ಹುಬ್ಬಳ್ಳಿ: ಮನೆ ಪರಿಹಾರಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಕುಸಿದ ಮನೆಗೆ ಸೂಕ್ತ ಪರಿಹಾರ ಸಿಗದಿರುವುದಕ್ಕೆ ಮನನೊಂದು ಕೃತ್ಯ| ಸ್ಥಿತಿ ಗಂಭೀರ, ಕಿಮ್ಸ್‌ನಲ್ಲಿ ಮುಂದುವರಿದ ಚಿಕಿತ್ಸೆ| ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಘಟನೆ| 

Woman Attempted Suicide in Dharwad grg

ಹುಬ್ಬಳ್ಳಿ(ಏ.07): ಮಳೆಯಿಂದ ಕುಸಿದ ಮನೆಗೆ ಸೂಕ್ತ ಪರಿಹಾರಕ್ಕೆ ಜನಪ್ರತಿನಿಧಿಗಳ, ಅಧಿಕಾರಿಗಳ ಕಚೇರಿಗೆ ಅಲೆದಾಡಿ ಬೇಸತ್ತ ಮಹಿಳೆಯೊಬ್ಬರು ಜಿಲ್ಲೆಯ ಹಿರಿಯ ರಾಜಕಾರಣಿಯಬ್ಬರ ಮನೆಯೆದುರೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ಕಮ್ಮಾರ (33) ಎಂಬುವವರು ಆತ್ಮಹತ್ಯೆಗೆ ಯತ್ನಿಸಿದವರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಷ ಸೇವಿಸಿ ಅಸ್ವಸ್ಥರಾದ ಇವರನ್ನು ಕಿಮ್ಸ್‌ಗೆ ಕರೆತಂದು ದಾಖಲಿಸಲಾಗಿದೆ. ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆಯ ಪತಿ ವೀರಣ್ಣ ಕಮ್ಮಾರ, ‘ಹಿಂದಿನ ವರ್ಷ ಮಳೆಗಾಲದಲ್ಲಿ ಇವರ ಮನೆ ಬಿದ್ದಿತ್ತು. ಪರಿಹಾರಕ್ಕೆ ಸಾಕಷ್ಟುಅಲೆದ ಬಳಿಕ 50ಸಾವಿರ ರು. ಮಂಜೂರಾಗಿತ್ತು. ಆದರೆ, ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಹೆಚ್ಚಿನ ಪರಿಹಾರಕ್ಕೆ ಜನಪ್ರತಿನಿಧಿಗಳಲ್ಲಿ ಕೇಳಿಕೊಂಡಿದ್ದೆವು. ಕಳೆದ ಐದು ತಿಂಗಳಿಂದ ಶಾಸಕರ ಬಳಿ ಪರಿಹಾರಕ್ಕೆ ಅಲೆದಾಡುತ್ತಿದ್ದೇವೆ. ಅವರು ಈ ಹಿರಿಯ ರಾಜಕಾರಣಿ ಬಳಿ ಹೋಗಲು ಹೇಳಿದ್ದರು.

ಅನೈತಿಕ ಸಂಬಂಧಕ್ಕೆ ಅಡ್ಡಿ: ಹೆತ್ತ ಮಕ್ಕಳನ್ನೇ ಕೊಂದ ತಾಯಿಗೆ ಕಠಿಣ ಶಿಕ್ಷೆ

‘ಒಂದೆರಡು ಬಾರಿ ಅವರ ಮನೆ ಬಳಿ ಬಂದಾಗ ಸಿಗಲಿಲ್ಲ. ಹೀಗಾಗಿ ನಾವು ಇಬ್ಬರು ಮಕ್ಕಳನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದೆವು. ಅಲ್ಲಿ ಹದಿನೈದು ದಿನ ಉಳಿದುಕೊಂಡಿದ್ದರೂ ಪ್ರಯೋಜನವಾಗಲಿಲ್ಲ. ಪುನಃ ಇವತ್ತು ಅವರ ಮನೆಯ ಬಳಿ ಬಂದಿದ್ದೆವು. ಆಗಲೂ ಸಿಗದಿದ್ದಾಗ ನಾವು ಪುನಃ ಶಾಸಕರಿಗೆ ಕರೆ ಮಾಡಿದೆವು. ಅವರು, ಅವರಿಂದಲೆ ಕೆಲಸ ಮಾಡಿಕೊಳ್ಳಿ, ನನ್ನ ಬಳಿ ಬರಬೇಡಿ ಎಂದು ಹೇಳಿದರು. ಅಲ್ಲೂ ಕೆಲಸವಾಗದೆ ಇಲ್ಲೂ ಆಗದಿದ್ದರಿಂದ ಪತ್ನಿ ತೀವ್ರ ನೊಂದುಕೊಂಡಳು. ಏಕಾಏಕಿ ವಿಷ ಸೇವಿಸಿ ಡೆತ್‌ನೋಟ್‌ ಕೊಟ್ಟಿದ್ದಾಳೆ’ ಎಂದು ವೀರಣ್ಣ ಕಣ್ಣೀರು ಹಾಕಿದರು.

ವಿಷ ಸೇವೆನೆಗೆ ಮುನ್ನ ಪತ್ರ:

ವಿಷ ಸೇವನೆ ಮುನ್ನ ಶ್ರೀದೇವಿ ಪತ್ರ ಬರೆದಿದ್ದಾರೆ. ಅದರಲ್ಲಿ ‘ಶಾಸಕರ ಬಳಿ ಹೋದರೆ ಸಚಿವರ ಬಳಿ ಹೋಗಿ, ಸಚಿವರ ಬಳಿ ಹೋದರೆ ಶಾಸಕರ ಬಳಿ ಹೋಗಿ ಎನ್ನುತ್ತಿದ್ದಾರೆ. ನನ್ನ ಪತಿಗೆ ಆರಾಮಿಲ್ಲ. ದೆಹಲಿಗೆ ಹೋದರೂ ಪ್ರಯೋಜನವಾಗಿಲ್ಲ. ಇ-ಮೇಲ್‌ ಮಾಡಿದರೂ ಪ್ರಯೋಜನವಾಗಿಲ್ಲ. ಕಳೆದ ಒಂದು ವರ್ಷದಿಂದ ಹೊರಗಡೆ ಸ್ನಾನ ಮಾಡುತ್ತಿದ್ದೇವೆ. ಎಂಎಲ್‌ಎ, ಎಂಪಿ ನಮಗೆ ಸಹಾಯ ಮಾಡದ ಕಾರಣ ಮನನೊಂದು ವಿಷ ಸೇವನೆ ಮಾಡುತ್ತಿದ್ದೇನೆ. ಇದರಿಂದ ನನ್ನ ಪತಿ, ಇಬ್ಬರು ಮಕ್ಕಳಿಗೆ ಯಾವುದೆ ತೊಂದರೆ ಆಗಬಾರದು ಎಂದು ಬರೆಯಲಾಗಿದೆ.

ಈ ಬಗ್ಗೆ ಕೇಶ್ವಾಪುರ ಪೊಲೀಸ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ರಾತ್ರಿವರೆಗೂ ಕುಟುಂಬದವರು ಪ್ರಕರಣ ದಾಖಲಿಸಲಿಲ್ಲ. ಅವರು ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ವಹಿಸುತ್ತೇವೆ ಎಂದರು.
 

Latest Videos
Follow Us:
Download App:
  • android
  • ios