾ ಮೇಲ್ದಂಡೆ ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ
22 ಸಾವಿರ ಕೋಟಿ ರು. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ 7400 ಕೋಟಿ ರು. ವೆಚ್ಚ ಮಾಡಿದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಪ್ರಸ್ತಾಪಗಳು ಕೇಂದ್ರದಿಂದ ಬಂದ ನಂತರ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ಅನುದಾನ ಒದಗಿಸಲು ಹಿಂದೇಟು ಹಾಕಿತ್ತು. ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ದದೆ ಎಂದು ಆಸೆಕಣ್ಗಳಿಂದ ಕಾದು ಕುಳಿತಿದೆ. ತಾನೂ ಕೂಡಾ ಅನುದಾನ ಒದಗಿಸುವ ಉಸಾಬರಿಗೆ ಹೋಗಿಲ್ಲ.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಬೇಕಾದ ಪೂರಕ ಎಲ್ಲ ದಾಖಲಾತಿಗಳು, ಅರಣ್ಯ ಇಲಾಖೆ ಕ್ಲಿಯರೆನ್ಸ್ ರಾಜ್ಯ ಸರ್ಕಾರ ಒದಗಿಸಿದೆ. ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧಿಕಾರಿಗಳು ಕಳೆದ ಡಿಸೆಂಬರ್ 8 ರಂದು ನಡೆದ ಕೇಂದ್ರ ಸಚಿವ ಸಂಪುಟದ ಮುಂದೆ ರಾಷ್ಟ್ರೀಯ ಯೋಜನೆ ಘೋಷಣೆ ಟಿಪ್ಪಣೆ ಮಂಡಿಸಿದ್ದರು. ಆದರೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿರಲಿಲ್ಲ.
ವಿಧಾನಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯೋಜನೆ ಪ್ರಸ್ತಾಪಿಸಿ 5300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ಇದುವರೆಗೂ ಕೂಡಾ ಬಿಡುಗಡೆಯಾಗಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿರುವುದರಿಂದ ರಾಷ್ಟೀಯ ಯೋಜನೆಗೂ ಇದಕ್ಕೂ ಸಂಬಂಧವಿಲ್ಲವೆಂದು ಜಲ ಸಂಪನ್ಮೂಲ ಇಲಾಖೆ ಉನ್ನತ ಅಧಿಕಾರಿಗಳು ಹೇಳುತ್ತಾರೆ. ಆದರೆ ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿದ್ದರಿಂದಲೇ ಕೇಂದ್ರ ಅನುದಾನ ಒದಗಿಸಬೇಕಾಗಿದೆ. ಹಾಗಾಗಿ ಈ ತಾಂತ್ರಿಕ ಅಡಚಣೆ ಸ್ಪಷ್ಟತೆಗಳು ಹೊರ ಬೀಳಬೇಕಿದೆ.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಆಂಧ್ರ ಕ್ಯಾತೆಗೆ ಕೋಟೆನಾಡಿನ ರೈತರು ಆಕ್ರೋಶ
ಭದ್ರಾ ಮೇಲ್ದಂಡೆಗೆ ಕೇಂದ್ರದ ಅನುದಾನ ಒತ್ತಟ್ಟಿಗಿರಲಿ, ತರಿಕೆರೆ ಬಳಿ ಅಬ್ಬಿನಹೊಳಲು ಗ್ರಾಮದಲ್ಲಿ 1.5 ಕಿಮೀ ಕಾಲುವೆ ನಿರ್ಮಾಣಕ್ಕೆ ಅಲ್ಲಿನ ರೈತರು ಅಡ್ಡಿ ಪಡಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದಲೂ ಇದು ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಿಲ್ಲ. ಇದೊಂದು ಸಮಸ್ಯೆ ಬಗೆ ಹರಿದರೆ ಹೊಳಲ್ಕೆರೆ ತಾಲೂಕು ಹಾಗೂ ಹಿರಿಯೂರು ತಾಲೂಕಿನ ಕೆರೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಆ ಪ್ರಯತ್ನವೂ ಕೂಡಾ ನೆನೆಗುದಿಗೆ ಬಿದ್ದಿದೆ.
ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಇಬ್ಬರು ಕೇಂದ್ರ ಸಚಿವರು ಬರುತ್ತಾರೆ. ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ, ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಇದ್ದಾರೆ. ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಹೋಗಿ ಘೋಷಿತ 5300 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿಸಲಿ. ವಿಳಂಬವಾದಷ್ಟೂ ಯೋಜನಾ ವೆಚ್ಚ ಜಾಸ್ತಿಯಾಗುತ್ತದೆ ಎಂದು ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.