ವಿಜಯಪುರ [ಜು.1] : ಗಂಭೀರ ಸ್ಥಿತಿಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಆಸ್ಪತ್ರೆಗೆ ಸಾಗಿಸುವ ವೇಳೆ ಆ್ಯಂಬುಲೆನ್ಸ್ ನಲ್ಲೆ ಹೆರಿಗೆಯಾದ ಘಟನೆ ವಿಜಯಪುರದಲ್ಲಿ ನಡೆದಿದೆ.  

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಕಾನ್ಯಾಳ ಗ್ರಾಮದ ರಮಿಜಾ ಜಾವೇದ್ ತಾಂಬೋಳಿ ಎಂಬ ಮಹಿಳೆಗೆ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮಗು ಜನಿಸಿದೆ. 

ಕಾನ್ಯಾಳ ಗ್ರಾಮದಿಂದ ಬಸವನ‌ ಬಾಗೇವಾಡಿ ತಾಲೂಕು ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ತರಲಾಗಿತ್ತು. ಈ ವೇಳೆ ಅವರನ್ನು ಪರೀಕ್ಷೆಗೆ ಒಳಪಡಿಸಿದ ಆಸ್ಪತ್ರೆ  ವೈದ್ಯರು ಬಿಪಿ ಹೆಚ್ಚಿರುವ ಕಾರಣ ಜಿಲ್ಲಾಸ್ಪತ್ರೆಗೆ ಸಾಗಿಸಲು ಸೂಚಿಸಿದ್ದರು.  ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಹೆರಿಗೆ ನೋವು ಜಾಸ್ತಿಯಾಗಿದ್ದು, 108 ಸಿಬ್ಬಂದಿಯೇ ಹೆರಿಗೆ ಮಾಡಿಸಿದರು. 

ಸುಸೂತ್ರವಾಗಿ ಹೆರಿಗೆಯಾಗಿದ್ದು, ಹರ್ಷಗೊಂಡ ಕುಟುಂಬಸ್ಥರು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಹೃದಯ ವೈಶಾಲ್ಯತೆ ಮರೆದ ವಿಜಯ್ ಕುಮಾರ್ ಲಿಂಗದಳ್ಳಿ, ವಿಜಯ್ ಗದ್ದನಕೇರಿ ಅವರನ್ನು ಮನದುಂಬಿ ಹರಸಿದರು.