ಬೆಂಗಳೂರು :  ಪ್ರೀತಿಸಿ ವಿವಾಹವಾದ 25 ದಿನಕ್ಕೆ ಬಿಪಿಒ ಉದ್ಯೋಗಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲಸೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಲಸೂರಿನ ಎಂ.ಸಿ.ಗಾರ್ಡನ್‌ ನಿವಾಸಿ ಶಂಕರ್‌(24) ಆತ್ಮಹತ್ಯೆ ಮಾಡಿಕೊಂಡ ಬಿಪಿಒ ಉದ್ಯೋಗಿ. ಶಂಕರ್‌ ಆತ್ಮಹತ್ಯೆಗೆ ಪತ್ನಿ ಲಕ್ಷಿತಾ (19) ಕಾರಣ ಎಂದು ಆರೋಪಿಸಿ ಮೃತನ ಪೋಷಕರು ದೂರು ನೀಡಿದ್ದಾರೆ. ಲಕ್ಷಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಲಸೂರು ಠಾಣೆ ಪೊಲೀಸರು ಹೇಳಿದರು.

ಶಂಕರ್‌ ಕೆಲ ವರ್ಷಗಳಿಂದ ಹಲಸೂರು ನಿವಾಸಿ ಲಕ್ಷಿತಾಳನ್ನು ಪ್ರೀತಿಸುತ್ತಿದ್ದರು. ಏ.18ರಂದು ಶಂಕರ್‌ ಹಾಗೂ ಲಕ್ಷಿತಾ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಲಕ್ಷಿತಾ ತವರು ಮನೆಗೆ ತೆರಳಿದ್ದು, ಆರೋಪಿತೆಯ ಪೋಷಕರು ಆಕೆಯ ಮನಃಪರಿವರ್ತನೆ ಮಾಡಿದ ಹಿನ್ನೆಲೆ ಲಕ್ಷಿತಾ ಪತಿಯ ಮನೆಗೆ ವಾಪಸ್‌ ಆಗಿರಲಿಲ್ಲ. ಶಂಕರ್‌ ಪತ್ನಿಗೆ ಹಲವು ಕರೆ ಮಾಡಿದರೂ ಲಕ್ಷಿತಾ ಕರೆ ಸ್ವೀಕರಿಸಿರಲಿಲ್ಲ. 

‘ನೀನು ಕರೆ ಸ್ವೀಕರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಶಂಕರ್‌ ಪತ್ನಿಗೆ ಮೊಬೈಲ್‌ನಲ್ಲಿ ಸಂದೇಶ ರವಾನಿಸಿದ್ದರು. ಆರೋಪಿ ಪತ್ನಿ ‘ಹೋಗಿ ಸಾಯಿ’ ಎಂದು ಮರು ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ನೊಂದ ಶಂಕರ್‌ ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಪುತ್ರನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಲಕ್ಷಿತಾ ಹಾಗೂ ಆಕೆಯ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತನ ತಂದೆ ರಾಜು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.