ಶ್ರೀರಂಗಪಟ್ಟಣದಲ್ಲಿ ಕುಟುಂಬದಿಂದ ತಿರಸ್ಕೃತ ದಂಪತಿಗೆ ನಿರ್ಜನ ಪ್ರದೇಶದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿಯೇ ಹೆರಿಗೆ ಮಾಡಿಸಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕುಟುಂಬದವರ ವಿರೋಧದ ನಡುವೆಯೂ ಪ್ರೀತಿಸಿ ವಿವಾಹವಾದ ಮಹೇಂದ್ರ ಮತ್ತು ಹುಸೇನಿ, ನಿರ್ಜನ ಪ್ರದೇಶದಲ್ಲಿ ಇದ್ದಾಗ ಅವರಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಹುಸೇನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ವೇಳೆ ಪತಿ ಮಹೇಂದ್ರ ಹೆರಿಗೆಯಲ್ಲಿ ಸಹಾಯ ಮಾಡಿದ ಘಟನೆ ನಡೆದಿದೆ.

ಈ ದಂಪತಿ ಮೂಲತಃ ಬಳ್ಳಾರಿ ಜಿಲ್ಲೆಯ ಇಂದಿರಾ ನಗರದಿಂದ ಬಂದವರು. ಕಳೆದ ವರ್ಷ ಪ್ರೀತಿಸಿ ಮದುವೆಯಾಗಿದ್ದು, ಕುಟುಂಬದ ವಿರೋಧದ ಕಾರಣದಿಂದ ಅವರನ್ನು ಕುಟುಂಬದವರು ತಿರಸ್ಕರಿಸಿ ದೂರ ಇಟ್ಟರು. ಹೀಗಾಗಿ ಅನಿವಾರ್ಯವಾಗಿ ಮಂಡ್ಯಕ್ಕೆ ಬಂದು, ರೈಲ್ವೆ ನಿಲ್ದಾಣದ ಬಳಿ ಸಣ್ಣ ಗುಡಿಸಲಿನಲ್ಲಿ ಇದ್ದು ವಾಸಿಸುತ್ತಿದ್ದರು. ಆರ್ಥಿಕ ಸಂಕಷ್ಟದ ಕಾರಣ ಎರಡು ದಿನಗಳ ಹಿಂದೆ ಶ್ರೀರಂಗಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದರು.

ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿ ಹುಸೇನಿಗೆ ಭಾಗಶಃ ಪಾರ್ಶ್ವವಾಯು ಕಾಣಿಸಿಕೊಂಡಿತ್ತು. ಬೆಳಗಿನ ಜಾವ ಹೆರಿಗೆ ನೋವು ತೀವ್ರಗೊಂಡಾಗ, ಮಹೇಂದ್ರಗೆ ತನ್ನ ಪತ್ನಿಯನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರಿಗೆ ಯಾವುದೇ ದಾರಿ ಕಾಣದೆ ನಿರ್ಜನ ಪ್ರದೇಶದಲ್ಲೇ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದರು. ಮಹೇಂದ್ರ ಅವರಿಗೆ ಮಗುವನ್ನು ಹೆರಿಗೆ ಮಾಡದೆ ಬೇರೆ ದಾರಿಯಿರಲಿಲ್ಲ.

ನಂತರ ಮಹೇಂದ್ರ, ಪತ್ನಿ ಮತ್ತು ನವಜಾತ ಶಿಶುವನ್ನು ಹತ್ತಿರದ ಕಾವೇರಿ ನದಿಯ ಸ್ನಾನದ ಘಾಟ್‌ಗೆ ಕರೆದೊಯ್ದರು. ಅಲ್ಲಿದ್ದ ಸಾರ್ವಜನಿಕ ಶೌಚಾಲಯ ನಿರ್ವಾಹಕರಾದ ಶಿವಾಜಿ ಸಿಂಗ್ ಈ ಕುಟುಂಬದ ದುಃಸ್ಥಿತಿಯನ್ನು ಗಮನಿಸಿದರು. ಅವರು ತಕ್ಷಣ ಹೆರಿಗೆ ನಂತರದ ಆರೈಕೆಗಾಗಿ ಬಿಸಿನೀರು, ತಾಯಿಗಾಗಿ ಆಹಾರ ನೀಡಿದರು ಮತ್ತು ಆಟೋರಿಕ್ಷಾ ಮೂಲಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದರು.

ತಾಲ್ಲೂಕು ಆಸ್ಪತ್ರೆಯ ವೈದ್ಯರು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ದೃಢಪಡಿಸಿದ್ದಾರೆ. “ನಮ್ಮಿಬ್ಬರನ್ನೂ ನಮ್ಮ ಕುಟುಂಬಗಳು ತಿರಸ್ಕರಿಸಿದವು. ನಮಗೆ ಹೋಗಲು ಎಲ್ಲಿಯೂ ಜಾಗ ಇರಲಿಲ್ಲ. ಆ ರಾತ್ರಿ ನನ್ನ ಹೆಂಡತಿಗೆ ಹೆರಿಗೆ ನೋವು ಆರಂಭವಾದಾಗ, ನೆರವಿಗೆ ಯಾರೂ ಕೂಡ ಇರಲಿಲ್ಲ. ನನ್ನ ಹೆಂಡತಿ ನಿರ್ಜನ ಪ್ರದೇಶದಲ್ಲೇ ಮಗುವಿಗೆ ಜನ್ಮ ನೀಡಿದಳು ಎಂದು ಮಗುವನ್ನು ಕೈನಲ್ಲಿ ಹಿಡಿದುಕೊಂಡೇ ಭಾವುಕಾರಿ ನುಡಿದರು.

ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಯ ಡಾ. ಸವಿತಾ ಈ ಬಗ್ಗೆ ಮಾತನಾಡಿ, “ತಾಯಿ ಮತ್ತು ಮಗು ಇಬ್ಬರ ಆರೋಗ್ಯ ಸ್ಥಿರವಾಗಿದೆ. ಬೆಳಗಿನ ಜಾವ 2 ಗಂಟೆಗೆ ಹೆರಿಗೆ ನೋವು ಆರಂಭವಾಯಿತು ಮತ್ತು ಶೀಘ್ರದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿನ ತೂಕ 2.1 ಕೆಜಿ. ತಾಯಿಗೆ ಬಲಭಾಗದಲ್ಲಿ ಪಾರ್ಶ್ವವಾಯು ಇದೆ. ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಆರೈಕೆಗಾಗಿ ಅವರನ್ನು ಮೈಸೂರು ಚೆಲುವಾಂಬ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ. ಮಗುವಿಗೆ NICU ಸಹಾಯ ಅಗತ್ಯವಾಗಬಹುದು ಎಂದು ಅಂದಾಜಿಸುತ್ತಿದ್ದೇವೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಚೆಲುವಾಂಬ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.