ಪತಿ ಸಾವಿನಿಂದ ಮನನೊಂದು ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ

ಪತಿ ಸಾವಿನಿಂದ ಮನನೊಂದ ಮಹಿಳೆ| ತನ್ನ ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿ ಪ್ರಯಾಣ ಬಿಟ್ಟ ಮಹಿಳೆ| ಕವಿತಾ ಮಂಡಣ್ಣ ಪತಿ ಕಿಶನ್ ಅವರು ಕಳೆದ ಕೆಲದಿನಗಳ ಹಿಂದೆ ವ್ಯವಹಾರದ ನಿಮಿತ್ತ ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ|  ಬಳಿಕ ಪತಿ ಕಿಶನ್ ಶವವಾಗಿ ಮೈಸೂರು ಸಮೀಪ ಪತ್ತೆ|  ಇದರಿಂದ ಕವಿತಾ ಮಂಡಣ್ಣ ಮಾನಸಿಕವಾಗಿ ನೊಂದಿದ್ದರು| ಇದರಿಂದ ಮಕ್ಕಳು ಜೊತೆ ಆತ್ಮಹತ್ಯೆ ತೀರ್ಮಾನ ಕೈಗೊಂಡಿದ್ದ ಕವಿತಾ| 

Woman and her Two Children Fell in to the River in Bantwal

ಬಂಟ್ವಾಳ(ಸೆ.29): ಪತಿ ಸಾವಿನಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮೈಸೂರು ನಗರದ ಸರಸ್ವತಿಪುರಂ ನಿವಾಸಿಗಳಾದ ಕವಿತಾ ಮಂಡಣ್ಣ(55), ಮಕ್ಕಳಾದ ಕೌಶಿಕ್ ಮಂಡಣ್ಣ(29) ಹಾಗೂ ಕಲ್ಪಿತಾ ಮಂಡಣ್ಣ(22). ಈ ಮೂವರ ಪೈಕಿ ಕವಿತಾ ಮಂಡಣ್ಣ ಅವರನ್ನು ಗೂಡಿನಬಳಿ ಸಮೀಪ ಸ್ಥಳೀಯ ಈಜುಗಾರರು ರಕ್ಷಿಸಿದ್ದು , ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ನೀರುಪಾಲಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು ಎಂದು ತಿಳಿದು ಬಂದಿದೆ. 

ಘಟನೆ ವಿವರ: 

ಕವಿತಾ ಮಂಡಣ್ಣ ಅವರ ಪತಿ ಕಿಶನ್ ಅವರು ಕಳೆದ ಕೆಲದಿನಗಳ ಹಿಂದೆ ವ್ಯವಹಾರದ ನಿಮಿತ್ತ ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ. ಅವರಿಗಾಗಿ ಮನೆ ಮಂದಿ ತೀವ್ರ ಹುಡುಕಾಟ ನಡೆಸಿದ್ದರು. ಈ ನಡುವೆ ಶನಿವಾರ 11 ಗಂಟೆಯ ವೇಳೆಗೆ ಪತಿ  ಕಿಶನ್ ಅವರು ಶವವಾಗಿ ಮೈಸೂರು ಸಮೀಪ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸಂಜೆ 5 ಗಂಟೆಯ ವೇಳೆಗೆ ಶವವನ್ನು ಇವರ ಮನೆಗೆ ತರಲಾಗಿದ್ದು, ಶವಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಮಾನಸಿಕವಾಗಿ ನೊಂದು ಕವಿತಾ ಮಂಡಣ್ಣ ಮತ್ತು ಮಕ್ಕಳು ಆತ್ಮಹತ್ಯೆ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಸಂಜೆಯ ವೇಳೆಗೆ ತನ್ನ ಸಹೋದರನಿಗೆ ಕರೆ ‌ಮಾಡಿದ ಮಂಡಣ್ಣ, ಪತಿಯ ಸಾವಿನ ವಿಚಾರ ತಿಳಿಸಿ, ನಾವಿನ್ನು ಬದುಕುವುದಿಲ್ಲ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ ಎನ್ನಲಾಗಿದೆ. 

ಪಾಣೆಮಂಗಳೂರಿನಲ್ಲೇನಾಯಿತು? 

ತಡರಾತ್ರಿ 10.50 ರ ಸುಮಾರಿಗೆ ಈಕೋ ವಾಹನದಲ್ಲಿ ಬಂದ ಮೂವರು ವಾಹನದಿಂದ ಇಳಿದು ಸೇತುವೆಯ ಪಕ್ಕ ನಡೆದುಕೊಂಡು ಹೋಗುತ್ತಿದ್ದರು. ಇವರನ್ನು ಕಂಡ ಸ್ಥಳೀಯರು ವಾಕಿಂಗ್ ಎಂದು ಭಾವಿಸಿದ್ದರು. ಕೆಲ‌ಕ್ಷಣದಲ್ಲಿಯೇ, ಸಾಕು‌ನಾಯಿ ಸಹಿತ ಮೂವರೂ ನದಿಗೆ ಹಾರಿದ್ದಾರೆ. ತಕ್ಷಣ ರಿಕ್ಷಾ ಚಾಲಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಗರ ಠಾಣಾಧಿಕಾರಿ ಚಂದ್ರಶೇಖರ್ ಮತ್ತವರ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯ ನಡೆಸಿದರು.

ಈ‌ ಮಹಿಳೆಯನ್ನು ಸ್ಥಳೀಯ ಈಜುಗಾರರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು,. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಾಕು ನಾಯಿಯನ್ನೂ ರಕ್ಷಿಸಲಾಗಿದೆ, ಆದರೆ ಅದು ತಪ್ಪಿಸಿಕೊಂಡು ಹೋಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ, ನಗರ ಠಾಣಾಧಿಕಾರಿ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ.
 

Latest Videos
Follow Us:
Download App:
  • android
  • ios