Asianet Suvarna News Asianet Suvarna News

ಆಂಧ್ರದಿಂದ ಮತ್ತೆ ಕ್ಯಾತೆ..! ಭದ್ರಾ ಮೇಲ್ದಂಡೆ ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ

ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದೆ. ಆದರೆ, ಇದರಿಂದ ರಾಯಲಸೀಮಾ ಪ್ರದೇಶದ ನೀರಾವರಿ ಅಗತ್ಯಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಆಂಧ್ರ ಪ್ರದೇಶ ನೀರಾವರಿ ಸಚಿವ ಅಂಬಟಿ ರಾಮ್‌ಬಾಬು ಹೇಳಿದ್ದಾರೆ.

andhra pradesh files writ plea in supreme court to stop karnataka upper bhadra project ash
Author
First Published Mar 16, 2023, 12:36 PM IST

ಅಮರಾವತಿ (ಮಾರ್ಚ್‌ 16, 2023): ರಾಜ್ಯದ ಪ್ರಮುಖ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ನೆರೆಯ ಆಂಧ್ರ ಪ್ರದೇಶ ಸರ್ಕಾರ ಈ ಯೋಜನೆಗೆ ಕ್ಯಾತೆ ತೆಗೆಯುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಕೈಗೆತ್ತಿಕೊಳ್ಳದಂತೆ ಕರ್ನಾಟಕಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವುದಾಗಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ತಿಳಿಸಿದೆ. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (ಕೆಡಬ್ಲ್ಯೂಡಿಟಿ-ಐ) ತೀರ್ಪು ಉಲ್ಲಂಘಿಸಿ ಯೋಜನೆಗೆ ಅನುಮತಿ ನೀಡುವ ಕೇಂದ್ರ ಜಲಶಕ್ತಿ ಸಚಿವಾಲಯದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರ ಕೋರಿರುವುದಾಗಿ ಸರ್ಕಾರ ಬುಧವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದೆ. ಆದರೆ, ಇದರಿಂದ ರಾಯಲಸೀಮಾ ಪ್ರದೇಶದ ನೀರಾವರಿ ಅಗತ್ಯಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಆಂಧ್ರ ಪ್ರದೇಶ ನೀರಾವರಿ ಸಚಿವ ಅಂಬಟಿ ರಾಮ್‌ಬಾಬು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಪತ್ರಗಳ ಮೂಲಕ ಜಲಶಕ್ತಿ ಸಚಿವಾಲಯದ ಗಮನಕ್ಕೆ ತಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದೇವೆ ಎಂದೂ ಹೇಳಿದರು.

ಇದನ್ನು ಓದಿ: ಭದ್ರಾ ಮೇಲ್ದಂಡೆ ಯೋಜನೆ ಕುರಿತು ಆಂಧ್ರ ಕ್ಯಾತೆಗೆ ಕೋಟೆನಾಡಿನ ರೈತರು ಆಕ್ರೋಶ

ಆಂಧ್ರ ಸರ್ಕಾರದ ಒಪ್ಪಿಗೆ ಪಡೆಯದೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ನೀಡಲು ಮುಂದುವರಿಯದಂತೆ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ) ಮನವಿ ಮಾಡಿದ್ದೇವೆ ಎಂದೂ ಅವರು ಹೇಳಿದರು. "ಕೇಂದ್ರವು ಯೋಜನೆಗೆ ಒಪ್ಪಿಗೆ ನೀಡಲು ಮುಂದಾದ ಕಾರಣ, ತುಂಗಾಭದ್ರಾ ಜಲಾಶಯದಿಂದ ಕರ್ನಾಟಕಕ್ಕೆ 29.9 ಟಿಎಂಸಿ ಅಡಿ ನೀರು ಬಳಕೆಯನ್ನು ತಡೆಯುವಂತೆ ಕೋರಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ" ಎಂದು ಅಂಬಟಿ ರಾಮ್‌ಬಾಬು ಹೇಳಿದರು.

ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ನೀರಾವರಿ ಯೋಜನೆಗಳ ಕುರಿತು ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಗಿದ್ದು, ಉತ್ತರ ಕರಾವಳಿ ಜಿಲ್ಲೆಗಳ ನೀರಾವರಿ ಯೋಜನೆಗಳಿಗೆ ಟಿಡಿಪಿ ಹಣ ಗಳಿಸಲು ಮಾತ್ರ ಭಾರಿ ಮೊತ್ತವನ್ನು ಖರ್ಚು ಮಾಡಿದೆ ಎಂದು ನೀರಾವರಿ ಸಚಿವ ಅಂಬಟಿ ರಾಮ್‌ಬಾಬು ಆರೋಪಿಸಿದ್ದಾರೆ. ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ರಾಜ್ಯಕ್ಕೆ ನೀರು ಒದಗಿಸುವುದಾಗಿಯೂ ಸಚಿವರು ಭರವಸೆ ನೀಡಿದರು.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೂ ಆಂಧ್ರದ ಕ್ಯಾತೆ: ಕರ್ನಾಟಕದ ಯೋಜನೆ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ..!

ಈ ಮಧ್ಯೆ, ಟಿಡಿಪಿ ಶಾಸಕ ಕೆ. ಅಚ್ಚಂನಾಯ್ಡು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಂಬಟಿ ರಾಂಬಾಬು, ಉತ್ತರ ಕರಾವಳಿ ಜಿಲ್ಲೆಗಳ ನೀರಾವರಿ ಯೋಜನೆಗಳಿಗೆ ಟಿಡಿಪಿ ಸರ್ಕಾರ ವೈಎಸ್‌ಆರ್‌ಸಿಪಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ ಎಂದು ಒಪ್ಪಿಕೊಂಡಿದ್ದರು. ಬಳಿಕ, ಈ ಬಗ್ಗೆ ಸಮರ್ಥಿಸಿಕೊಂಡ ಅವರು, ಟಿಡಿಪಿ ಸರ್ಕಾರ ಯೋಜನೆ ಕಾಮಗಾರಿ ಪೂರ್ಣಗೊಳಿಸದೆ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದೆ. ಉತ್ತರ-ಕರಾವಳಿ ಪ್ರದೇಶದ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದೂ ಆಂಧ್ರ ಪ್ರದೇಶ ನೀರಾವರಿ ಸಚಿವ ಅಂಬಟಿ ರಾಮ್‌ಬಾಬು ಹೇಳಿದರು.

Follow Us:
Download App:
  • android
  • ios