ಗುಂಡ್ಲುಪೇಟೆ (ಅ.04):   ಗೃಹಿಣಿಯೊಬ್ಬರು ಪ್ರಿಯಕರನೊಂದಿಗೆ ಚೆಲ್ಲಾಟವಾಡುತ್ತಿದ್ದುದನ್ನು ಪತಿ ನೋಡಿದ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿ ಕಾಲುವೆಗೆ ಎಸೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ.

ತಾಲೂಕಿನ ರಾಘವಾಪುರ ಗ್ರಾಮದ ನಾಗರಾಜನಾಯಕ(40) ಕೊಲೆಯಾದವರು. ಕೊಲೆ ಮಾಡಿದ್ದಲ್ಲದೇ ಪತಿ ಮೈಸೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆ ಬಿಟ್ಟವರು ಕಾಣೆಯಾಗಿದ್ದಾರೆ ಎಂದೂ ಪತಿ ಪದ್ಮ ಸೆ.14 ರಂದು ತಾಲೂಕಿನ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಪದ್ಮ ಹಾಗೂ ಪದ್ಮಳ ಪ್ರಿಯಕರ ಮಣಿಕಂಠ ಸದ್ಯಕ್ಕೆ ಪೊಲೀಸರ ವಶದಲ್ಲಿದ್ದಾರೆ.

ಏನಿದು ಘಟನೆ?

ತಾಲೂಕಿನ ರಾಘವಾಪುರದ ನಾಗರಾಜ ನಾಯಕರಿಗೆ ತೊಂಡವಾಡಿ ಗ್ರಾಮದ ಪದ್ಮಳನ್ನು ವಿವಾಹ ಮಾಡಿಕೊಡಲಾಗಿತ್ತು. ಆದರೂ ಪತಿಯ ಮನೆ ಬದಲು ತಾಯಿ ಮನೆ ತೊಂಡವಾಡಿಯಲ್ಲಿಯೇ ವಾಸವಿದ್ದಳು. ಸೆ.11 ರ ರಾತ್ರಿ ಪದ್ಮ ಹಾಗೂ ಮಣಿಕಂಠ ಗ್ರಾಮದ ಹೊರ ಭಾಗದ ಶನಿ ದೇವರ ದೇವಸ್ಥಾನದತ್ತ ತೆರಳುವುದನ್ನು ನಾಗರಾಜನಾಯಕ ಹಿಂಬಾಲಿಸಿದ್ದಾನೆ. ಪತಿ ನಾಗರಾಜನಾಯಕ ಕಂಡ ಪದ್ಮ ಹಾಗು ಮಣಿಕಂಠ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಟಿಕ್‌ಟಾಕ್‌ನಲ್ಲಿ ಶುರುವಾದ ಲವ್‌ಸ್ಟೋರಿ ಸೂಸೈಡ್‌ನಲ್ಲಿ ಅಂತ್ಯ ..

ಹಲ್ಲೆಗೊಳಗಾದ ನಾಗರಾಜನಾಯಕ ಗ್ರಾಮದ ಯಜಮಾನರಿಗೆ ಹೇಳುತ್ತೇನೆ ಎಂದು ಗ್ರಾಮದತ್ತ ತೆರಳುತ್ತಿದ್ದಾಗ ಪತ್ನಿ ಹಾಗೂ ಮಣಿಕಂಠ ಇಬ್ಬರು ಸೇರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆಯಾದ ನಾಗರಾಜನಾಯಕನ್ನು ನಂಜನಗೂಡು ತಾಲೂಕಿನ ಕಳಲೆ ಗ್ರಾಮದ ಬಳಿಯ ನೀರು ಕಾಲುವೆಗೆ ಬೀಸಾಕಿದ್ದಾಗಿ ಬಂಧಿತ ಪದ್ಮ ಹಾಗೂ ಮಣಿಕಂಠ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೃತದೇಹ ಎಸೆದ ಕಾಲುವೆಯತ್ತ ಬೇಗೂರು ಠಾಣಾ ಪೊಲೀಸರು ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿದ್ದಾರೆ. ಆದರೆ ಶವ ಮಾತ್ರ ಸಿಕ್ಕಿಲ್ಲ. ಮೃತ ದೇಹಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಬೇಗೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಶವ ದೊರೆತ ಬಳಿಕ ಕೊಲೆ ಪ್ರಕರಣ ದಾಖಲಾಗಿದೆ.