ಒಂಟಿ ಸಲಗ ಸಂಚಾರ: ಚಾರ್ಮಾಡಿ ಘಾಟಿಯಲ್ಲಿ ಅರಣ್ಯ ಇಲಾಖೆಯಿಂದ ರಾತ್ರಿ ಗಸ್ತು
ಕಳೆದ ಕೆಲವು ದಿನಗಳಿಂದ ಕಾಡಾನೆ ಪ್ರತಿದಿನ ಎಂಬಂತೆ ಘಾಟಿಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನ ತನಕವು ಸವಾರಿ ನಡೆಸುತ್ತಿದ್ದು, ರಸ್ತೆಯಲ್ಲಿ ನಿಂತು ಈಚಲ ಮರ ತಿನ್ನುವುದು ಕಂಡುಬಂದಿದೆ.
ಬೆಳ್ತಂಗಡಿ (ಮೇ.18): ಚಾರ್ಮಾಡಿ ಘಾಟಿ ರಸ್ತೆ ಪರಿಸರದಲ್ಲಿ ನಿರಂತರವಾಗಿ ಕಾಡಾನೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಕಾಡಾನೆ ಪ್ರತಿದಿನ ಎಂಬಂತೆ ಘಾಟಿಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನ ತನಕವು ಸವಾರಿ ನಡೆಸುತ್ತಿದ್ದು, ರಸ್ತೆಯಲ್ಲಿ ನಿಂತು ಈಚಲ ಮರ ತಿನ್ನುವುದು ಕಂಡುಬಂದಿದೆ. ಅಲ್ಲದೆ ಹಲವು ಬಾರಿ ಹಗಲು ಹೊತ್ತಿನಲ್ಲೂ ಸಂಚಾರಿಸುತ್ತಿದ್ದು, ಪ್ರಯಾಣಿಕರ, ವಾಹನ ಸವಾರರರ ಭೀತಿಗೆ ಕಾರಣವಾಗಿದೆ.
ಕೆಲವು ಪ್ರಯಾಣಿಕರು ಆನೆಯನ್ನು ಅಟ್ಟಲು ಯತ್ನಿಸುವುದು, ಕಲ್ಲೆಸೆಯುವುದು, ಬೊಬ್ಬೆ ಹಾಕುವುದು, ಇತ್ಯಾದಿ ಅನಗತ್ಯ ಚಟುವಟಿಕೆಗಳನ್ನು ಮಾಡುತ್ತಾ ಅಪಾಯವನ್ನು ಆಹ್ವಾನಿಸುವುದು ಕಂಡುಬರುತ್ತಿದೆ. ನಿರಂತರವಾಗಿ ಕಾಡಾನೆ ಘಾಟಿ ರಸ್ತೆಯಲ್ಲಿ ಕಂಡು ಬರುವ ಕಾರಣ ಹಲವು ವಾಹನ ಸವಾರರು ಪ್ರಯಾಣಿಕರು ಈಗಲೂ ಭಯದಿಂದಲೇ ಸಾಗುತ್ತಿದ್ದಾರೆ.
ಕೇರಳಕ್ಕೆ ಜ್ವರ ಬಂದ್ರೆ, ಕರ್ನಾಟಕಕ್ಕೆ ಶೀತ ಆಗುತ್ತೆ: ಏನಿದು ವೆಸ್ಟ್ ನೈಲ್ ಆತಂಕ!
ಗಸ್ತು ಆರಂಭ: ಕಾಡಾನೆ ಘಾಟಿ ಪರಿಸರದಲ್ಲಿ ಓಡಾಟ ನಡೆಸುವ ಕುರಿತು ಪರಿಶೀಲನೆ ನಡೆಸಿದ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್ ಕುಮಾರ್ ಅವರ ತಂಡ, ಡಿಎಫ್‌ಒ ಆಂಟನಿ ಮರಿಯಪ್ಪ ಅವರ ನಿರ್ದೇಶನದಂತೆ ರಾತ್ರಿ ಗಸ್ತು ಆರಂಭಿಸಿದೆ. ಗಸ್ತು ತಂಡವು ಚಾರ್ಮಾಡಿ ಪೇಟೆಯಿಂದ ಘಾಟಿ ಪರಿಸರದವರೆಗೆ ರಾತ್ರಿ ರೌಂಡ್ಸ್ ಹಾಕುತ್ತದೆ. ಆನೆ ಕಂಡು ಬಂದರೆ ಅಗತ್ಯ ಸಂದರ್ಭ ಸಿಬ್ಬಂದಿಗೆ ಸ್ವ- ರಕ್ಷಣೆಗಾಗಿ ಬಂದೂಕು, ಕಾಡಿಗೆ ಅಟ್ಟಲು ಅಗತ್ಯ ಬೇಕಾದ ಪಟಾಕಿ, ವಾಹನ, ಟಾರ್ಚ್ ಇತ್ಯಾದಿ ಸೌಲಭ್ಯವನ್ನು ತಂಡಕ್ಕೆ ಒದಗಿಸಲಾಗಿದೆ. ಪ್ರಸ್ತುತ ಎರಡು ದಿನಗಳಿಂದ ಘಾಟಿ ಪರಿಸರದಲ್ಲಿ ಕಾಡಾನೆ ಕಂಡು ಬಂದಿಲ್ಲ. ಘಾಟಿ ಸಮೀಪದ ನೆರಿಯ ಗ್ರಾಮದ ಬಾಂಜಾರುಮಲೆ ಪರಿಸರಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಬಾಂಜಾರು ಮಲೆ ಪರಿಸರ ಘಾಟಿಯ 9ನೇ ತಿರುವಿಗೆ ಸಮೀಪವಿದ್ದು ಯಾವುದೇ ಕ್ಷಣದಲ್ಲಿ ಆನೆ ಮತ್ತೆ ಘಾಟಿಯತ್ತ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.