ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.18): ವಿಧಾನಸೌಧದ ಎದುರು ವಾಮಾಚಾರ ಮಾಡಿದ್ದು ಆಯ್ತು. ಎಂಎಲ್‌ಎ ಎಲೆಕ್ಷನ್‌ ವೇಳೆಯೂ ವಾಮಾಚಾರ ನಡೆದಿದ್ದು ಬೆಳಕಿಗೆ ಬಂದಿತ್ತು. ಇದೀಗ ಗ್ರಾಪಂ ಚುನಾವಣೆಗೂ ವಾಮಾಚಾರ ಕಾಲಿಟ್ಟಿದೆ. ವಾಮಮಾರ್ಗದಿಂದಲೂ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಂಬಲದಿಂದ ಕೆಲವರು ವಾಮಾಚಾರಕ್ಕೆ ಮೊರೆ ಹೋಗಿದ್ದು, ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದೆ.

ಗ್ರಾಪಂಗಳಿಗೆ ಮೊದಲೆಲ್ಲ ಅನುದಾನ ಅಷ್ಟಕಷ್ಟೇ ಇತ್ತು. ಆಗ ಸದಸ್ಯರಾದರೂ ಅಷ್ಟೊಂದು ಪ್ರಯೋಜನವೆಂಬುದು ಇರುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಪ್ರತಿವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟಿಗಟ್ಟಲೇ ಅನುದಾನ ಗ್ರಾಪಂಗಳಿಗೆ ಹರಿದು ಬರುತ್ತದೆ. ಇನ್ನೂ ಪಂಚಾಯಿತಿಗೆ ಬರುವ ಅನುದಾನ ನೇರವಾಗಿ ಪಂಚಾಯಿತಿ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಇದು ಗ್ರಾಪಂ ಚುನಾವಣೆಗೆ ನಿಲ್ಲುವವರ ಸಂಖ್ಯೆ ಹೆಚ್ಚಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಒಂದು ಸಲ ಗ್ರಾಪಂ ಚುನಾವಣೆಯಲ್ಲಿ ಗೆದ್ದು ಬಂದರೆ ಮುಗಿಯಿತು. ಐದು ವರ್ಷದಲ್ಲಿ ಒಳ್ಳೆಯ ದುಡ್ಡು ಮಾಡಬಹುದು ಎಂಬ ಖಯಾಲಿ ಇದೀಗ ಮರಿ ರಾಜಕಾರಣಿಗಳಲ್ಲಿ ಮೂಡಿದೆ. ಹೀಗಾಗಿ ಹೇಗಾದರೂ ಆಗಲಿ ಒಂದು ಸಲ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪಣ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳದ್ದು. ಇದಕ್ಕಾಗಿ ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ.

ರಾಯಚೂರು: ಜಿಲ್ಲಾಧಿಕಾರಿ ಕಚೇರಿ ಸಮೀಪವೇ ವಾಮಾಚಾರ!

ದಿನವಿಡೀ ಪ್ರಚಾರ, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲೂ ಪ್ರಚಾರ ನಡೆಸುವುದಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ರಾತ್ರಿ ವೇಳೆ ಯಾವುದಾದರೂ ಮಾಂತ್ರಿಕನನ್ನು ಹಿಡಿದು ಎದುರಾಳಿಗಳು ಸೋಲಲಿ ಎಂದು ಮಾಟ ಮಂತ್ರಕ್ಕೆ ಶರಣಾಗಿದ್ದಾರೆ. ಇನ್ನು ಮತದಾರರನ್ನು ಸೆಳೆಯುವುದಕ್ಕಾಗಿ ‘ವಶೀಕರಣ’ ಮಾಟವಂತೆ ಅದನ್ನು ಮಾಡಿಸುತ್ತಿದ್ದಾರೆ. ಅಭ್ಯರ್ಥಿಗಳ ಮನೆ ಮುಂಭಾಗ, ಹಿಂಭಾಗ, ಸ್ಮಶಾನ, ಮೂರು ರಸ್ತೆ, ನಾಲ್ಕು ರಸ್ತೆಗಳು ಸಂಪರ್ಕಿಸುವ ರಸ್ತೆಗಳಲ್ಲಿ ಇದೀಗ ವಾಮಾಚಾರ ಮಾಡಿದ್ದು ಬೆಳಕಿಗೆ ಬರುತ್ತಿದೆ.

ಮೊಟ್ಟೆ, ಕುಂಕುಮ, ಅರಿಶಿಣ, ಸೂಜಿ, ಲಿಂಬೆಹಣ್ಣು, ಕೇರ್‌ಬೀಜ ಮತ್ತಿತರರ ವಸ್ತುಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಇಂತಹದೊಂದು ಪ್ರಕರಣ ನವಲಗುಂದ ತಾಲೂಕಿನ ಬಸಾಪುರದಲ್ಲಿ ಎರಡು ದಿನದ ಹಿಂದೆ ಪತ್ತೆಯಾಗಿದೆ. ಇದೇ ರೀತಿ ಬೇರೆ ಬೇರೆ ಗ್ರಾಮಗಳಲ್ಲೂ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಬರೀ ಅಭ್ಯರ್ಥಿಗಳ ಮನೆಯ ಎದುರಿಗಷ್ಟೇ ಅಲ್ಲ. ಅವರಿಗೆ ಸೂಚಕರಾದವರ ಮನೆಯ ಎದುರಿಗೆ ಇಂತಹ ವಾಮಾಚಾರ ಮಾಡಲಾಗುತ್ತಿದೆ.

ಗ್ರಾಮಸ್ಥರ ಆಕ್ರೋಶ:

ಗ್ರಾಮಸ್ಥರಲ್ಲಿ ಇದು ಭೀತಿಯನ್ನುಂಟು ಮಾಡುತ್ತಿದ್ದು, ಸಂಬಂಧಗಳೂ ಇದರಿಂದ ಹದಗೆಡುತ್ತಿವೆ. ಯಾರ ಮನೆ ಎದುರಿಗೆ ಈ ರೀತಿ ವಾಮಾಚಾರ ನಡೆದಿರುತ್ತದೆಯೋ ಆ ಅಭ್ಯರ್ಥಿಯ ಎದುರಾಳಿಗಳ ಮೇಲೆ ಎಲ್ಲರೂ ಸಂಶಯ ಪಡುವಂತಾಗಿದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಈ ರೀತಿ ಮಾಡುವುದು ಎಷ್ಟುಸರಿ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೇ, ಯಾರ ಮನೆ ಎದುರಿಗೆ ವಾಮಾಚಾರದ ಕುರುಹುಗಳು ಪತ್ತೆಯಾಗುತ್ತಿವೆಯೋ ಆ ಅಭ್ಯರ್ಥಿ ಪರ ಅನುಕಂಪ ವ್ಯಕ್ತವಾಗುತ್ತಿದೆ. ಇದು ಎದುರಾಳಿಗಳಲ್ಲಿ ತಲ್ಲಣವನ್ನುಂಟು ಮಾಡುತ್ತಿದೆ. ಇದು ಮಂತ್ರವಾದಿಗಳಿಗೆ ಜೇಬು ತುಂಬಿಸುವ ಕೆಲಸವೂ ಆಗುತ್ತಿದೆ.

ಒಟ್ಟಿನಲ್ಲಿ ಗ್ರಾಪಂ ಚುನಾವಣೆಯಲ್ಲಿ ವಾಮಾಚಾರದ ಕರಿನೆರಳು ಚಾಚಿರುವುದಂತೂ ಸತ್ಯ. ಅಭ್ಯರ್ಥಿಗಳು ವಾಮಮಾರ್ಗದ ಮೂಲಕ ಗೆಲ್ಲುವ ಪ್ರಯತ್ನ ಮಾಡುವುದು ಸರಿಯಲ್ಲ ಎಂಬುದು ಪ್ರಜ್ಞಾವಂತರ ಅಭಿಮತ.

ಹೌದು, ಗ್ರಾಮಗಳಲ್ಲಿ ವಾಮಾಚಾರ ಮಾಡುವ ಪ್ರಯತ್ನಗಳು ಕಳೆದ ಒಂದು ವಾರದಿಂದ ಹೆಚ್ಚಾಗಿ ಕಂಡು ಬರುತ್ತಿವೆ. ಇದು ಸರಿಯಲ್ಲ. ಯಾವುದೇ ಅಭ್ಯರ್ಥಿಯಾದರೂ ವಾಮ ಮಾರ್ಗದ ಮೂಲಕ ಗೆಲ್ಲುವುದು ಸರಿಯಲ್ಲ. ಚುನಾವಣೆಯಲ್ಲಿ ಮತ ಪಡೆದೇ ಗೆಲ್ಲಬೇಕು ಎಂದು ನಾಗರಿಕ ವೀರೇಶ ಪಾಟೀಲ ಹೇಳಿದ್ದಾರೆ.