ಹುಬ್ಬಳ್ಳಿ(ಏ.01): ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯ ಜತೆ ಹೋಗುವ ಉದ್ದೇಶದಿಂದ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಮಹಿಳೆಗೆ ಇಲ್ಲಿಯ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವೂ ಬುಧವಾರ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.

ಹಳೇಹುಬ್ಬಳ್ಳಿಯ ನವ ಅಯೋಧ್ಯಾನಗರದ ಪ್ರೇಮಾ ಅಲಿಯಾಸ್‌ ಚೈತ್ರಾ ಹುಲಕೋಟಿ ಶಿಕ್ಷೆಗೆ ಗುರಿಯಾದ ಮಹಿಳೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಗಂಡ ಮತ್ತು ಅತ್ತೆ ಕೆಲಸದಿಂದ ಬಿಡಿಸಿ ಮನೆಯಲ್ಲಿ ಇರುವಂತೆ ತಿಳಿಸಿದ್ದರು. ಆದರೆ, ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯ ಜತೆ ಹೋಗಲು ಮಕ್ಕಳಾದ ರೋಹಿತಿ ಮತ್ತು ರೋಹಿಣಿಯನ್ನು ಕೊಲೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ತನ್ನ ಇಬ್ಬರು ಮಕ್ಕಳ ಕುತ್ತಿಗೆಗೆ ಐ.ಡಿ. ಕಾರ್ಡ್‌ ಟ್ಯಾಗ್‌ ದಾರದಿಂದ ಮತ್ತು ವೇಲ್‌ದಿಂದ ಬಿಗಿದು ಕೊಲೆ ಮಾಡಿದ್ದಳು.

ಲವರ್ ಗಂಡನ ಕೊಲ್ಲಲು ಪ್ರಿಯತಮನಿಂದ ಸುಪಾರಿ : ಕೊಲೆಗಾರಗೆ ಜೀವಾವಧಿ ಶಿಕ್ಷೆ

ಭಾರತೀಯ ದಂಡ ಸಂಹಿತೆ ಕಲಂ 302 ಅಡಿಯಲ್ಲಿ ಮಹಿಳೆ ಮಾಡಿದ ಆರೋಪ ಸಾಬೀತಾಗಿದೆ. ಈ ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎನ್‌. ಗಂಗಾಧರ ಅವರು ಮಾ. 31ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಸುಮಿತ್ರಾ ಎಂ. ಅಂಚಟಗೇರಿ ವಾದ ಮಂಡಿಸಿದ್ದರು.