ಸಚಿವ ಕಾರಜೋಳ ಅವಹೇಳನಕ್ಕೆ ವ್ಯಾಪಕ ಖಂಡನೆ
* ಚಪ್ಪಾಳೆ ಗಿಟ್ಟಿಸಿಕೊಳ್ಳಲು ಈ ರೀತಿ ಮಾತನಾಡಬಾರದು
* ಅವಾಚ್ಯ ಶಬ್ಧದಿಂದ ವೈಯಕ್ತಿವಾಗಿ ನಿಂದನೆ ಮಾಡುವುದು ಖಂಡನೀಯ
* ಸಚಿವ ಕಾರಜೋಳ ಮನಸ್ಸಿಗೆ ನೋವಾಗಿದ್ರೆ ಕ್ಷಮೆಯಾಚಿಸುವೆ
ಇಂಡಿ(ಸೆ.22): ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಅವರನ್ನು ಅನಾಗರಿಕ ಪದದಿಂದ ಅವಮಾನಿಸಿರುವ ಘಟನೆಯನ್ನು ಬಿಜೆಪಿ ಮಂಡಲ ಖಂಡಿಸುತ್ತದೆ. ಕೂಡಲೇ ಅನಾಗರಿಕವಾಗಿ ಮಾತನಾಡಿದ ವ್ಯಕ್ತಿಯ ಮೇಲೆ ಮಾನಹಾನಿ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಬಿಜೆಪಿ(BJP) ಇಂಡಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಒಬಿಸಿ ಮೋರ್ಚಾ ರಾಜ್ಯ ಸದಸ್ಯ ಶೀಲವಂತ ಉಮರಾಣಿ, ಮುಖಂಡರಾದ ಅನಿಲ ಜಮಾದಾರ, ಹಣಮಂತ್ರಾಯಗೌಡ ಪಾಟೀಲ,ರಮೇಶ ಧರೆನವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಜಯಪುರ-ಬಾಗಲಕೋಟೆ(Vijayapura-Bagalkot) ಜಿಲ್ಲೆಗಳ ಈ ಪುಣ್ಯಭೂಮಿಯ ಋುಣ ತೀರಿಸಲು ಹಗಲಿರುಳು ಶ್ರಮಿಸುತ್ತಿರುವ ಮುತ್ಸದ್ದಿ ರಾಜಕಾರಣಿ ಗೋವಿಂದ ಕಾರಜೋಳ ಅವರ ಬಗ್ಗೆ ಹಗುರವಾಗಿ ಮಾತನಾಡಿ, ಅಗೌರವಿತವಾಗಿ ಮಾತನಾಡಿದ್ದು ಶೋಭೆ ತರುವಂತಹದ್ದಲ್ಲ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಯಾರಿಂದ ಕೇಳಿ ಮಾಡುವ ಜಾಯಮಾನ ಅವರದಲ್ಲ. ಅಭಿವೃದ್ಧಿಗಾಗಿ ಸಚಿವರಾದ ಗೋವಿಂದ ಕಾರಜೋಳ,ಸಂಸದ ರಮೇಶ ಜಿಗಜಿಣಗಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಯಾವುದೇ ಪಕ್ಷದ ಹಿರಿಯರನ್ನು, ಸಚಿವರನ್ನು ಈ ರೀತಿ ಅನಾಗರಿಕ ಪದ ಬಳಕೆ ಮಾಡಿ ಮಾತನಾಡುವುದು ಸರಿಯಲ್ಲ. ಮುಂದೆ ಇದೇ ರೀತಿ ಮುಂದುವರೆದರೆ ಕಾನೂನಿನ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಬೇಕಾಗುತ್ತದೆ. ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಅಗೌರವಿತವಾಗಿ ಮಾತನಾಡಿದ್ದು ಇಡೀ ಬಿಜೆಪಿ ಕಾರ್ಯಕರ್ತರಿಗೆ ನೋವು ತಂದಿದೆ. ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
6.5 ಕೋಟಿ ರು. ಖರ್ಚು ಮಾಡಲು ಟಾರ್ಗೆಟ್ ಕೊಟ್ಟ ಕಾರಜೋಳ!
ಜೆಡಿಎಸ್(JDS) ಪಕ್ಷದ ಕುಮಾರಸ್ವಾಮಿ ಅವರು ಬಿ.ಡಿ.ಪಾಟೀಲ ಅವರು ಬೆಂಗಳೂರಿಗೆ ಹೋಗಿ ವೈಯಕ್ತಿಕ ಕೆಲಸ ಮಾಡಿಕೊಂಡು ಬಂದಿದ್ದಾರೆ. ನೀರಾವರಿ ಬಗ್ಗೆ ಮಾತನಾಡಿರುವುದಿಲ್ಲ. ನೀರು ಎಲ್ಲರಿಗೂ ಬೇಕು. ಆದರೆ ವಾಕ್ ಸ್ವಾತಂತ್ರ ಇದೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲ. ಜೆಡಿಎಸ್ ಕಾರ್ಯಕರ್ತರು ಈ ರೀತಿ ಮಾತನಾಡುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರಚಾರ, ಚಪ್ಪಾಳೆ ಗಿಟ್ಟಿಸಿಕೊಳ್ಳಲು ಈ ರೀತಿ ಮಾತನಾಡಿದರೆ ಮುಂದೆ ಪರಿಣಾಮ ಎದಿರಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಿದ್ದಲಿಂಗ ಹಂಜಗಿ, ರಮೇಶ ಧರೆನವರ, ಸಂಜೀವ ದಶವಂತ, ಧರ್ಮು ಮದರಖಂಡಿ, ರವಿ ವಗ್ಗೆ, ದೇವೆಂದ್ರ ಕುಂಬಾರ, ವಿಜು ಮೂರಮನ, ಪಿಂಟೂ ರಾಠೋಡ, ದತ್ತಾ ಬಂಡೇನವರ, ಅಪ್ಪುಗೌಡ ಪಾಟೀಲ ಇತರರು ಇದ್ದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಜೆಡಿಎಸ್ ಮುಖಂಡನೊರ್ವ ಅನಾಗರಿಕ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಅವಾಚ್ಯ ಶಬ್ಧದಿಂದ ವೈಯಕ್ತಿವಾಗಿ ನಿಂದನೆ ಮಾಡುವುದು ಖಂಡನೀಯ. ಈ ರೀತಿ ಸಂಸ್ಕೃತಿ ಒಳ್ಳೆಯದಲ್ಲ. ಗೋವಿಂದ ಕಾರಜೋಳ ಅವರು ಜಿಲ್ಲೆಯ ನೀರಾವರಿ ಹೋರಾಟಕ್ಕಾಗಿ ಕಳೆದ 20 ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ನಮ್ಮ ಕ್ಷೇತ್ರ, ಜಿಲ್ಲೆಯವರು ಅಲ್ಲದಿದ್ದರೂ, ತವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಾಕಷ್ಟು ದುಡಿಯುತ್ತಿದ್ದಾರೆ. ಇಂತಹವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ತಿಳಿಸಿದ್ದಾರೆ.
ಸಚಿವ ಕಾರಜೋಳ ಮನಸ್ಸಿಗೆ ನೋವಾಗಿದ್ರೆ ಕ್ಷಮೆಯಾಚಿಸುವೆ
ಝಳಕಿ ಗ್ರಾಮದಲ್ಲಿ ಇಂಡಿ ತಾಲೂಕು ಸಮಗ್ರ ನೀರಾವರಿಗಾಗಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ ವೇಳೆಯಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಮಾತಿನ ಭರದಲ್ಲಿ ಅಗೌರವಿತವಾಗಿ ಮಾತನಾಡಿದ್ದರಿಂದ ಅವರ ಮನಸ್ಸಿಗೆ ನೋವಾಗಿದ್ದರೆ ಹಾಗೂ ಅವರ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಜೆಡಿಎಸ್ ಮುಖಂಡ ಮರೇಪ್ಪ ಗಿರಣಿವಡ್ಡರ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವರೊಬ್ಬರು ಮುತ್ಸದ್ಧಿ ಹಿರಿಯ ರಾಜಕಾರಣಿಯಾಗಿದ್ದು, ಬಾಯಿ ತಪ್ಪಿನಿಂದ ಅಜಾಗರೂಕತೆಯಿಂದ ನನ್ನಿಂದ ತಪ್ಪಾಗಿದೆ. ಅವರ ಬಗ್ಗೆ ನನಗೆನೂ ವೈಯಕ್ತಿಕ ದ್ವೇಷವಿಲ್ಲ. ಹಿರಿಯರನ್ನು ಅವಹೇಳನವಾಗಿ ಮಾತನಾಡಬೇಕು ಎಂಬ ಭ್ರಮೆ ಇರುವುದಿಲ್ಲ. ತಪ್ಪಿನಿಂದ ಈ ಘಟನೆ ನಡೆದಿದೆ. ಹಿರಿಯರಾದ ಗೋವಿಂದ ಕಾರಜೋಳ ಅವರಲ್ಲಿ ನನ್ನ ತಪ್ಪಿನ ಮಾತಿನಿಂದ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.