ಒಂದು ಕಾಲದಲ್ಲಿ ತಂದೆಯ ಕೃಷಿ ನಷ್ಟದಿಂದಾಗಿ ಕುಟುಂಬವೇ ಕೃಷಿಯಿಂದ ದೂರವಾಗಿತ್ತು. ಆದರೆ ಅದೇ ನೋವಿನ ನೆನಪು ಮಗನ ಜೀವನದ ದಿಕ್ಕನ್ನೇ ಬದಲಿಸಿತು. 17 ವರ್ಷಗಳ ಕಾಲ ಪ್ರತಿಷ್ಠಿತ ಐಟಿ ಕಂಪನಿ Wiproದಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ಕೈತುಂಬಾ ಸಂಬಳ ತರುವ ಉದ್ಯೋಗವನ್ನು ತೊರೆದು ಕೃಷಿಗೆ ಮರಳಿದರು.
ಒಂದು ಕಾಲದಲ್ಲಿ ತಂದೆಯ ಕೃಷಿ ನಷ್ಟದಿಂದಾಗಿ ಕುಟುಂಬವೇ ಕೃಷಿಯಿಂದ ದೂರವಾಗಿತ್ತು. ಆದರೆ ಅದೇ ನೋವಿನ ನೆನಪು ಮಗನ ಜೀವನದ ದಿಕ್ಕನ್ನೇ ಬದಲಿಸಿತು. 17 ವರ್ಷಗಳ ಕಾಲ ಪ್ರತಿಷ್ಠಿತ ಐಟಿ ಕಂಪನಿ Wiproದಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ಕೈತುಂಬಾ ಸಂಬಳ ತರುವ ಉದ್ಯೋಗವನ್ನು ತೊರೆದು ಕೃಷಿಗೆ ಮರಳಿದರು. ಆರಂಭದಲ್ಲಿ ಹಲವು ಬಾರಿ ಉದ್ಯಮ ಮುಚ್ಚುವ ಹಂತಕ್ಕೆ ತಲುಪಿದರೂ ಛಲ ಬಿಡಲಿಲ್ಲ. ಈ ಯಶಸ್ಸಿನ ಹಿಂದಿರುವ ವ್ಯಕ್ತಿಯೇ ಶಶಿ ಕುಮಾರ್. ಅವರ ಉದ್ಯಮದ ಹೆಸರು ಅಕ್ಷಯಕಲ್ಪ ಆರ್ಗ್ಯಾನಿಕ್ (Akshayakalpa Organic).
ತಂದೆಯ ಕಣ್ಣೀರೇ ಜೀವನದ ಗುರಿ ಬದಲಿಸಿತು
ಶಶಿ ಕುಮಾರ್ ಅವರ ಕೃಷಿಯತ್ತ ಒಲವು ಮೂಡಲು ಬಾಲ್ಯದ ಒಂದು ಕಹಿ ನೆನಪೇ ಕಾರಣ. 1981ರಲ್ಲಿ ಬೆಳೆ ಸಂಪೂರ್ಣ ನಷ್ಟವಾದಾಗ ಅವರ ತಂದೆ ತೀವ್ರ ನೋವಿನಿಂದ ಕುಸಿದುಬಿದ್ದಿದ್ದರು. ಆ ಘಟನೆಯಿಂದ ಕುಟುಂಬ ಕೃಷಿಯನ್ನೇ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸುಮಾರು 30 ವರ್ಷಗಳ ಬಳಿಕ ಅದೇ ಕೃಷಿ ಕ್ಷೇತ್ರಕ್ಕೆ ಮರಳುವ ನಿರ್ಧಾರವನ್ನು ಶಶಿ ಕುಮಾರ್ ತೆಗೆದುಕೊಂಡರು. ಅಷ್ಟರಲ್ಲಾಗಲೇ ಅವರು ಅಮೆರಿಕದ ಚಿಕಾಗೋದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಬಳಿಕ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದಲ್ಲಿ ಬರೋಬ್ಬರಿ 17 ವರ್ಷಗಳ ಕಾಲ ಕೆಲಸ ಮಾಡಿದ್ದರು. ಉತ್ತಮ ಉದ್ಯೋಗ, ಕೈತುಂಬಾ ಸಂಬಳವಿದ್ದರೂ ಅವರ ಮನಸ್ಸು ಮಾತ್ರ ಕೃಷಿಯತ್ತ ಸೆಳೆಯುತ್ತಿತ್ತು.
2010ರಲ್ಲಿ ವಿಪ್ರೋ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರಿಗೆ ತೆರಳಿದರು. ಈ ನಿರ್ಧಾರಕ್ಕೆ ಆರಂಭದಲ್ಲಿ ಕುಟುಂಬದಿಂದಲೂ ಹೆಚ್ಚಿನ ಬೆಂಬಲ ಸಿಗಲಿಲ್ಲ. ಕೃಷಿಗೆ ಮರಳಿದರೆ ಜೀವನ ನಡೆಸುವುದು ಹೇಗೆ ಎಂದು ತಂದೆಯೇ ಪ್ರಶ್ನಿಸಿದ್ದರು.
ಚಿಕ್ಕ ಉದ್ಯಮಕ್ಕೆ ಕೈಜೋಡಿಸಿದ ವಿಪ್ರೋ ಸ್ನೇಹಿತರು
ತಿಪಟೂರಿನಲ್ಲಿ ತಮ್ಮ ಚಿಕ್ಕಪ್ಪ ಡಾ. ಜಿಎನ್ಎಸ್ ರೆಡ್ಡಿ ಅವರೊಂದಿಗೆ ಸೇರಿ ಶಶಿ ಕುಮಾರ್ ಅಕ್ಷಯಕಲ್ಪ ಆರ್ಗ್ಯಾನಿಕ್ ಸಂಸ್ಥೆಯನ್ನು ಸ್ಥಾಪಿಸಿದರು. ಗ್ರಾಮೀಣ ಯುವಕರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಗಾಂಧಿವಾದಿ ಪಶುವೈದ್ಯರಾಗಿದ್ದ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸುಸ್ಥಿರ ಹೈನುಗಾರಿಕೆ ಮಾದರಿಯನ್ನು ರೂಪಿಸಲು ಮುಂದಾದರು.
ಆದರೆ ಉದ್ಯಮ ಆರಂಭಿಸುವುದು ಸುಲಭವಾಗಿರಲಿಲ್ಲ. ಹಣಕಾಸಿನ ಕೊರತೆಯಿಂದಾಗಿ ಮೊದಲ ಒಂಬತ್ತು ವರ್ಷಗಳಲ್ಲಿ ಅಕ್ಷಯಕಲ್ಪ ಬರೋಬ್ಬರಿ ಆರು ಬಾರಿ ಮುಚ್ಚುವ ಹಂತಕ್ಕೆ ತಲುಪಿತ್ತು. ಪ್ರತಿಬಾರಿಯೂ ಉದ್ಯಮವನ್ನು ಉಳಿಸಿಕೊಳ್ಳಲು ಶಶಿ ಕುಮಾರ್ ಹೊಸ ಮಾರ್ಗಗಳನ್ನು ಹುಡುಕಬೇಕಾಯಿತು.
ಈ ಸಂದರ್ಭದಲ್ಲಿ ಅವರು ವಿಪ್ರೋದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದ ಹಳೆಯ ಸಹೋದ್ಯೋಗಿಗಳ ಸಹಾಯ ಕೇಳಿದರು. ಕೆಲವರು 50 ಸಾವಿರ ರೂ. ನೀಡಿದರೆ, ಇನ್ನು ಕೆಲವರು 50 ಲಕ್ಷ ರೂ.ವರೆಗೆ ಹೂಡಿಕೆ ಮಾಡಿದರು. ಹೀಗೆ ಒಟ್ಟು 27 ಎಂಜಿನಿಯರ್ಗಳು ತಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡಿ ಉದ್ಯಮಕ್ಕೆ ಬೆಂಬಲವಾಗಿ ನಿಂತರು. ಇದಕ್ಕೆ ಪ್ರತಿಯಾಗಿ ಅವರು ಕಂಪನಿಯಲ್ಲಿ ಒಟ್ಟಾರೆ ಸುಮಾರು ಶೇ.12ರಷ್ಟು ಮಾಲೀಕತ್ವ ಹೊಂದಿದರು.
ರೈತರ ಕೈಯಲ್ಲೇ ಜಮೀನು, ಕಂಪನಿಯಿಂದ ಹಾಲಿಗೆ ಖಚಿತ ಮಾರುಕಟ್ಟೆ
ಅಕ್ಷಯಕಲ್ಪದ ಉದ್ಯಮ ಮಾದರಿ ಸಾಂಪ್ರದಾಯಿಕ ಹೈನುಗಾರಿಕೆ ಉದ್ಯಮಕ್ಕಿಂತ ವಿಭಿನ್ನವಾಗಿದೆ. ಸಾಮಾನ್ಯವಾಗಿ ಹೈನುಗಾರಿಕೆ ಕಂಪನಿಗಳು ಸ್ವಂತ ಫಾರ್ಮ್ಗಳು ಮತ್ತು ಜಾನುವಾರುಗಳನ್ನು ನಿರ್ವಹಿಸುತ್ತವೆ. ಆದರೆ ಅಕ್ಷಯಕಲ್ಪ ಸ್ವಂತ ಜಮೀನು ಅಥವಾ ಜಾನುವಾರುಗಳನ್ನು ಹೊಂದುವುದಕ್ಕೆ ಆದ್ಯತೆ ನೀಡುವುದಿಲ್ಲ. ಬದಲಾಗಿ ಸ್ವತಂತ್ರ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಂದ ಹಾಲು ಖರೀದಿಸುತ್ತದೆ. ರೈತರು ತಮ್ಮ ಜಮೀನು ಮತ್ತು ಜಾನುವಾರುಗಳ ಮೇಲಿನ ನಿಯಂತ್ರಣವನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಅವರು ಉತ್ಪಾದಿಸುವ ಸಂಪೂರ್ಣ ಹಾಲಿಗೆ ಒಪ್ಪಿಕೊಂಡ ಬೆಲೆಯಲ್ಲಿ ಖಚಿತ ಮಾರುಕಟ್ಟೆಯನ್ನು ಕಂಪನಿ ಒದಗಿಸುತ್ತದೆ.
ಈ ಮಾದರಿಯಿಂದಾಗಿ ಇಂದು 1,750ಕ್ಕೂ ಹೆಚ್ಚು ರೈತರು ಅಕ್ಷಯಕಲ್ಪದೊಂದಿಗೆ ಕೈಜೋಡಿಸಿದ್ದಾರೆ. ಕಂಪನಿಯ ಮಾಹಿತಿಯ ಪ್ರಕಾರ, ಈ ರೈತರ ಸರಾಸರಿ ಮಾಸಿಕ ಆದಾಯ ಸುಮಾರು 1.28 ಲಕ್ಷ ರೂ. ತಲುಪಿದೆ.
30 ಕೋಟಿ ರೂ.ನಿಂದ 720 ಕೋಟಿ ರೂ.ಗೆ ಬೆಳೆದ ವ್ಯವಹಾರ
ಶಶಿ ಕುಮಾರ್ ಅವರ ಪರಿಶ್ರಮಕ್ಕೆ ಈಗ ದೊಡ್ಡ ಮಟ್ಟದ ಫಲ ಸಿಗುತ್ತಿದೆ. ಕಂಪನಿಯ ಆದಾಯದ ಬೆಳವಣಿಗೆಯೇ ಇದಕ್ಕೆ ಸಾಕ್ಷಿ.
FY20ರಲ್ಲಿ ಕಂಪನಿಯ ಆದಾಯ 30 ಕೋಟಿ ರೂ.
FY25ರ ವೇಳೆಗೆ ಆದಾಯ 387 ಕೋಟಿ ರೂ.
ಪ್ರಸಕ್ತ ವರ್ಷದ ಆದಾಯ ಬರೋಬ್ಬರಿ 720 ಕೋಟಿ ರೂ.
ಕಂಪನಿಯ ಬೆಳವಣಿಗೆಗೆ ಹೂಡಿಕೆದಾರರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2026ರ ಮಾರ್ಚ್ನಲ್ಲಿ ಟೆಮಾಸೆಕ್ ಬೆಂಬಲಿತ ಹೂಡಿಕೆ ವೇದಿಕೆ ಎಬಿಸಿ ಇಂಪ್ಯಾಕ್ಟ್ (ABC Impact) ನೇತೃತ್ವದಲ್ಲಿ 175 ಕೋಟಿ ರೂ. ಹೂಡಿಕೆಯನ್ನು ಕಂಪನಿ ಪಡೆದುಕೊಂಡಿದೆ. ಈ ಹೂಡಿಕೆಯ ಸಂದರ್ಭದಲ್ಲಿ ಅಕ್ಷಯಕಲ್ಪದ ಮೌಲ್ಯ ಸುಮಾರು 1,600 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.
ಆದರೆ ಕಂಪನಿ ಇನ್ನೂ ಲಾಭದ ಹಾದಿಯಲ್ಲಿದೆ ಎನ್ನುವಂತಿಲ್ಲ. FY25ರಲ್ಲಿಯೂ ನಷ್ಟವನ್ನು ದಾಖಲಿಸಿತ್ತು. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು, ಮೂಲಸೌಕರ್ಯ ಬಲಪಡಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ವ್ಯಯಿಸುತ್ತಿದೆ.












