ಶ್ರೀರಂಗಪಟ್ಟಣ [ಡಿ.02]:  ಗೃಹಿಣಿ ಮಲಗಿದ್ದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈಕೆಯ ಪತಿ ಮನೆ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಮಿಣಜಿಬೋರನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ಬಸವಲಿಂಗ ಪತ್ನಿ ನೇತ್ರಾವತಿ (32) ಅನುಮಾನಾಸ್ಪದವಾಗಿ ಸಾವನ್ನಪ್ಪಿದವರು. ಕಳೆದ 18 ವರ್ಷಗಳ ಹಿಂದೆ ನಂಜನಗೂಡಿನ ಹಾರೋಹಳ್ಳಿ ಗ್ರಾಮದ ನೇತ್ರಾವತಿ ಮಿಣಜಿಬೋರನಕೊಪ್ಪಲು ಗ್ರಾಮದ ಬಸವಲಿಂಗ ವಿವಾಹ ನಡೆದಿತ್ತು. ಇವರಿಗೆ 17 ವರ್ಷದ ಮಗಳು, ಹಾಗೂ 14 ವರ್ಷದ ಮಗನಿದ್ದಾನೆ. ಈ ಇಬ್ಬರು ಹಾರೋಹಳ್ಳಿಯ ತಾತನ ಮನೆಯಲ್ಲಿದ್ದುಕೊಂಡು ವ್ಯಾಸಂಗ ನಡೆಸುತ್ತಿದ್ದಾರೆ.

ದಂಪತಿಗಳ ನಡುವೆ ನಡುವೆ ಹಲವು ದಿನಗಳಿಂದ ಕಲಹ ಏರ್ಪಟಿತ್ತು ಎಂದು ತಿಳಿದು ಬಂದಿದೆ. ನೇತ್ರಾವತಿ ಭಾನುವಾರ ಬೆಳಗ್ಗೆ ಮೃತಪಟ್ಟಸ್ಥಿತಿಯಲ್ಲಿ ಕಂಡುಬಂದಿದೆ. ಮಗಳ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನೇತ್ರಾವತಿಯ ಕುಟುಂಬಸ್ಥರು ಪತಿ ಬಸವಲಿಂಗನೇ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಸಿ ಆತನ ಕುಟುಂಬಸ್ಥರು ಹಾಗೂ ಆತನನ್ನು ಬಂಧಿಸುವಂತೆ ಮನೆಯ ಮುಂದೆ ಪ್ರತಿಭಟಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ಕೃಷ್ಣಪ್ಪ ಹಾಗೂ ಶ್ರೀರಂಗಪಟ್ಟಣ ಟೌನ್‌ ಠಾಣಾ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಎಚ್ಚರವಹಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಮೃತಳ ಪೋಷಕರ ಮನವಿಯನ್ನು ಆಲಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತ ನೇತ್ರಾವತಿ ಅಣ್ಣ ಮಹದೇವಸ್ವಾಮಿ ಅವರಿಂದ ಲಿಖಿತ ದೂರು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.