Asianet Suvarna News Asianet Suvarna News

ಡಿ.ಕೆ.ಶಿವಕುಮಾರ್‌, ಕುಮಾರಸ್ವಾಮಿಯಿಂದ ಜಾತಿ ರಾಜಕಾರಣ: ಸಿ.ಟಿ.ರವಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಕ್ಕಾಗಿ ಜಾತಿ ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ಅಭಿವೃದ್ಧಿ ಪರ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. 

BJP Leader CT Ravi Slams On DK Shivakumar And HD Kumaraswamy At Mandya gvd
Author
First Published Mar 7, 2023, 1:40 AM IST | Last Updated Mar 7, 2023, 1:40 AM IST

ಮಳವಳ್ಳಿ (ಮಾ.07): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಕ್ಕಾಗಿ ಜಾತಿ ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ಅಭಿವೃದ್ಧಿ ಪರ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮುದಾಯ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಬೇಡಿಕೊಳ್ಳುತ್ತಿದ್ದರೆ, ಕುಮಾರಸ್ವಾಮಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಆಸೆಯಿಂದ ಒಕ್ಕಲಿಗ ಸಮುದಾಯದ ಓಲೈಕೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಈ ರೀತಿ ಜನಾಂಗವನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ಅಭಿವೃದ್ಧಿಯನ್ನು ಮುಂದಿಟ್ಟು ಜನರ ಬಳಿ ಮತಯಾಚಿಸುತ್ತಿದೆ ಎಂದರು.

ಉರಿಗೌಡ, ದೊಡ್ಡನಂಜೇಗೌಡರ ಪ್ರತಿಮೆ ನಿರ್ಮಾಣ: ಮಳವಳ್ಳಿಯಲ್ಲಿ ಬಿಜೆಪಿ ಗೆಲ್ಲಿಸಿದರೆ ಟಿಪ್ಪುವನ್ನು ಕೊಂದ ಉರಿಗೌಡ, ದೊಡ್ಡನಂಜೇಗೌಡರ ಪ್ರತಿಮೆಯನ್ನು ಪಟ್ಟಣದಲ್ಲಿ ನಿರ್ಮಿಸಲಾಗುವುದು. ಮೈಸೂರು ರಾಜರ ಅಧಿಕಾರವನ್ನು ಮೋಸದಿಂದ ಹೈದರಾಲಿ ಕಿತ್ತುಕೊಂಡರು. ನಂತರ ಟಿಪ್ಪು ದೂರಾಡಳಿತದಿಂದ ರೋಸಿಹೋದ ಉರಿಗೌಡ ದೊಡ್ಡನಂಜೇಗೌಡರ ಟಿಪ್ಪು ಸುಲ್ತಾನ್‌ನನ್ನು ಅಟ್ಟಾಡಿಸಿ ಕೊಂದರು ಎಂದರು. 

ಕಾಂಗ್ರೆಸ್‌ ಅ​ಧಿಕಾರಕ್ಕೂ ಬರಲ್ಲ, ಹಣ, ಅಕ್ಕಿ, ವಿದ್ಯುತ್‌ ಇಲ್ಲ: ಸಚಿವ ಎಂಟಿಬಿ ನಾಗರಾಜ್‌

ಟಿಪ್ಪು ಸುಲ್ತಾನ್‌ರನ್ನು ರಾಜನೆಂದು ಬಿಂಬಿಸಿದ್ದು ಸತ್ಯವನ್ನು ಮರೆಮಾಚಿದ್ದಾರೆ. ಉರಿಗೌಡ ಮತ್ತು ನಂಜೆಗೌಡರನ್ನು ವಂಶಸ್ಥರಾದ ನಾವುಗಳು ಸ್ಮರಿಸಿಕೊಳ್ಳಬೇಕಿದೆ. ಕೆಆರ್‌ಎಸ್‌ ಅಣೆಕಟ್ಟೆಕಟ್ಟಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೊರತು ಟಿಪ್ಪು ಅಲ್ಲ. ಆದರೆ, ಕನ್ನಡ ವಿರೋಧಿ ಹಿಂದು ವಿರೋಧಿಯಾದ ಟಿಪ್ಪುವನ್ನು ರಾಜನೆಂದು ಬಿಂಬಿಸಲಾಗುತ್ತಿದೆ. ಉರಿಗೌಡ, ದೊಡ್ಡನಂಜೇಗೌಡರ ಹೋರಾಟದ ಪ್ರತೀಕವಾಗಿ ಸ್ವಾಭಿಮಾನದ ಸಂಕೇತವಾಗಿ ಬಿಜೆಪಿಗೆ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಮೈಸೂರು ಜಿಲ್ಲೆಯಿಂದ ತಾಲೂಕಿನ ಕಿರುಗಾವಲು ಗ್ರಾಮಕ್ಕೆ ಆಗಮಿಸಿದ ಜನಸಂಕಲ್ಪ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ಸೇಬಿನ ಹಾರಹಾಕಿ ರಾಜ್ಯ ನಾಯಕರನ್ನು ಅಭಿನಂದಿಸಿದರು. ಸೇಬಿನ ಹಣ್ಣನ್ನು ಕಿತ್ತು ಸಾರ್ವಜನಿಕರತ್ತ ಸಿ.ಟಿ.ರವಿ ಎಸೆದರು. ಸೇಬನ್ನು ಪಡೆಯಲು ಕಾರ್ಯಕರ್ತರು ಮುಗಿಬಿದ್ದರು. ಜಾನಪದ ಕಲಾ ತಂಡದ ಜೊತೆಗೆ ಅದ್ಧೂರಿ ಮೆರವಣಿಗೆಯೊಂದಿಗೆ ಪಟ್ಟಣಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ, ಸಚಿವ ಗೋಪಾಲಯ್ಯ. ಸಂಸದ ಪ್ರತಾಪ್‌ ಸಿಂಹ, ಯಾತ್ರೆ ಸಂಚಾಲಕ ಅಶೋಕ್‌ ಕುಮಾರ್‌, ಮಾಜಿ ಸಚಿವ ಬಿ.ಸೋಮಶೇಖರ್‌, ಯಮದೂರು ಸಿದ್ದರಾಜು, ಜೆ.ಮುನಿರಾಜು, ಕುಮಾರಸ್ವಾಮಿ, ಉಮಾಶಂಕರ್‌ ಹಲವರು ಹಾಜರಿದ್ದರು.

ಉರ್ದು ಭಾಷೆಗೆ ತನ್ನದೆಯಾದ ಸೊಗಡಿದೆ: ದೇಶದಲ್ಲಿ ಉರ್ದು ಪ್ರಭಾವಿ ಭಾಷೆಯಾಗಿ ಪರಿವರ್ತನೆಯಾಗಿದೆ. ಆಲಿಸಲು, ಮಾತನಾಡಲು ಹಾಗೂ ಬರೆಯಲು ಉರ್ದು ಭಾಷೆ ತನ್ನದೆಯಾದ ಸೊಗಡನ್ನು ಹೊಂದಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಉರ್ದು ಅದಬ್‌ ಚಿಕ್ಕಮಗಳೂರು ವತಿಯಿಂದ ವಿದ್ಯಾಭಾರತಿ ಶಾಲೆ ಸಹಯೋಗದಲ್ಲಿ ನಡೆದ ಅಖಿಲ ಭಾರತ ಕವಿ ಸಮ್ಮೇಳನ-2023ರಲ್ಲಿ ಅವರು ಮಾತನಾಡಿದರು. ಹಲವು ಭಾಷೆಗಳ ಸಮ್ಮಿಳಿತದಿಂದ ಶ್ರೀಮಂತಿಕೆ ಪಡೆದ ಉರ್ದು ಭಾಷೆ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಸೇನೆಯಲ್ಲಿ ಪ್ರಭಾವಿ ಭಾಷೆಯಾಗಿ ಮಾರ್ಪಟ್ಟಿದ್ದನ್ನು ಇತಿಹಾಸದಿಂದ ತಿಳಿಯಬಹುದು. ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಉರ್ದು ಸಮ್ಮೇಳನ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಉರ್ದು ಭಾಷೆಗೆ ಮುಸ್ಲಿಂ ಸಮುದಾಯದವರು ಕೊಟ್ಟಿರುವ ಮಹತ್ವದ ಕೊಡುಗೆಯನ್ನು ನಾಡಿನ ಕನ್ನಡ ಭಾಷೆಗೂ ನೀಡಿ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು. ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಮುಮೀನ್‌ ಮುನಾವರ್‌ ಮಾತನಾಡಿ, ಉರ್ದು ಸಮ್ಮೇಳನ ಏರ್ಪಡಿಸುವ ಮೂಲಕ ಉರ್ದು ಭಾಷೆಯ ಮಹತ್ವ ಹಾಗೂ ಹಿರಿಮೆಯನ್ನು ತೆರೆದಿಟ್ಟಂತಾಗಿದೆ. ಕನ್ನಡಿಗರಾದ ನಾವು ಕನ್ನಡ ಮತ್ತು ಇತರೆ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮಾತೃಭಾಷೆ ಉರ್ದುವಿಗೆ ನೀಡಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿ: ರಣದೀಪ್‌ ಸಿಂಗ್‌ ವಾಗ್ದಾಳಿ

ವಿದ್ಯಾಭಾರತಿ ವಿದ್ಯಾಸಂಸ್ಥೆ ಸಂಸ್ಥಾಪಕ ಅಪ್ಸರ್‌ ಅಹ್ಮದ್‌ ಮಾತನಾಡಿ, ಮೊಬೈಲ್‌ ಬಳಕೆಯಿಂದ ವಿದ್ಯಾರ್ಥಿಗಳ ಓದಿಗೆ ಕುತ್ತು ಬರುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಪುರಾತನ ಇತಿಹಾಸ ಹೊಂದಿರುವ ಉರ್ದು ಭಾಷೆಯನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

Latest Videos
Follow Us:
Download App:
  • android
  • ios