ದೊಡ್ಡಬಳ್ಳಾಪುರದ ಸುಧಾರಾಣಿ ಎಂಬ ಮಹಿಳೆ ಮೂರು ಮದುವೆಯಾಗಿ ಇಬ್ಬರು ಗಂಡಂದಿರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ. ಮೊದಲ ಗಂಡನನ್ನು ಬಿಟ್ಟು, ಎರಡನೇ ಗಂಡನಿಂದ ಹಣ ದೋಚಿ, ಇದೀಗ ಮೂರನೇ ವ್ಯಕ್ತಿಯೊಂದಿಗೆ ಸಂಸಾರ ನಡೆಸುತ್ತಿದ್ದಾಳೆ.  

ಡೊಡ್ಡಬಳ್ಳಾಪುರ: ಕೆಲವರಿಗೆ ಒಂದು ಮದುವೆಯಾಗುವುದೇ ಹೆಚ್ಚು ಎನ್ನುವ ಪರಿಸ್ಥಿತಿ ಇರುವಾಗ, ಇಲ್ಲೊಬ್ಬಳು ಒಂದಲ್ಲಾ ಎರಡಲ್ಲ ಮೂರು ಮದುವೆಯಾಗಿ ಲಕ್ಷ ಲಕ್ಷ ರುಪಾಯಿಗಳನ್ನು ಲೂಟಿ ಹೊಡೆದಿದ್ದಾಳೆ. ಈಕೆಯ ಬಣ್ಣಬಣ್ಣದ ಮಾತಿಗೆ ಮನಸೋತ ಇಬ್ಬರು ಗಂಡಂದಿರು ಇದೀಗ ಬೀದಿಪಾಲಾಗಿದ್ದರೇ, ಮೂರನೇ ಗಂಡನ ಜತೆ ಜೀವನ ಮಾಡುತ್ತಿದ್ದಾಳೆ. ತಮಗೆ ಮೋಸ ಮಾಡಿದ್ದಾಳೆ ಎಂದು ಇಬ್ಬರು ಗಂಡಂದಿರುವ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ್ದಾರೆ. ಸುಧಾರಾಣಿ ಎನ್ನುವ ಬ್ಯೂಟಿಯ ಮೇಲೆ ಯುವಕರು ಹಣ ದೋಚಿದ ಆರೋಪ ಮಾಡುತ್ತಿದ್ದಾರೆ.

ವಿಚಿತ್ರ ಕಾರಣಕ್ಕೆ ಮೊದಲ ಗಂಡನನ್ನು ಬಿಟ್ಟ ಸುಧಾರಾಣಿ

ಹೌದು, ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿಯಿಂದ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದೀಗ ಮೊದಲ ಗಂಡ ವೀರೇಗೌಡ ಹಾಗೂ ಎರಡನೇ ಗಂಡ ಅನಂತಮೂರ್ತಿ ತಮಗೆ ನ್ಯಾಯಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೊದಲು ಸುಧಾರಾಣಿ ಪ್ರೀತಿ ಮಾಡಿ ವೀರೇಗೌಡ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಮೇಲೆ ವೀರೇಗೌಡ ಹಾಗೂ ಸುಧಾರಾಣಿಗೆ ಎರಡು ಮಕ್ಕಳಾದವು. ಆದರೆ ವೀರೇಗೌಡನಿಗೆ ಕಾರು ಹಾಗೂ ಬುಲೆಟ್ ಓಡಿಸಲು ಬರುವುದಿಲ್ಲ ಎಂದು ನೆಪಹೇಳಿ ಗಂಡನನ್ನು ಬಿಟ್ಟು ಹೋಗಿದ್ದಳು.

ಡೆಲಿವರಿ ಬಾಯ್ ಜತೆ ಲವ್ವಿಡವ್ವಿ: 

ಇನ್ನು ಮೊದಲ ಗಂಡ ವೀರೇಗೌಡನನ್ನು ಬಿಟ್ಟು ಬಂದ ಬಳಿಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ, ಸುಧಾರಾಣಿಯ ಬಣ್ಣದ ಮಾತಿಗೆ ಮರುಳಾಗಿ ಹೋಗಿದ್ದಾನೆ. ಅನಂತಮೂರ್ತಿ ಬಳಿ, ತಮ್ಮ ಮೊದಲ ಗಂಡ ಸತ್ತಿರುವುದಾಗಿ ಹೇಳಿ, ಅನಂತಮೂರ್ತಿ ಜತೆ ಲವ್ವಿಡವ್ವಿ ನಡೆಸಿದ್ದಾಳೆ. ಇದಾದ ಬಳಿಕ ಸುಧಾರಾಣಿಯ ಮಾತು ನಂಬಿ ಅನಂತಮೂರ್ತಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ. ಅನಂತಮೂರ್ತಿ ಜತೆ ಒಂದುಕಾಲು ವರ್ಷಗಳ ಕಾಲ ಸಂಪರ್ಕದಲ್ಲಿದ್ದ ಸುಧಾರಾಣಿ ಆತನಿಂದ 15ರಿಂದ 20 ಲಕ್ಷ ರುಪಾಯಿ ವಂಚನೆ ಮಾಡಿದ್ದಾಳೆ ಎಂದು ಆರೋಪ ಕೇಳಿ ಬಂದಿದೆ.

ಇದೀಗ ಸುಧಾರಾಣಿ ಅನಂತಮೂರ್ತಿಗೆ ಕೈಕೊಟ್ಟು ಕನಕಪುರ ಮೂಲದ ಮತ್ತೊಬ್ಬನನ್ನು ಮದುವೆಯಾಗಿರುವ ಆರೋಪ ಕೇಳಿ ಬಂದಿದೆ. ಆಕೆ ಹಣವಿರುವವರನ್ನು ನೋಡಿಯೇ ಹಣಕ್ಕಾಗಿಯೇ ಯಾಮಾರಿಸುತ್ತಿದ್ದಾಳೆ ಎಂದು ಮೊದಲ ಗಂಡ ಆರೋಪಿಸುತ್ತಿದ್ದಾನೆ. ಈ ವಂಚಕಿ ಸುಧಾರಾಣಿ ವಿರುದ್ದ ಕ್ರಮಕೈಗೊಳ್ಳಿ ಎಂದು ಮಾಜಿ ಗಂಡಂದಿರಿಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.