Asianet Suvarna News Asianet Suvarna News

ಅಪಸ್ವರದ ಮಧ್ಯೆಯೇ ನಾರಾಯಣ ಗುರು ಜಯಂತಿ: ಬೆಂಗ್ಳೂರಿಂದ ಮಂಗ್ಳೂರಿಗೆ ಶಿಫ್ಟ್ ಆಗಿದ್ದೇಕೆ?

ಯಾವುದೇ ಪೂರ್ವ ತಯಾರಿ ಇಲ್ಲದೇ ತರಾತುರಿಯಲ್ಲಿ ಕಾರ್ಯಕ್ರಮವನ್ನು ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎಂಬ ಆರೋಪದ ಮಧ್ಯೆಯೇ ಸರ್ಕಾರ ಕೊನೆಗೂ ಮಂಗಳೂರಿನಲ್ಲಿ ನಾರಾಯಣ ಗುರುಗಳ ಜಯಂತಿ ಆಚರಿಸಿದೆ. 

Why Narayana Guru Jayanti Shifted From Bengaluru to Mangaluru grg
Author
First Published Sep 10, 2022, 10:15 PM IST

ಭರತ್ ರಾಜ್, ಏಷ್ಯಾನೆಟ್ ‌ಸುವರ್ಣ ನ್ಯೂಸ್, ಮಂಗಳೂರು

‌ಮಂಗಳೂರು(ಸೆ.10):  ಕಳೆದ ಕೆಲ ವರ್ಷಗಳಿಂದ ವಿಧಾನಸೌಧದಲ್ಲಿ ಆಚರಿಸುತ್ತಿದ್ದ ನಾರಾಯಣ ಗುರುಗಳ ರಾಜ್ಯ ಮಟ್ಟದ ಜಯಂತಿ ಆಚರಣೆ ಈ ಬಾರಿ ಮಂಗಳೂರಿಗೆ ಶಿಫ್ಟ್ ಆಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೇ ತರಾತುರಿಯಲ್ಲಿ ಕಾರ್ಯಕ್ರಮವನ್ನು ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎಂಬ ಆರೋಪದ ಮಧ್ಯೆಯೇ ಸರ್ಕಾರ ಕೊನೆಗೂ ಮಂಗಳೂರಿನಲ್ಲಿ ನಾರಾಯಣ ಗುರುಗಳ ಜಯಂತಿ ಆಚರಿಸಿದೆ. 

ಇಂದು(ಶನಿವಾರ) ರಾಜ್ಯ ಸರ್ಕಾರದ ವತಿಯಿಂದ ‌ನಡೆದ ನಾರಾಯಣ ಗುರು ಜಯಂತಿ ಆಚರಣೆಯ ಹಿನ್ನೆಲೆ ಮಂಗಳೂರಿನ ನಾರಾಯಣ ಗುರು ವೃತ್ತದಲ್ಲಿ ತೆಂಗಿನ ಕಾಯಿ ಒಡೆದು ಸಚಿವ ಸುನಿಲ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಮಟ್ಟದ ನಾರಾಯಣ ಗುರು ಜಯಂತಿ ಆಚರಿಸಲಾಗ್ತಿದ್ದು, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ನಾರಾಯಣ ಗುರುಗಳ ಸ್ತಬ್ಧ ಚಿತ್ರದೊಂದಿಗೆ ಚೆಂಡೆ, ಗೊಂಬೆ, ಸ್ಯಾಕ್ಸೋಫೋನ್, ಡೊಳ್ಳು ಕುಣಿತ, ಹುಲಿವೇಷ ಮುಂತಾದ ಜಾನಪದ ಕಲಾತಂಡಗಳು ಭಾಗಿಯಾಗಿದ್ದವು. ಆ ಬಳಿಕ ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸೋ ಮೂಲಕ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು. ಬಳಿಕ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಗುರು ಜಯಂತಿ ಆಚರಣೆ ನಡೆಯಿತು. 

ಬಿಜೆಪಿ ಜನಸ್ಪಂದನ ಸಮಾವೇಶ: ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಘೋಷಿಸಿದ ಸಿಎಂ

ನಾವು ಮಹಾಪುರುಷರನ್ನು ಜಾತಿಗೆ ಸೀಮಿತವಾಗಿಸಿದ್ದೇವೆ: ಸುನಿಲ್ ಕುಮಾರ್ 

ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಚಿವ ಸುನೀಲ್ ಕುಮಾರ್ ಮಾತನಾಡಿ, ಈವರೆಗೆ ದಾರ್ಶನಿಕರ ಜಯಂತಿಗಳು ಬೆಂಗಳೂರಿಗೆ ಸೀಮಿತವಾಗಿತ್ತು. ರಾಜ್ಯಮಟ್ಟದ ಜಯಂತಿಗಳು ಬೆಂಗಳೂರಿನಲ್ಲೇ ನಡೆಯಿತ್ತಿತ್ತು.‌ ಇದರಿಂದ ದಾರ್ಶನಿಕರ ತತ್ವಗಳನ್ನು ರಾಜ್ಯಾದ್ಯಂತ ಪಸರಿಸಲು ಹಿನ್ನಡೆಯಾಗಿತ್ತು. ಹೀಗಾಗಿ ಇನ್ಮುಂದೆ ಆಯಾ ಜಿಲ್ಲೆಗಳಲ್ಲಿ ಜಯಂತಿಗಳನ್ನು ರಾಜ್ಯ ಮಟ್ಟದಲ್ಲಿ ಆಚರಿಸಲು ನಿರ್ಧಾರ ಮಾಡಲಾಗಿದೆ.‌ ಇದನ್ನ ಆರು ತಿಂಗಳ ಹಿಂದೆಯೇ ನಿರ್ಧರಿಸಿ ಇವತ್ತು ಗುರುಗಳ ‌ಜಯಂತಿ ನಡೆಯುತ್ತಿದೆ.‌ ಜಯಂತಿಗಳು ಇಲಾಖೆಗೆ ಸೀಮಿತವಾಗದೇ ರಾಜ್ಯದ ಮೂಲೆಮೂಲೆಗೂ ತಲುಪಿಸಲಾಗಿದೆ. ಇವತ್ತು ಮಂಗಳೂರಿನಲ್ಲಿ ಅರ್ಥಪೂರ್ಣ ಜಯಂತಿ ಆಚರಣೆಯ ಯಶಸ್ವಿ ಪ್ರಯತ್ನ ನಡೆದಿದೆ. ನಮ್ಮ ನಾಡಿನಲ್ಲಿ ಯಾವ ಮಹಾಪುರುಷರೂ ಜಾತಿಯನ್ನ ಇಟ್ಟುಕೊಂಡು ಸಂದೇಶ ಕೊಟ್ಟಿಲ್ಲ.‌ ಆದರೆ ನಾವು ‌ಮಾತ್ರ ಅವರನ್ನ ಒಂದು ಜಾತಿಗೆ ಸೀಮಿತವಾಗಿಸಿ ನೋಡ್ತಾ ಇದೀವಿ.‌ ಅಂಬೇಡ್ಕರ್, ಶಿವಾಜಿ, ರಾಣಿ ಚೆನ್ನಮ್ಮ ಸೇರಿ ಹಲವು ಮಹಾಪುರುಷರ ಇತಿಹಾಸ ಪಠ್ಯಪುಸ್ತಕಗಳಲ್ಲಿ ಸೇರಿಸಲಿಲ್ಲ. ಸ್ವಾತಂತ್ರ್ಯ ನಂತರದ ಪಠ್ಯದಲ್ಲಿ ಹಲವು ಮಹಾಪುರುಷರ ವಿಷಯಗಳನ್ನು ಬಚ್ಚಿಡಲಾಯ್ತು. ಸಣ್ಣ ಸಣ್ಣ ಪ್ಯಾರಾಗಳಲ್ಲಿ ಅವರ ಬಗ್ಗೆ ದಾಖಲಿಸಿ ಇಂದಿನ ಪೀಳಿಗೆಗೆ ಮುಚ್ಚಿಡಲಾಯ್ತು. ಹಲವು ಸರ್ಕಾರಗಳು ಈ ಕೆಲಸಗಳನ್ನು ಮಾಡಿಕೊಂಡು ‌ಬಂತು. ಆದರೆ ನಾವು ಮತ್ತೆ ಅವುಗಳನ್ನ ಪಠ್ಯಕ್ಕೆ ‌ತಂದು ಯುವಪೀಳಿಕೆಗೆ ತಿಳಿಸ್ತಾ ಇದೀವಿ ಎಂದರು.‌

ರಾಜ್ಯಮಟ್ಟದ ನಾರಾಯಣ ಗುರು ಜಯಂತಿಗೆ ವಿರೋಧ ಯಾಕೆ?

ಇವತ್ತು ‌ನಡೆದ ರಾಜ್ಯ ಮಟ್ಟದ ನಾರಾಯಣ ಗುರು ಜಯಂತಿಗೆ ದ.ಕ ಜಿಲ್ಲೆಯ ಕೆಲ ಬಿಲ್ಲವ ‌ಮುಖಂಡರು ಮತ್ತು ಸಂಘಟನೆಗಳು ಅಪಸ್ವರ ಎತ್ತಿತ್ತು‌. ಕೇವಲ ನಾಲ್ಕೈದು ದಿನಗಳ ಹಿಂದಷ್ಟೇ ಯಾವುದೇ ಪೂರ್ವ ಸಿದ್ದತೆ ಇಲ್ಲದೇ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಯಂತಿ ಆಚರಣೆ ‌ಸರಿಯಲ್ಲ, ಇದೊಂದು ರಾಜಕೀಯ ಹಿತಾಸಕ್ತಿ ಅಷ್ಟೇ ಅಂತ ಅಸಮಾಧಾನ ಹೊರ ಹಾಕಿದ್ದರು. ತಿಂಗಳ ಮೊದಲೇ ಹೇಳಿದ್ದರೆ ಅದ್ದೂರಿಯಾಗಿ ಮಾಡಬಹುದಿತ್ತು ಅನ್ನೋದು ಇವರ ವಾದ. ಅಲ್ಲದೇ ಖಾಸಗಿ ಸಭಾಂಗಣದ ಬದಲು ನಾರಾಯಣ ಗುರುಗಳು ಆಗಮಿಸಿದ್ದ ಕುದ್ರೋಳಿ ದೇವಸ್ಥಾನದಲ್ಲೇ ಆಚರಣೆ ಮಾಡಬಹುದಿತ್ತು ಎಂಬ ವಾದವೂ ಕೆಲ ಬಿಲ್ಲವ ಮುಖಂಡರದ್ದು‌. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡ್ತಾ ಇದ್ದು, ವೋಟ್ ಬ್ಯಾಂಕ್ ರಾಜಕಾರಣ ಅನ್ನೋದು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರೋಪ. ಅಲ್ಲದೇ ಸಾಮಾಜಿಕ ತಾಣಗಳಲ್ಲೂ ಈ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಹಲವು ಬಿಲ್ಲವ ಸಂಘಟನೆಗಳು ಮತ್ತು ಕೆಲ ನಾಯಕರು ಬಿಜೆಪಿ ಜೊತೆ ನಿಂತಿದ್ದು, ಇಂದಿನ ಗುರು ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. 

ಕರಾವಳಿಯ ಬಿಲ್ಲವ ವೋಟ್ ಬ್ಯಾಂಕ್ ದೊಡ್ಡದು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಬಹು ದೊಡ್ಡ ಓಟ್ ಬ್ಯಾಂಕ್ ನಲ್ಲಿ ಬಿಲ್ಲವ ಸಮುದಾಯದ್ದೇ ದೊಡ್ಡ ಪಾಲು. ಸುಮಾರು 4.5 ಲಕ್ಷ ಮತದಾರರನ್ನು ಹೊಂದಿರುವ ಬಿಲ್ಲವರ ಮತ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಕೈ ತಪ್ಪುವ ಆತಂಕ ಎದುರಾಗಿದೆ. 

Mangaluru Floods: ಅತಿವೃಷ್ಟಿಹಾನಿ: ಕೇಂದ್ರ ಅಧ್ಯಯನ ತಂಡದಿಂದ ಪರಿಶೀಲನೆ

ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರಲ್ಲಿ ಬಿಲ್ಲವರದ್ದೇ ಪಾರುಪತ್ಯವಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬಿಲ್ಲವ ಸಮುದಾಯದ ಕೆಲ ಪ್ರಮುಖರೇ ಬಿಜೆಪಿಯ ವಿರುದ್ಧ ಮುನಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವದಲ್ಲಿ ಕೇರಳ ರಾಜ್ಯದ ನಾರಾಯಣ ಗುರುಗಳ  ಟ್ಯಾಬ್ಲೋ ವನ್ನು ಹೊರಗಿಟ್ಟಿದ್ದು, ಕೇರಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಒಂದೇ ಜಾತಿ ಒಂದೇ ಕುಲ ಎಂದು ಸಾರಿದ್ದ ದಾರ್ಶನಿಕನಿಗೆ ಮೋದಿ ಸರ್ಕಾರ ಅವಮಾನ ಮಾಡಿದೆ ಎಂದು ಟೀಕೆಯೂ ವ್ಯಕ್ತವಾಗಿತ್ತು. ಆ ಬಳಿಕ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವೇಳೆಯೂ ರೋಹಿತ್ ಚಕ್ರತೀರ್ಥ ಸಮಿತಿ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿದ್ದು ಬಿಲ್ಲವ ಸಮುದಾಯದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು. ಉದ್ದೇಶ ಪೂರ್ವಕವಾಗಿ  ನಾರಾಯಣ ಗುರುಗಳ ಹೆಸರು ಪಠ್ಯದಿಂದ ತೆಗೆಯಲಾಗಿದೆ ಎಂದು ಜಿಲ್ಲೆಯಲ್ಲಿ ಪ್ರತಿಭಟನೆಗಳೂ ನಡೆದಿತ್ತು. ಇದಾದ ಬೆನ್ನಲ್ಲೇ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಲ್ಲವ ಸಮುದಾಯದ ಯುವಕ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಿಲ್ಲವ ಸಮುದಾಯದವರಾಗಿದ್ದು, ಈ ವೇಳೆ ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದ್ದು ರಾಜ್ಯವೇ ಕಂಡಿತ್ತು. ಹೀಗಾಗಿ ಈ ಅಸಮಾಧಾನ ತಣಿಸಿ ಬಿಲ್ಲವ ಮತಗಳು ಬಿಜೆಪಿ ಕೈ ತಪ್ಪದಂತೆ ಮಾಡಬೇಕಾದ್ರೆ ಪಕ್ಷದ‌ ಮೇಲೆ ಮುನಿಸುಗೊಂಡಿರುವ ಬಿಲ್ಲವ ಸಮುದಾಯವನ್ನು ಓಲೈಸುವ ಅನಿವಾರ್ಯತೆ ಬಿಜೆಪಿಗಿದೆ.  

ಹೀಗಾಗಿ ಬಿಲ್ಲವರನ್ನು ಓಲೈಕೆ ಮಾಡಲು ನಾರಾಯಣ ಗುರುಗಳ ರಾಜ್ಯಮಟ್ಟದ ಜಯಂತಿ ಆಚರಣೆ ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.‌ ಸ್ವತಃ ಬಿಲ್ಲವ ಸಮುದಾಯದಿಂದಲೇ ಬಂದಿರೋ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಈ ಬಾರಿ ನಾರಾಯಣ ಗುರುಗಳ ಜಯಂತಿಯನ್ನು ಮಂಗಳೂರಿನಲ್ಲೇ ಆಚರಿಸಿದ್ದಾರೆ.
 

Follow Us:
Download App:
  • android
  • ios