* ಮಗಳನ್ನು ಶಾಲೆಗೆ ಸೇರಿಸಲು ಬಂದಿದ್ದ ಮಹಿಳೆ* ಕೋದಂಡರಾಮಪುರ ಪಾಲಿಕೆ ಶಾಲೆ ಶಿಕ್ಷಕನ ವಿಕೃತಿ* ಅಂಗಿ ಬಿಚ್ಚಿ ಮಸಾಜ್‌ ಮಾಡಿಸಿಕೊಂಡ 

ಬೆಂಗಳೂರು(ಸೆ.23): ಮಗಳನ್ನು ಶಾಲೆಗೆ ದಾಖಲಿಸಲು ಬಂದಿದ್ದ ಮಹಿಳಾ ಪೋಷಕರೊಬ್ಬರಿಂದ ಬಿಬಿಎಂಪಿ(BBMP) ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನೊಬ್ಬ ಶಾಲಾ ಕೊಠಡಿಯಲ್ಲೇ ಮಸಾಜ್‌ ಮಾಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ.

ಕೋದಂಡರಾಮಪುರದ ಪಾಲಿಕೆ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ(Teacher)ಲೋಕೇಶಪ್ಪ ಈ ವಿಕೃತ ನಡವಳಿಕೆ ತೋರಿದ್ದು, ಈ ಶಿಕ್ಷಕ ಅಂಗಿಬಿಚ್ಚಿ ಬೆಂಚಿನ ಮೇಲೆ ಕಾಲುಚಾಚಿ ಕುಳಿತು ಮಹಿಳೆಯಿಂದ ಮೈ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಕರ್ತವ್ಯ ಲೋಪದಡಿ ಲೋಕೇಶಪ್ಪನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನುತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ತಮ್ಮ ಮಗಳನ್ನು ಕೋದಂಡರಾಮಪುರದ ಪ್ರೌಢಶಾಲೆಗೆ(School) ದಾಖಲಿಸಲು ತೆರಳಿದ್ದಾರೆ. ಈ ವೇಳೆ ಪ್ರಭಾರ ಮುಖ್ಯಶಿಕ್ಷಕ ಲೋಕೇಶಪ್ಪ ಆ ಮಹಿಳೆಯ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ಬ್ಯೂಟಿ ಪಾರ್ಲರ್‌ ನಡೆಸುತ್ತಿರುವುದಾಗಿ ಆ ಮಹಿಳೆ ಹೇಳಿದ್ದಾರೆ. ಆಗ ನನಗೂ ಮಸಾಜ್‌ ಮಾಡುವಂತೆ ಲೋಕೇಶಪ್ಪ ಆ ಮಹಿಳೆಗೆ ದುಂಬಾಲು ಬಿದ್ದಿದ್ದಾನೆ. ಈತನ ಒತ್ತಾಯ ತಾಳಲಾರದೆ ಮಹಿಳೆ ಮಸಾಜ್‌ ಮಾಡಲು ಒಪ್ಪಿದ್ದಾರೆ. ಅಷ್ಟರಲ್ಲಿ ಶಾಲೆಯ ಇತರೆ ಶಿಕ್ಷಕರನ್ನು ಹೊರಗೆ ಕಳುಹಿಸಿರುವ ಲೋಕೇಶಪ್ಪ ಬಳಿಕ ಶಾಲೆಯ ಕೊಠಡಿಯಲ್ಲಿ ಅಂಗಿ ಬಿಚ್ಚಿ ಆ ಮಹಿಳೆಯಿಂದ ಮೈ ಮಸಾಜ್‌ ಮಾಡಿಸಿಕೊಂಡಿದ್ದಾನೆ.

ಬೆಂಗಳೂರು; ಪಾನಮತ್ತಳಾಗಿದ್ದ ಯುವತಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ!

ಈ ಪ್ರೌಢಶಾಲೆಯಲ್ಲಿ ಬಹುತೇಕ ಶಿಕ್ಷಕರು ಹೊರಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈತನ ಆಟಾಟೋಪ ಪ್ರಶ್ನೆ ಮಾಡಿದರೆ ಕೆಲಸಕ್ಕೆ ಕುತ್ತು ತರುವ ಭಯದಿಂದ ಮೌನಕ್ಕೆ ಜಾರಿದ್ದಾರೆ. ಈ ಹಿಂದೆ ಕೂಡ ಲೋಕೇಶಪ್ಪ ಸಹ ಶಿಕ್ಷಕರ ಜೊತೆಗೂ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಕೆಲಸ ಕಳೆದುಕೊಳ್ಳುವ ಭೀತಿಯಿಂದ ಶಿಕ್ಷಕರು ಆತನ ವಿರುದ್ಧ ದೂರು ನೀಡಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.

ಲೋಕೇಶಪ್ಪನ ವಿರುದ್ಧ ಕಾಮಚೇಷ್ಟೆಯ ಹಲವು ಆರೋಪಗಳಿವೆ. ಈ ಹಿಂದೆ ಈತ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಮಗಳೊಂದಿಗೆ ಕಾಮಚೇಷ್ಟೆತೋರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ಮುಖ್ಯ ಶಿಕ್ಷಕ ಲೋಕೇಶಪ್ಪ ಅವರನ್ನು ಖುದ್ದು ವಿಚಾರಿಸಿದಾಗ ಶಾಲೆಯಲ್ಲಿ ಮಸಾಜ್‌ ಮಾಡಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸೇವೆಯಿಂದ ಅಮಾನತುಗೊಳಿಸಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಬಿ.ರೆಡ್ಡಿ ಶಂಕರ್‌ ಬಾಬು ತಿಳಿಸಿದ್ದಾರೆ.