ಶಿವಮೊಗ್ಗ(ಜು.02): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ಬುಧವಾರ 3 ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 176ಕ್ಕೇರಿದೆ. 

ಮಂಗಳೂರು KSRTC ಡಿಪೋದ ಬಸ್ ನಿರ್ವಾಹಕರೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರು ಭದ್ರಾವತಿ ನಿವಾಸಿಯಾಗಿದ್ದಾರೆ. ಇವರು ಜೂ.27ರಂದು ಭದ್ರಾವತಿಗೆ ಬಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಮಂಗಳವಾರ ರಾತ್ರಿ ಅವರಿಗೆ ಕೊರೋನ ಪಾಸಿಟಿವ್ ಎಂದು ಕಂಡುಬಂದಿದೆ. ಹೀಗಾಗಿ ಭದ್ರಾವತಿಯ ಹೊಸಮನೆ ಬಡಾವಣೆಯನ್ನೂ ಸೀಲ್ ಡೌನ್ ಮಾಡಲಾಗಿದೆ. ಇವರ ಮನೆಯಲ್ಲಿದ್ದ ತಂದೆ, ತಾಯಿ ಪ್ರಥಮ ಸಂಪರ್ಕಿತರಾಗಿದ್ದು, ಇವರಿಗೂ ಕ್ವಾರಂಟೈನ್ ಮಾಡಲಾಗಿದೆ. 

ಸಾಗರದ ಮೆಸ್ಕಾಂನಲ್ಲಿ ಲೈನ್‌ಮ್ಯಾನ್ ಓರ್ವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಕ್ವಾಟ್ರಸ್ ಸೀಲ್ ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿರುವ, 58 ವರ್ಷದ ತಾಯಿ, 39 ವರ್ಷದ ಪತ್ನಿ, 13 ವರ್ಷದ ಮಗಳು, 10 ವರ್ಷದ ಮಗನಿಗೆ ಇದೀಗ ಹೋಂ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಪ್ರಾಥಮಿಕ ಸಂಪರ್ಕ ಹೊಂದಿರುವ ಮೂವರು ಮೆಸ್ಕಾಂ ಉದ್ಯೋಗಿಗಳಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ. 

ಕೊಡಗಿನಲ್ಲಿ ಮೂರು ತಿಂಗಳ ಮಗು ಸೇರಿ 13 ಮಂದಿಗೆ ಸೋಂಕು

ಇನ್ನು ಬೆಂಗಳೂರಿನಿಂದ ಶಿರಾಳಕೊಪ್ಪದ ಕುಸ್ಕೂರಿಗೆ ಬಂದಿದ್ದ 27 ವರ್ಷದ ಯುವಕನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಇವರು ಜೂ. 26 ರಂದು ಬಸ್ ಮೂಲಕ ಶಿರಾಳಕೊಪ್ಪಕ್ಕೆ ಬಂದಿದ್ದರು ಎನ್ನಲಾಗಿದೆ. ಶೀತ, ಕೆಮ್ಮು, ಜ್ವರದ ಹಿನ್ನೆಲೆಯಲ್ಲಿ ಜೂ. 27 ಕ್ಕೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಸಾಗರದ ಮೆಸ್ಕಾಂ ಕಚೇರಿ ಮತ್ತು ಕ್ವಾಟ್ರಸ್ ಹಾಗೂ ಭದ್ರಾವತಿಯ ಹೊಸಮನೆ ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರ ವಿವರ: ಪಿ-15352 40ವರ್ಷದ ಪುರುಷ (ಐಎಲ್‌ಐ), ಪಿ-15353 27 ವರ್ಷದ ಯುವಕ (ಅಂತರ್ ಜಿಲ್ಲಾ ಪ್ರಯಾಣ), ಪಿ-15354 41 ವರ್ಷದ ಪುರುಷ (ಅಂತರ್ ಜಿಲ್ಲಾ ಪ್ರಯಾಣ). 

ಜಿಲ್ಲೆಯಲ್ಲಿ ಇದುವರೆಗೂ 176 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 109 ಮಂದಿ ಗುಣಮುಖರಾಗಿದ್ದಾರೆ. 65 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ