ಬೆಂಗಳೂರು [ಮಾ.13]:  ಗ್ಯಾಸ್‌ ಗೀಸರ್‌ ಸೋರಿದ್ದರಿಂದ ವಿಷ ಅನಿಲ ಸೇವಿಸಿ ಮಹಿಳೆಯೊಬ್ಬರು ಸ್ನಾನದ ಮನೆಯಲ್ಲಿ ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯ ಎಸ್‌ಬಿಐ ಲೇಔಟ್‌ನಲ್ಲಿ ಗುರುವಾರ ನಡೆದಿದೆ.

ಬನ್ನೇರುಘಟ್ಟರಸ್ತೆ ಅರಕೆರೆ ನಿವಾಸಿ ತುಬಾ ತಜೀಮಾ (30) ಮೃತ ದುರ್ದೈವಿ. ತಮ್ಮ ತಂದೆ ಹುಟ್ಟುಹಬ್ಬದ ನಿಮಿತ್ತ ಸೋದರನ ಮನೆಗೆ ತಜೀಮಾ ಬಂದಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ತಜೀಮಾ ಅವರು, ಅರಕೆರೆಯಲ್ಲಿ ತಮ್ಮ ಪತಿ ಮತ್ತು ಮಕ್ಕಳ ಜತೆ ನೆಲೆಸಿದ್ದರು. ತಮ್ಮ ತಂದೆಯ ಹುಟ್ಟುಹಬ್ಬದ ಆಚರಣೆ ಸಲುವಾಗಿ ಎಸ್‌ಬಿ ಲೇಔಟ್‌ನಲ್ಲಿರುವ ಸೋದರ ಮುಕ್ತಾರ್‌ ಅಹಮ್ಮದ್‌ ನಿವಾಸಕ್ಕೆ ಅವರು ಬಂದಿದ್ದರು. ಬೆಳಗ್ಗೆ 11ಕ್ಕೆ ಸ್ನಾನಕ್ಕೆ ತೆರಳಿದ ತಜೀಮಾ ಎಷ್ಟೋತ್ತಾದರೂ ಹೊರಬಂದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬ ಸದಸ್ಯರು, ಬಾಗಿಲು ಬಡಿದು ಕೂಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆತಂಕಗೊಂಡ ಅವರು, ಕೂಡಲೇ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸ್ನಾನಗೃಹದಲ್ಲಿ ತಜೀಮಾ ಪ್ರಜ್ಞಾಹೀನಾರಾಗಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ತಜೀಮಾ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇದೆಂತಾ ದುರಂತ, ಮರ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸಾವು.

ಸ್ನಾನ ಗೃಹದಲ್ಲಿ ಅಳವಡಿಸಿದ್ದ ಗ್ಯಾಸ್‌ ಗೀಸರ್‌ ಸೋರಿಕೆಯಾಗಿ ಕಾರ್ಬನ್‌ ಮಾನಾಕ್ಸೈಡ್‌ ಹೊರ ಬಂದಿದೆ. ಆಗ ಆ ವಿಷ ಅನಿಲ ಸೇವಿಸಿ ಅವರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.