ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಸ್ಪೀಕರ್‌ ಹೊರಟ್ಟಿ

*  ಈಗಾಗಲೇ ಸಿಎಂ, ಸ್ಪೀಕರ್‌ ಜೊತೆ ಚರ್ಚೆ
*  ಡಿಸೆಂಬರ್‌ 2ನೇ ವಾರದಿಂದ ಅಧಿವೇಶನ ನಡೆಯುವ ಸಾಧ್ಯತೆ
*  ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಹೆಚ್ಚು ಕೇಂದ್ರೀಕರಣ
 

Winter Session Will Be Held in Belagavi Says Basvaraj Horatti grg

ಹುಬ್ಬಳ್ಳಿ(ಅ.07):  ಚಳಿಗಾಲದ ಅಧಿವೇಶನವನ್ನು(Winter Session) ಈ ಸಲ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ, ಸ್ಪೀಕರ್‌ ಜತೆ ಮಾತನಾಡಿದ್ದೇನೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ತಿಳಿಸಿದ್ದಾರೆ.  

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉತ್ತರ ಕರ್ನಾಟಕ(North Karnataka) ಭಾಗದ ಸಮಸ್ಯೆಗಳನ್ನು ಇಟ್ಟುಕೊಂಡು ಎರಡು ವಾರಗಳ ಕಾಲ ಅಧಿವೇಶನ ನಡೆಸಲು ಚರ್ಚಿಸಲಾಗಿದೆ. ಬಹುಶಃ ಡಿಸೆಂಬರ್‌ 2ನೇ ವಾರದಿಂದ ಅಧಿವೇಶನ ನಡೆಯಲಿದೆ. ಈ ಬಾರಿ ಬೆಂಗಳೂರಿನಲ್ಲಿ ನಡೆದ ಅಧಿವೇಶನದಂತೆ, ಬೆಳಗಾವಿಯಲ್ಲಿ(Belagavi) ನಡೆಯಲಿರುವ ಅಧಿವೇಶನಕ್ಕೂ ವಿರೋಧ ಪಕ್ಷದವರು ಸಹಕಾರ ನೀಡಬೇಕು. ಯಾವುದೇ ಗಲಾಟೆ, ಬಹಿಷ್ಕಾರ ಮಾಡದೆ ಮುಕ್ತವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರಲ್ಲಿ ವಿನಂತಿಸಲಾಗುವುದು. ವಿರೋಧ ಪಕ್ಷಗಳು ಸಹಕಾರ ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ನುಡಿದರು.

ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್‌ ಸಭಾಪತಿ ಮೂವರೂ ಈ ಭಾಗದವರೇ ಇದ್ದೇವೆ. ಆದ್ದರಿಂದ, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಬಹುದು. ಈ ಕುರಿತು ಈಗಾಗಲೇ ಕೆಲವಷ್ಟುಯೋಜನೆಗಳನ್ನು ಸಿದ್ಧಪಡಿಸಲಾಗಿದೆ. 3 ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಈ ಸಲ ನಡೆಯಲಿದೆ ಎಂದು ತಿಳಿಸಿದರು. ಬೆಂಗಳೂರಿನ ಅಧಿವೇಶನ ಈ ಸಲ ಉತ್ತಮವಾಗಿದೆ. ಅಜೆಂಡಾಗಳೆಲ್ಲ ಶೇ. 90ರಷ್ಟುಪೂರ್ಣವಾಗಿವೆ ಎಂದು ನುಡಿದ ಅವರು, ಪ್ರತಿಪಕ್ಷಗಳು ಅಧಿವೇಶನಕ್ಕೆ ಉತ್ತಮ ಸಹಕಾರ ನೀಡಿದವು. ಉತ್ತಮ ಚರ್ಚೆಗಳಾದವು ಎಂದು ತಿಳಿಸಿದರು.

ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ದರಿದ್ರ ಅಧಿಕಾರಿಗಳೇ ಕಾರಣ: ಬಸವರಾಜ ಹೊರಟ್ಟಿ

ಪಿಂಚಣಿ ಜಾರಿಯಾಗಲಿ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸುವ ಅವಕಾಶ ರಾಜ್ಯ ಸರ್ಕಾರಕ್ಕಿದೆ. ತಮಿಳುನಾಡು ಸರ್ಕಾರ ಅದಕ್ಕೆ ಸಮಿತಿಯೊಂದನ್ನು ರಚಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆಗೆ ಮುಂದಾಗಿದೆ. ರಾಜ್ಯದಲ್ಲಿ 1.38 ಲಕ್ಷ ಶಿಕ್ಷಕರು ನೂತನ ಪಿಂಚಣಿ ಯೋಜನೆಗೆ ಒಳಪಡುತ್ತಿದ್ದು, ಅದನ್ನು ವಿರೋಧಿಸಿ ಹೋರಾಟದ ಹಾದಿ ಸಹ ಹಿಡಿದಿದ್ದಾರೆ. ಪಿಂಚಣಿ ಜಾರಿಯಾಗಬೇಕು ಎಂದು ನುಡಿದರು.

ಶಿಕ್ಷಣ ನೀತಿ ತರಾತುರಿ ಬೇಡ:

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಅಧಿಕಾರಿಗಳಿಗೆ, ಶಿಕ್ಷಕರಿಗೂ ಸರಿಯಾಗಿ ಮಾಹಿತಿಯಿಲ್ಲ. ತರಾತುರಿಯಿಂದ ಇದನ್ನು ಜಾರಿಗೊಳಿಸಬಾರದು. ಜಾರಿಗೂ ಮುನ್ನ ವಿಭಾಗ ಮಟ್ಟದಲ್ಲಿ ತಂಡಗಳನ್ನು ರಚಿಸಿ ಸೆಮಿನಾರ್‌ ಮಾಡಬೇಕು. ಈ ನೀತಿಯಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಕಾರ್ಯಾಗಾರಗಳ ಮೂಲಕ ಜನರಿಗೆ, ಶಿಕ್ಷಕರಿಗೆ ಮನವರಿಕೆ ಮಾಡಿಕೊಡಬೇಕು. ಬಳಿಕ ಜಿಲ್ಲಾ ಮಟ್ಟದಲ್ಲೂ ಇದೇ ರೀತಿ ಕಾರ್ಯಾಗಾರ ಮಾಡಬೇಕು. ಯಾವ ರೀತಿ ಮಕ್ಕಳಿಗೆ ಉಪಯೋಗ ಎಂಬುದನ್ನು ತಿಳಿಸಿಕೊಡಬೇಕು. ಮಕ್ಕಳಿಗೆ ನೈತಿಕ ಶಿಕ್ಷಣ ಅತ್ಯಗತ್ಯ. ಆ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಆದರೆ ತರಾತುರಿಯಿಂದ ಜಾರಿಗೊಳಿಸುವ ಬದಲು ಅದರ ಬಗ್ಗೆ ಅರಿವು ಮೂಡಿಸುವ ಮೂಲಕ ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದರು.

ಮಹದಾಯಿಗಾಗಿ ಹೋರಾಟ ಮಾಡಿದವರೇ ಇದೀಗ ಆಡಳಿತದಲ್ಲಿದ್ದಾರೆ. ಆದಕಾರಣ ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
 

Latest Videos
Follow Us:
Download App:
  • android
  • ios