Asianet Suvarna News Asianet Suvarna News

ಬೆಳಗಾವಿ ನಂತರ ಈ ಜಿಲ್ಲೆಯಲ್ಲೂ ಒಡೆದ ಮನೆಯಾದ ಕಾಂಗ್ರೆಸ್

ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ್ ಇಬ್ಬರ ಹಿಡಿತದಲ್ಲೇ ಮಹಾನಗರ ಕಾಂಗ್ರೆಸ್ ಇತ್ತು. ಆಗಲೂ ಹಿರಿ ತಲೆಗಳು ಮೂಲೆಗುಂಪಾಗಿದ್ದವು ಎನ್ನುವ ಆರೋಪ ಇತ್ತು. ಪಕ್ಷದಲ್ಲಿನ ಭಿನ್ನಮತದಿಂದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಕ್ಕಿದ್ದ ಶಾಸಕರ ಸ್ಥಾನಗಳು ಎರಡಕ್ಕೇ ಇಳಿದಿವೆ. 

Will 'Hubballi Politics' Cost Congress Its MP Election ?
Author
Bengaluru, First Published Oct 1, 2018, 7:42 PM IST

ಹುಬ್ಬಳ್ಳಿ[ಅ.01]: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದ ಅಂಗವಾಗಿದ್ದರೂ ‘ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್’ ಒಳಜಗಳ, ಗುಂಪುಗಾರಿಕೆ, ಭಿನ್ನಮತಗಳಿಂದಾಗಿ ಅಕ್ಷರಶಃ ಒಡೆದ ಮನೆಯಂತಾಗಿದೆ!

ಮಹಾನಗರ ಜಿಲ್ಲಾ ಘಟಕ ಕೆಲವೇ ಕೆಲವರ ಕೈ ಸಿಲುಕಿ ನಲುಗುತ್ತಿದ್ದು, ಈ ಹಿಂದೆ ಇಲ್ಲಿ ಪಕ್ಷ ಕಟ್ಟಲು ಶ್ರಮಿಸಿದ್ದ ಅನೇಕ ಹಿರಿಯರು ಮೂಲೆಗುಂಪಾಗಿ ಮನೆ ಸೇರಿದ್ದಾರೆ. ಇನ್ನು ಹೊಸಬರಿಗೆ ಹೇಳುವವರು ಕೇಳುವವರು ಯಾರು ಇಲ್ಲ. ಯಾರ ಮಾತು ಯಾರೂ ಕೇಳುವುದಿಲ್ಲ. ಇಲ್ಲಿ ಎಲ್ಲರೂ ನಾಯಕರೇ,ದುಡಿಯುವ ಕಾರ್ಯಕರ್ತರೇ ಇಲ್ಲದ್ದರಿಂದ ದಿನದಿನವೂ ಇಲ್ಲಿನ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಹಾಗೆ ನೋಡಿದರೆ ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ್ ಇಬ್ಬರ ಹಿಡಿತದಲ್ಲೇ ಮಹಾನಗರ ಕಾಂಗ್ರೆಸ್ ಇತ್ತು. ಆಗಲೂ ಹಿರಿ ತಲೆಗಳು ಮೂಲೆಗುಂಪಾಗಿದ್ದವು ಎನ್ನುವ ಆರೋಪ ಇತ್ತು. ಪಕ್ಷದಲ್ಲಿನ ಭಿನ್ನಮತದಿಂದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಕ್ಕಿದ್ದ ಶಾಸಕರ ಸ್ಥಾನಗಳು ಎರಡಕ್ಕೇ ಇಳಿದಿವೆ. ಅದರಲ್ಲೂ ಕುಂದಗೋಳದಲ್ಲಿ ಶಾಸಕರಾಗಿರುವ ಸಿ.ಎಸ್.ಶಿವಳ್ಳಿ ಪಕ್ಷದ ವರ್ಚಸ್ಸಿಗಿಂತ ಸ್ವಂತ ವರ್ತಸ್ಸಿನಿಂದಲೇ ಗೆದ್ದು ಬಂದವರು. 

ಉಳಿದ ಕ್ಷೇತ್ರಗಳಲ್ಲಿನ ಭಿನ್ನಮತ ಕಾಂಗ್ರೆಸ್ ಕ್ಷೇತ್ರಗಳನ್ನು ಕಳೆದುಕೊಂಡಿದೆ. ವಿಧಾನಸಭೆ ಚುನಾವಣೆ ಫಲಿತಾಂಶದಿಂದ ನೋಡಿಯಾದರೂ ಸ್ಥಳೀಯ ಮುಂಖಂಡರು ಪಾಠ ಕಲಿತು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಾರೆ ಎಂದುಕೊಂಡಿದ್ದ ಕಾರ್ಯಕರ್ತರಿಗೆ ಕೊನೆಗೂ ನಿರಾಸೆಯಾಗಿದೆ. ಗುಂಪುಗಾರಿಕೆ, ಭಿನ್ನಮತ, ಒಳಜಗಳಗಳೆಲ್ಲ ಮುಂದುವರಿದಿವೆ. ಹತ್ತು ಹಲವು ಬಾರಿ ಬೀದಿ ರಂಪವಾಗಿ, ಆ ಜಗಳಗಳೆಲ್ಲ ಬೀದಿಗೆ ಬಂದದ್ದುಂಟು.

ಸಾಧನೆ ಹೇಳಲು ಹಿಂದೇಟು:
ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ಪಾಲುದಾರ ಆಗಿದ್ದರೂ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವಲ್ಲಿ ಮುಖಂಡರು, ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳು ಮಹಾನಗರದಲ್ಲಿ ಉದ್ಘಾಟನೆಗೆ ಸಿದಟಛಿವಾಗಿವೆ. ಆದರೆ ಲೋಕಾರ್ಪಣೆಯಾಗಿದ್ದು ಬರೀ ಮೂರೇ. ಉಳಿದವುಗಳನ್ನು ಏಕೆ ಉದ್ಘಾಟಿಸುತ್ತಿಲ್ಲ ಎಂಬ ಪ್ರಶ್ನೆಯನ್ನೂ ಕೇಳುವ ತಾಕತ್ತಾಗಲಿ, ಒಗ್ಗಟ್ಟಾಗಲಿ ಕಾಂಗ್ರೆಸ್‌ನಲ್ಲಿ ಇಲ್ಲದಂತಾಗಿದೆ.

ಬರೀ ಆಗೊಮ್ಮೆ ಈಗೊಮ್ಮೆ ಪತ್ರಿಕಾ ಪ್ರಕಟಣೆ ಹೊರಡಿಸುವುದಕ್ಕೆ ಸೀಮಿತವಾಗಿರುವ ಕಾಂಗ್ರೆಸ್ ಚಟುವಟಿಕೆ, ಒಡೆದ ಮನೆಯಂತಾಗಿರುವ ಕಾಂಗ್ರೆಸ್ ನ್ನು ರಿಪೇರಿ ಮಾಡಲು ಮುಂದಾಗದಿದ್ದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆಲುವು ಕಾಣುವುದು ಕಷ್ಟ ಎಂಬ ಮಾತು ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ. ಇನ್ನಾದರೂ ಪಕ್ಷದ ವರಿಷ್ಠರು ಜಿಲ್ಲಾ ಕಾಂಗ್ರೆಸ್ ನಲ್ಲಿನ ಭಿನ್ನಮತ ನಿವಾರಣೆ ಮಾಡಿ ಸಂಘಟನೆಗೆ ಒತ್ತು ನೀಡುವರೆ? ಎಂಬುದನ್ನು ಕಾಯ್ದು ನೋಡಬೇಕಷ್ಟೇ.!

ಯುವ ಕಾಂಗ್ರೆಸ್ ರಂಪಾಟ: ಕೈ ನಾಯಕರೆಲ್ಲಿ?

ಇತ್ತೀಚಿಗಷ್ಟೇ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ರಾಯನಗೌಡರ ಅವರನ್ನು ಅಮಾನತು ಮಾಡಲಾಗಿದೆ. ಭಾರತ್ ಬಂದ್ ವೇಳೆ ಗಲಾಟೆ ಮಾಡಿದ ಮೂವರು ಯುವ ಕಾಂಗ್ರೆಸ್ ಪದಾಕಾರಿ ಗಳನ್ನು ಅಮಾನತು ಮಾಡಿದರೆ, 24ಗಂಟೆಯೊಳಗೆ ಅಮಾನತು ಮಾಡಿದ ಯುವ ಕಾಂಗ್ರೆಸ್ ಅಧ್ಯಕ್ಷರನ್ನೇ ಅಮಾನತು ಮಾಡುವ ಮೂಲಕ ಗಲಾಟೆ ಮಾಡಿದವರ ಬೆನ್ನಿಗೆ ಕಾಂಗ್ರೆಸ್ ಮುಖಂಡರು ನಿಂತಿದ್ದಾರೆ.

ಇದು ಕಾರ್ಯಕರ್ತರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಮಹಾನಗರ ಘಟಕದ ವಿರುದ್ಧವಂತೂ ಕಾರ್ಯಕರ್ತರು ಹತ್ತಾರು ಬಾರಿ ಬಹಿರಂಗ ವಾಗಿಯೇ ಅಸಮಾಧಾನ ಹೊರಹಾಕಿದ್ದುಂಟು. ಮಹಾನಗರ ಜಿಲ್ಲಾ ಘಟಕ ಕೆಲವರ ಹಿಡಿತದಲ್ಲಿದೆ. ಇಲ್ಲಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಆಟಕ್ಕುಂಟು ಲೆಕ್ಕಿಕ್ಕಿಲ್ಲದಂತಾ ಗಿದ್ದರೆ, ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಈವರೆಗೂ ಮನೆಯಿಂದ ಹೊರಗೆ ಬಂದಿಲ್ಲ.

ಸಂತೋಷ್ ಲಾಡ್ ಧಾರವಾಡ ಜಿಲ್ಲೆಯನ್ನೇ ಮರೆತು ನಾಪತ್ತೆಯಾದಂತಾಗಿದ್ದಾರೆ. ಹಿರಿಯ ತಲೆಗಳಾದ ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಎಸ್.ಆರ್.ಮೋರೆ, ಜಬ್ಬಾರ ಖಾನ ಹೊನ್ನಾಳಿ, ಕೆ.ಎನ್.ಗಡ್ಡಿ, ಮಾಜಿ ಸಂಸದ ಪ್ರೊ. ಐ.ಜಿ.ಸನದಿ, ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಪಾಲಿಕೆ ಮಾಜಿ ಸದಸ್ಯ ದುರ್ಗಪ್ಪ ಬಿಜವಾಡ ಸೇರಿದಂತೆ ಮತ್ತಿತರರು ಕಾಂಗ್ರೆಸ್ಸಿನಲ್ಲಿ ಇದ್ದೂ ಇಲ್ಲದಂತಿದ್ದಾರೆ. ಹಾಗಂತ ಇವರು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಏನೂ ಇಲ್ಲ. ನಾನೂ ಪಕ್ಷದಲ್ಲಿದ್ದೇನೆ ಎಂದು ತೋರಿಸಲು ಮಾತ್ರವೇ ಹೊರತು ಪಕ್ಷ ಸಂಘಟನೆಗೆ ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಪಕ್ಷದಲ್ಲಿ ಅವರನ್ನು ನಿರ್ಲಕ್ಷಿಸಿರುವುದು. ಹೀಗಾಗಿ ಪಕ್ಷದಲ್ಲಿದ್ದರೂ ಇವರು ಕಳೆದು ಹೋದಂತೆ ಇದ್ದಾರೆ.

- ಶಿವಾನಂದ ಗೊಂಬಿ
 

Follow Us:
Download App:
  • android
  • ios