ಮೈಸೂರು ಜಿಲ್ಲೆಯಲ್ಲಿ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆ ಏರುತ್ತಿದೆ ಜೊತೆ ಜೊತೆಗೆ ನಾಪತ್ತೆಯಾಗಿದ್ದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ 

ವರದಿ : ಬಿ. ಶೇಖರ್‌ ಗೋಪಿನಾಥಂ

 ಮೈಸೂರು (ಆ.19): ಮೈಸೂರು ಜಿಲ್ಲೆಯಲ್ಲಿ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆ ಏರುತ್ತಿರುವ ಜೊತೆ ಜೊತೆಗೆ ನಾಪತ್ತೆಯಾಗಿದ್ದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಸಹ ಆಗುತ್ತಿರುವ ಒಂದು ಕುತೂಹಲಕಾರಿ ವಿಚಾರ ಇತ್ತೀಚಿನ ಅಧ್ಯಯನದಲ್ಲಿ ಕಂಡು ಬಂದಿದೆ.

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ಡಾ.ಡಿ.ಸಿ. ನಂಜುಂಡ ಮತ್ತು ಮಹಾರಾಜ ಕಾಲೇಜು ಮನಃಶಾಸ್ತ್ರ ವಿಭಾಗದ ಪ್ರೊ. ಲ್ಯಾನ್ಸಿ ಡಿಸೋಜ ಅವರು ಮೈಸೂರು ನಗರ ಮತ್ತು ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಸಂಖ್ಯೆಗಳನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಿದ್ದಾರೆ.

ಪೊಲೀಸ್‌ ದಾಖಲೆಗಳ ಪ್ರಕಾರ 2018- 2020ರ ಅವಧಿಯಲ್ಲಿ ಸುಮಾರು 513 ಹೆಚ್ಚಿನ ಮಹಿಳೆಯರು ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದಾರೆ. ಆದರೆ, ಅವರಲ್ಲಿ ಸುಮಾರು 447 ಹೆಚ್ಚಿನ ಮಹಿಳೆಯರು ಪತ್ತೆಯಾಗಿರುವುದು ಸಹ ಕಂಡು ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲೂ ನಗರ ಪ್ರದೇಶಗಳಂತೆ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆ ದಿಢೀರ್‌ಏರಿಕೆಯಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಫ್ರಾಕ್, ಸ್ಕರ್ಟ್ ಯುವತಿಯರೇ ಟಾರ್ಗೆಟ್.. ಲೇಸ್ ಕಟ್ಟುವಂತೆ ನಟಿಸಿ ಕಚಡಾ ಕೆಲಸ!

ವಯಸ್ಸಿನ ಅನುಪಾತವನ್ನು ಗಮನಿಸಿದರೆ 18 ರಿಂದ 21 ನಡುವಿನ ವಯಸ್ಸಿನ ಹೆಚ್ಚಿನ ಮಹಿಳೆಯರು (ಶೇ.43) ಕಾಣೆಯಾಗುತ್ತಿರುವುದು ವರದಿಯಾಗಿದೆ. ಪಿಯುಸಿ ಮತ್ತು ಅದಕ್ಕಿಂತ ಕಡಿಮೆ ಸಾಕ್ಷರತೆ ಹೊಂದಿರುವ ಹೆಚ್ಚಿನ ಮಹಿಳೆಯರ ಕಾಣೆಯಾಗುತ್ತಿದ್ದಾರೆ. ಅಲ್ಲದೆ, ಗೃಹಿಣಿಯರು (ಶೇ.36) ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗುತ್ತಿರುವುದು ಪ್ರಮುಖ ಅಂಶವಾಗಿದೆ.

ನಾಪತ್ತೆಗೆ ಕಾರಣಗಳನ್ನು ಗಮನಿಸಿದಾಗ ಶೇ.22 ಮಂದಿ ಪ್ರೀತಿ ಪ್ರೇಮ ವಿಚಾರದಲ್ಲಿ, ಶೇ.26 ಮಂದಿ ಕೌಟುಂಬಿಕ ಕಾರಣಗಳಿಂದ, ಶೇ.24 ಮಂದಿ ವೈಯಕ್ತಿಕ ಕಾರಣಗಳಿಂದ ಹಾಗೂ ಶೇ.6 ಮಂದಿ ಮಾನಸಿಕ ವ್ಯಾಧಿಗಳಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಹೆಚ್ಚಿನ ಮಧ್ಯ ವಯಸ್ಕರು ಹಣಕಾಸು ಮತ್ತು ಕೌಟುಂಬಿಕ ಕಾರಣಗಳಿಗೆ ನಾಪತ್ತೆಯಾಗಿರುವ ವಿಚಾರ ತಿಳಿದು ಬಂದಿದೆ.

ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗುತ್ತಿರುವುದು ಕಂಡು ಬಂದಿದೆ. ಹೆಚ್ಚಿನ ಮಂದಿ ಪತ್ತೆಯಾದ ನಂತರ ನಾಪತ್ತೆ ಆಗಿದ್ದಕ್ಕೆ ಕಾರಣವನ್ನು ಠಾಣೆಯಲ್ಲಿ ನಮೂದಿಸಿಲ್ಲ ಎನ್ನುವ ಅಂಶ ಕಂಡು ಬಂದಿದೆ.

ಈ ಅಧ್ಯಯನದಲ್ಲಿ ಡಾ.ಪಿ.ಟಿ. ದಿನೇಶ್‌, ಡಾ. ರಮೇಶ್‌ ರಂಗಪ್ಪ , ಎಸ್‌. ಜೋಸೆಫ್‌ ಪಾಲ್ಗೊಂಡಿದ್ದರು.

ನಾಪತ್ತೆ ಪ್ರಕರಣಗಳನ್ನು ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಬೇಕಾಗಿದೆ. ನಾಪತ್ತೆ ಪ್ರಕರಣಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು ಮುಖ್ಯ ಕಾರಣವಾಗುತ್ತದೆ. ಬಲಿಷ್ಠ ಅಸ್ಮಿತೆಯ ಕೊರತೆ ಸಹ ಒಂದು ಪ್ರಮುಖ ಅಂಶ. ಶಾಲಾ- ಕಾಲೇಜುಗಳ ಮಟ್ಟದಲ್ಲಿ ಇದರ ಅರಿವು ಮೂಡಿಸಬೇಕು.

- ಡಾ.ಡಿ.ಸಿ. ನಂಜುಂಡ, ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ಮೈಸೂರು ವಿವಿ

ನಾಪತ್ತೆ ಪ್ರಕರಣಗಳಿಗೆ ಒಂದು ನಿರ್ದಿಷÜ್ಟಕಾರಣವನ್ನು ನೀಡಲು ಸಾಧ್ಯವಿಲ್ಲ. ಅದು ಬಹುಮುಖ ಆಯಾಮ ಹೊಂದಿದ್ದು, ಹೆಚ್ಚಿನ ಬಾರಿ ವೈಯಕ್ತಿಕ ಕಾರಣಗಳಿಗೆ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ನಾಪತ್ತೆ ಒಂದು ರೀತಿಯ ಮಾನಸಿಕ ಸಮಸ್ಯೆಯಾಗಿದ್ದು, ಅಂತವರಿಗೆ ಕೌನ್ಸಲ್ಲಿಂಗ್‌ ಅಗತ್ಯವಾಗಿರುತ್ತದೆ.

- ಪ್ರೊ. ಲ್ಯಾನ್ಸಿ ಡಿಸೋಜ, ಮನಃಶಾಸ್ತ್ರ ವಿಭಾಗ, ಮಹಾರಾಜ ಕಾಲೇಜು