ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ: ಸಚಿವ
ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದು ಪ್ರತಿ ವರ್ಷ ರಾಜ್ಯದಲ್ಲಿ 8 ಸಾವಿರ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಹಣ ಬಿಡುಗಡೆ ಮಾಡಿ ಕಾರ್ಯೋನ್ಮುಖವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ತಿಪಟೂರು : ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದು ಪ್ರತಿ ವರ್ಷ ರಾಜ್ಯದಲ್ಲಿ 8 ಸಾವಿರ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಹಣ ಬಿಡುಗಡೆ ಮಾಡಿ ಕಾರ್ಯೋನ್ಮುಖವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಕೆಪಿಎಸ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2 ಕೋಟಿ ರು.ಗಳ ನೂತನ ಶಾಲಾ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ 1.17 ಕೋಟಿ ರು.ಗಳಲ್ಲಿ ನಿರ್ಮಾಣವಾಗಿರುವ ನೂತನ ನಾಲ್ಕು ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿಯೂ ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಿ ಗುರಿ ತಲುಪಿದ್ದೇವೆ. ಪೋಷಕರು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು. ಸಮಯಕ್ಕೆ ಸರಿಯಾಗಿ ಬಸ್ ಇಲ್ಲ ಎಂಬ ದೂರುಗಳು ಬರುತ್ತಿದ್ದು ಬೆಳಿಗ್ಗೆ ನಿಗದಿತ ವೇಳೆಗೆ ಎಲ್ಲಾ ಕಡೆ ಏಕ ಕಾಲದಲ್ಲಿ ಬಸ್ ಸಂಚಾರ ಕಲ್ಪಿಸುವುದು ಸಾಧ್ಯವಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಸೇರಿಸಬೇಕೆಂದು ಸಚಿವರು ಹೇಳಿದರು.
ಕೆಲ ಪೋಷಕರು ಮಕ್ಕಳನ್ನು ನಗರದಲ್ಲಿ ಓದಿಸಬಾರದೇ ಎಂದು ಕೇಳುತ್ತಾರೆ. ಆದರೆ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿಯೂ ಅತ್ಯಾಧುನಿಕ ಪ್ರಯೋಗಾಲಯ, ಸುಸಜ್ಜಿತ ಶೌಚಾಲಯ, ಕೊಠಡಿ ಸೇರಿದಂತೆ ಮೂಲ ಭೂತ ಸೌಕರ್ಯಗಳಿದ್ದು ಪೋಷಕರು ಇಲ್ಲಿಯೇ ಮಕ್ಕಳನ್ನು ದಾಖಲು ಮಾಡಿದರೆ ಎಲ್ಲಿರಿಗೂ ಒಳಿತಾಗಲಿದೆ. ಆರು ತಿಂಗಳ ಒಳಗಾಗಿ ಉತ್ತಮ ಗುಣ ಮಟ್ಟದ ಕಟ್ಟಡವನ್ನು ನಿರ್ಮಿಸಿ ಕೊಡುವುದಾಗಿ ಜನತೆಗೆ ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್. ಆರ್. ಶ್ರೀಕಂಠ ಮೂರ್ತಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವರನ್ನು ಗ್ರಾಮಸ್ಥರು ಹಾಗೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಎಚ್.ಎಸ್. ಪ್ರಸಾದ್, ಉಪಾಧ್ಯಕ್ಷೆ ಗೌರಮ್ಮ, ಮಾಜಿ ಅಧ್ಯಕ್ಷರಾದ ಸುರೇಶ್, ಮುಪ್ಪುನೇಗೌಡ, ಮೈಲಾರಿ ರಾಜ ಅರಸ್, ಎಸ್‌ಡಿಎಂಸಿ ಉಪಾಧ್ಯಕ್ಷೆ ವಸಂತಮ್ಮ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಎನ್. ಹೊನ್ನೇಶಪ್ಪ, ಸಹಾಯಕ ಎಂಜಿನಿಯರ್ ಎಸ್.ಎಸ್. ತಿಮ್ಮಣ್ಣ, ಗುತ್ತಿಗೆದಾರ ಚಂದ್ರಶೇಖರ್, ಪ್ರಾಂಶುಪಾಲ ಬಿ. ನಾಗರಾಜು, ಮುಖ್ಯಶಿಕ್ಷಕ ರೇಣುಕಮ್ಮ, ಉಪನ್ಯಾಸಕರಾದ ನಟೇಶ್, ವರದರಾಜು ಸಏರಿದಂತೆ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಈ ವರ್ಷದಿಂದಲೇ ನೂತನ ಶಿಕ್ಷಣ ನೀತಿ
ಸುಬ್ರಹ್ಮಣ್ಯ (ಜ.19): ನೂತನ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಆಯ್ದ ಶಾಲೆಗಳಲ್ಲಿ ಅನುಷ್ಠಾನ ಗೊಳಿಸುತ್ತೇವೆ. ಮುಂದಿನ ವರ್ಷದಿಂದ ಪೂರ್ಣವಾಗಿ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು. ಅವರು ಬುಧವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಈ ವರ್ಷ 400-500 ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನ್ವಯ ಬೋಧನೆ ಆರಂಭವಾಗಲಿದೆ ಎಂದ ಸಚಿವರು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಹಿಂದಿನಂತೆಯೇ ನಡೆಯಲಿವೆ. ಈಗಾಗಲೇ ದಿನಾಂಕ ಘೋಷಿಸಲಾಗಿದೆ. ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.
ಮಕರ ಸಂಕ್ರಾಂತಿ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ14ರ ಬದಲು 15ಕ್ಕೆ ರಜೆ ನೀಡಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು. ವರ್ಷದಲ್ಲಿ ಐದು ರಜೆಗಳನ್ನು ನೀಡುವ ಅವಕಾಶ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅದರಂತೆ ಅವರು ರಜೆ ನೀಡುತ್ತಾರೆ. ರಜೆ ನೀಡುವಲ್ಲಿಯೂ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದರು.