ಮೈಸೂರು-ಬೆಂಗಳೂರು ಹೆದ್ದಾರಿ ಯೋಜನೆ ಕಾಂಗ್ರೆಸ್ ಪೂರ್ಣಗೊಳಿಸಲಿಲ್ಲವೇಕೆ?: ಸದಾನಂದಗೌಡ
ಕಾಲಮಿತಿಯೊಳಗೆ ಜಾರಿಗೊಳಿಸದಿದ್ದರೆ ಅದು ಅಯೋಗ್ಯ ಸರ್ಕಾರ, ಪ್ರಗತಿಗೆ ವೇಗ ಕೊಡುವುದು ಬಿಜೆಪಿಯಿಂದಷ್ಟೇ ಸಾಧ್ಯ: ಡಿ.ವಿ.ಸದಾನಂದಗೌಡ
ಮಂಡ್ಯ(ಮಾ.08): ಪರಿವರ್ತನೆ ಜಗದ ನಿಯಮ. ಅದಕ್ಕೆ ವೇಗ ಕೊಡುವುದು ಸಹ ಮುಖ್ಯ. ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುವವರು ಯೋಜನೆಗೆ ತಾರ್ಕಿಕ ಅಂತ್ಯ ನೀಡುವಲ್ಲಿ ವಿಫಲರಾಗಿದ್ದೇಕೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಒಂದು ಸರ್ಕಾರದ ಕಾಲಘಟ್ಟದಲ್ಲಿ ಯೋಜನೆಗೆ ಚಾಲನೆ ನೀಡಿದಲ್ಲಿ ಮತ್ತೊಂದು ಸರ್ಕಾರ ಪೂರ್ಣಗೊಳಿಸುವುದಾದರೆ ಅಂತಹ ಸರ್ಕಾರಗಳು ಅಯೋಗ್ಯ ಸರ್ಕಾರಗಳು. ಆದರೆ, ನಾವು ನಮ್ಮ ಸರ್ಕಾರದ ಕಾಲಾವಧಿಯೊಳಗೆ ಜಾರಿಗೊಳಿಸಿದ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಇದು ನಮ್ಮದೇ ಯೋಜನೆ ಎಂದು ಎದೆತಟ್ಟಿಹೇಳುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿಯಿಂದ ಜಾತಿ ರಾಜಕಾರಣ: ಸಿ.ಟಿ.ರವಿ
ಮಂಡ್ಯ ಜಿಲ್ಲೆಯೊಳಗೆ ನಮ್ಮದೇ ಪಕ್ಷದ ಶಾಸಕರಿಲ್ಲದಿದ್ದ ಸಮಯದಲ್ಲೂ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದರಲ್ಲಿ ಮೈಷುಗರ್, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯೂ ಒಳಗೊಂಡಿದೆ. ಎರಡೂ ಕಾರ್ಖಾನೆಗಳಿಗೆ ನೂರಾರು ಕೋಟಿ ರು. ಅನುದಾನ ನೀಡಿ ಪುನಶ್ಚೇತನಕ್ಕೆ ಪ್ರಯತ್ನಿಸಿದ್ದೇವೆ. 2018ರಲ್ಲಿ ಮೈಷುಗರ್ ಸ್ಥಗಿತಗೊಂಡಿತ್ತು. ಮತ್ತೆ ಅದಕ್ಕೆ ಚಾಲನೆ ನೀಡಲು ನಮ್ಮದೇ ಸರ್ಕಾರ ಬರಬೇಕಾಯಿತು. 2022ರಲ್ಲಿ ಪುನಾರಂಭಿಸಲಾಗಿದೆ. ಕಾರ್ಖಾನೆಯನ್ನು ಸಕ್ಕರೆ ಉತ್ಪಾದನೆಗಷ್ಟೇ ಸೀಮಿತಗೊಳಿಸದೆ ಆರ್ಥಿಕವಾಗಿ ಬಲಪಡಿಸುವ ದೃಷ್ಟಿಯಿಂದ ಎಥೆನಾಲ್ ಘಟಕ ಸ್ಥಾಪನೆಗೆ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರೇ ಶಂಕುಸ್ಥಾಪನೆ ನೆರವೇರಿಸಿದರು. ಇದೀಗ ಮತ್ತೆ ಅವರೇ ಅಭಿವೃದ್ಧಿಯಾಗಿರುವ ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ರೀತಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಮೋದಿ ಅಡಿಗಲ್ಲು ಹಾಕಿದ್ದರು. ಕಾರ್ಖಾನೆಗೆ ಉತ್ಪಾದನೆಗೆ ಸಜ್ಜುಗೊಂಡ ನಂತರ ಉದ್ಘಾಟಿಸಿದ್ದೂ ನಮ್ಮ ಪ್ರಧಾನಿಯವರೇ. ಅಭಿವೃದ್ಧಿಯ ವೇಗಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ಮಾಡಿದ ಕೆಲಸದ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ನಾಟಕ: ನಳಿನ್ ಕುಮಾರ್ ಕಟೀಲ್
ಮಂಡ್ಯ ಜಿಲ್ಲೆಯೊಳಗೆ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ ಕಾಲುವೆಗಳ ದುರಸ್ತಿ, ಬೂಕನಕೆರೆ-ಸಂತೆಬಾಚಹಳ್ಳಿ ಸೇರಿದಂತೆ ಏತ ನೀರಾವರಿ ಯೋಜನೆಗಳು, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಇದರಿಂದಾಗಿ ಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ಕೆಲಸ ಮಾಡಿದ್ದೇವೆ. ಮಂಡ್ಯವನ್ನು ಚಿನ್ನದ ನಾಡಾಗಿ ಪರಿವರ್ತಿಸುವ ಕೆಲಸ ಮಾಡಿದ್ದು ಅದಕ್ಕೆ ಜನತೆ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು.
ಸಚಿವ ಕೆ.ಸಿ.ನಾರಾಯಣಗೌಡರು ಬಿಜೆಪಿಯಲ್ಲೇ ಇದ್ದಾರೆ. ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಅವರು ಭಾಗಿಯಾಗಿಲ್ಲವೆಂದ ಮಾತ್ರಕ್ಕೆ ಪಕ್ಷ ಬಿಟ್ಟಿದ್ದಾರೆ ಎಂಬ ಮಾತು ಸರಿಯಲ್ಲ. ನಾನೂ ಸಹ ಬೆಂಗಳೂರು ಲೋಕಸಭಾ ಸದಸ್ಯನಾಗಿದ್ದೇವೆ. ಅಂಗಾರ ಅವರು ಸುಳ್ಯ ಶಾಸಕರಾಗಿದ್ದು, ಅಲ್ಲಿಯೂ ಪಕ್ಷದ ಕಾರ್ಯಕ್ರಮಗಳು ನಡೆಯುತ್ತಿವೆ. ನಾವು ಅಲ್ಲಿಲ್ಲ ಎಂಬ ಮಾತ್ರಕ್ಕೆ ಪಕ್ಷ ತೊರೆದಿದ್ದೇವೆ ಎಂದರ್ಥವೇ. ನಾಳಿನ ಕಾರ್ಯಕ್ರಮದಲ್ಲಿ ನಾರಾಯಣಗೌಡರು ಭಾಗಿಯಾಗುತ್ತಾರೆ. ಇದರಲ್ಲಿ ಸಂಶಯವಿಲ್ಲ, ಅವರು ಪಕ್ಷ ಬಿಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೀನುಗಾರಿಕೆ ಸಚಿವ ಅಂಗಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಶಾಸಕ ಮಹೇಶ್ ಇತರರು ಗೋಷ್ಠಿಯಲ್ಲಿದ್ದರು.