ದೇವದುರ್ಗ ಖಾಸಗಿ ಆಸ್ಪತ್ರೆ ಎಡವಟ್ಟು?: ಅಧಿಕ ರಕ್ತಸ್ರಾವದಿಂದ ಬಾಣಂತಿ ಸಾವು
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಸ್ತೂರಿ ಹೆರಿಗೆ, ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ಸಮುದ್ರ ಗ್ರಾಮದ ಶೃತಿ, ಹೆರಿಗೆ ನಂತರ ರಕ್ತ ಸ್ರಾವದಿಂದ ಸಾವು
ದೇವದುರ್ಗ(ನ.10): ಆಗತಾನೆ ಜನಿಸಿದ ಗಂಡು ಮಗು ಕಣ್ತೆರೆದು ಜಗತ್ತು ನೋಡುವ ಮುನ್ನವೇ ವೈದ್ಯರ ನಿರ್ಲಕ್ಷ್ಯದಿಂದ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾದ ಘಟನೆ ತಾಲೂಕಿನ ಸಮುದ್ರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಸಮುದ್ರ ಗ್ರಾಮದ ಶೃತಿ(21) ಮೃತ ದುರ್ದೈವಿ ಬಾಣಂತಿ. ಪಟ್ಟಣದ ಕಸ್ತೂರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ಶೃತಿ ಬಾಣಂತಿತನ ನಂತರ ಅಧಿಕ ರಕ್ತ ಸ್ರಾವದಿಂದ ನ.3ರಂದು ಮೃತಪಟ್ಟಿದ್ದಾರೆ. ಆಸ್ಪತ್ರೆ ವೈದ್ಯರು ಸಿಜರಿನ್ ಹೆರಿಗೆ ಮಾಡಿದರೂ ಬಾಣಂತಿ ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಮೊದಲ ಮಗು ನಿರೀಕ್ಷೆಯಲ್ಲಿದ್ದ ಸಮುದ್ರ ಗ್ರಾಮದ ಶೃತಿ ಪವನ್‌ಕುಮಾರ ದಂಪತಿ, ಪ್ರತಿ ತಿಂಗಳು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದು, ನ.24 ರಂದು ಹೆರಿಗೆ ಆಗಲಿದೆ ಎಂದು ವೈದ್ಯರು ದಿನಾಂಕ ಕೊಟ್ಟಿದ್ದರು. ನ.3 ರಂದು ಮಾಸಿಕ ಪರೀಕ್ಷೆಗೆ ಕಸ್ತೂರಿ ಆಸ್ಪತ್ರೆಗೆ ಬಂದಿದ್ದ ದಂಪತಿಗೆ ಇಂದೇ ಹೆರಿಗೆ ಮಾಡಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಪಾಲಕರು ಒಪ್ಪಿಗೆ ಸೂಚಿಸಿ ಹಣ ತುಂಬಿ ಸಹಿ ಮಾಡಿದ್ದಾರೆ.
ಬಾಣಂತಿ, ಮಕ್ಕಳ ಸಾವು ಕೇಸ್: ವೈದ್ಯ ಸಂಘಕ್ಕೆ ಡಾ.ಉಷಾ ಪತ್ರ
ಮೊದಲು ನಾರ್ಮಲ್ ಡೆಲಿವರಿ ಎಂದ ವೈದ್ಯರು ನಂತರ ಹೆರಿಗೆ ನೋವಿದ್ದು, ಸಿಜರಿನ್ ಮಾಡಬೇಕು ಎಂದಿದ್ದಾರೆ. ಇದಕ್ಕೆ ಪತಿ ಪವನ್ ಕುಮಾರ್ ಒಪ್ಪಿಗೆ ಸೂಚಿಸಿ ಸಹಿ ಮಾಡಿದ್ದಾರೆ. ನಂತರ ಹೆರಿಗೆ ಮಾಡಿಸಿದ ವೈದ್ಯರು ಗಂಡುಮಗು ಜನಿಸಿದ್ದು, ತಾಯಿಗೆ ಅಧಿಕ ರಕ್ತಸ್ರಾವವಾಗುತ್ತಿದೆ. ನಿಲ್ಲಿಸಲು ಗರ್ಭಕೋಶ ತೆಗೆಯಬೇಕು ಎಂದು ತಿಳಿಸಿದ್ದಾರೆ. ತಾಯಿ ಉಳಿಸಿಕೊಳ್ಳುವ ದೃಷ್ಟಿಯಿಂದ ಪಾಲಕರು ಒಪ್ಪಿಗೆ ಸೂಚಿಸಿದ್ದಾರೆ. ಗರ್ಭಕೋಶ ತೆಗೆದರೂ ರಕ್ತ ಸ್ರಾವ ಕಡಿಮೆಯಾಗಿಲ್ಲ. ಹೀಗಾಗಿ ತಾಯಿಯನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ರಾಯಚೂರಿನ ಬೆಟ್ಟದೂರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಶೃತಿ ಮೃತಪಟ್ಟಿದ್ದಾರೆ. ತಾಯಿ ಸಾವಿಗೆ ಆಸ್ಪತ್ರೆ ವೈದ್ಯರು ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.
ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಮಕ್ಕಳ ಸಾವು ಪ್ರಕರಣ: ಸರ್ಕಾರದಿಂದ ನೂತನ ಮಾರ್ಗಸೂಚಿ ಪ್ರಕಟ
ಕಸ್ತೂರಿ ಆಸ್ಪತ್ರೆಯಲ್ಲಿ ತಾಯಿ ಮೃತಪಟ್ಟಿರುವ ಬಗ್ಗೆ ಪ್ರಥಮ ವರದಿ ದಾಖಲಾಗಿದೆ. ರಕ್ತ ಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಮೇಲಧಿಕಾರಿಗಳು ವರದಿ ಪಡೆದಿದ್ದು, ಪರಿಶೀಲನೆ ಮಾಡುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಅಂತ ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ತಿಳಿಸಿದ್ದಾರೆ.
ಸುರಕ್ಷಿತ ಹೆರಿಗೆಗಾಗಿ ನಾವು ಖಾಸಗಿ ಆಸ್ಪತ್ರೆಗೆ ಹೋಗುತ್ತೇವೆ. ಆದರೆ, ಅಲ್ಲಿಯೂ ಸುರಕ್ಷತೆ ಇಲ್ಲದಂತಾಗಿದೆ. ನಾರ್ಮಲ್ ಹೆರಿಗೆ ಆಗಿ ರಕ್ತಸ್ರಾವವಾದ್ರೆ ನಮ್ಮ ಕಡೆ ಸಮಸ್ಯೆ ಎನ್ನಬಹುದು. ಸಿಜರಿನ್ ಮಾಡಿದ್ರೂ ರಕ್ತಸ್ರಾವ ಆಗಿದೆ ಅಂದ್ರೆ ಅದು ವೈದ್ಯರ ನಿರ್ಲಕ್ಷ್ಯವೇ ಕಾರಣ. ನಾರ್ಮಲ್ ಹೆರಿಗೆ ಎಂದು ನಮ್ ಅತ್ರ ಸಹಿ ಮಾಡಿಸಿಕೊಂಡು ಗರ್ಭಕೋಶ ತೆಗೆಯುತ್ತೇವೆ ಎಂದ್ರು. ತಾಯಿ ಉಳಿಸಲು ನಾವು ಒಪಿದ್ವಿ. ಆದರೆ ವೈದ್ಯರು ತಾಯಿಯನ್ನು ಉಳಿಸಲಿಲ್ಲ ಅಂತ ಮೃತ ಬಾಣಂತಿ ಶೃತಿ ಪತಿ ಪವನ್ ಕುಮಾರ್ ಹೇಳಿದ್ದಾರೆ.