ಧಾರವಾಡ(ಜೂ.28): ಅನೇಕರ ಜೀವ ಹಿಂಡಿರುವ ಕೊರೋನಾ ವೈರಸ್‌ ಜನರನ್ನು ಯಾವ್ಯಾವ ರೀತಿಯಲ್ಲಿ ಕಾಡುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಕಣ್ಣೆದುರಿಗೇ ಮಕ್ಕಳು ಇದ್ದರೂ ಕೊರೋನಾ ಹಿನ್ನೆಲೆಯಲ್ಲಿ ಮೃತ ತಂದೆಯ ಅಂತ್ಯಸಂಸ್ಕಾರ ಮಾಡದ ಸ್ಥಿತಿ ಉಂಟಾಗಿದೆ.

ನಗರದ ಮಿಚಿಗನ್‌ ಕಾಂಪೌಂಡ್‌ನ ಲೋಬೋ ಅಪಾರ್ಟ್‌ಮೆಂಟ್‌​ನಲ್ಲಿ ವಾಸವಾಗಿರುವ ಕುಟುಂಬಕ್ಕೆ ಇಂತಹ ಸ್ಥಿತಿ ಬಂದೊದಗಿದೆ. ಬೆಂಗಳೂರಿನಿಂದ ಆಗಮಿಸಿದ್ದ 55 ವರ್ಷದ ಪುರುಷನಲ್ಲಿ ಜೂ. 23ರಂದು ಮೊದಲು ಸೋಂಕು ಕಾಣಿಸಿಕೊಂಡಿತ್ತು. ಈ ಕಾರಣಕ್ಕಾಗಿ ಅವರ ಸಂಪರ್ಕದಲ್ಲಿದ್ದ ಅವರ ತಂದೆ (83 ವರ್ಷ), ತಾಯಿ (75) ಹಾಗೂ ಸಹೋದರರಿಗೆ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಧಾರವಾಡದಲ್ಲಿ ಮತ್ತೆ 19 ಕೊರೋನಾ ಪ್ರಕ​ರಣ ಪತ್ತೆ

ಪರೀಕ್ಷೆ ಬಳಿಕ ಒಬ್ಬ ಸಹೋದರಿಗೆ ಜೂ. 26ರಂದು ಸೋಂಕು ದೃಢಪಟ್ಟಿತ್ತು. ಇದೇ ಸಂದರ್ಭದಲ್ಲಿ ತಾಯಿ ಹಾಗೂ ಇನ್ನೋರ್ವ ಸಹೋದರಿಗೆ ಕೆಮ್ಮು, ನೆಗಡಿ ಹಾಗೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಿಂದ ತೀವ್ರ ಮಾನಸಿಕವಾಗಿ ಕುಗ್ಗಿದ್ದ ತಂದೆಯ ಆರೋಗ್ಯದಲ್ಲಿ ಏರುಪೇರಾಗಿ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇದೀಗ ಮನೆಯ ಮಂದಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು, ಇತ್ತ ತಂದೆಯ ಅಂತ್ಯಸಂಸ್ಕಾರಕ್ಕೂ ಹೋಗುವಂತಿಲ್ಲ. ತಾಯಿಯನ್ನೂ ಆರೈಕೆ ಮಾಡದ ಸ್ಥಿಯಲ್ಲಿ ಕುಟುಂಬಸ್ಥರು ತೊಳಲಾಡುವಂತಾಗಿದೆ. ತಂದೆ ಮೃತಪಟ್ಟ ಬಳಿಕ ಪರೀಕ್ಷೆ ನಡೆಸಲಾಗಿದೆ. ಆದರೆ ಈ ವರೆಗೂ ವರದಿ ಬರದ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ತೀರ್ಮಾನ ಕೈಗೊಂಡಿಲ್ಲ. ಇತ್ತ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಯಿಗೆ ಸೋಂಕು ಇಲ್ಲ. ಆದರೆ ಅವರನ್ನು ಆರೈಕೆ ಮಾಡುವವರು ಯಾರು? ಮೃತ ತಂದೆಯ ಅಂತ್ಯಸಂಸ್ಕಾರ ಹೇಗೆ ಎಂಬ ಚಿಂತೆಯಲ್ಲೇ ಕುಟುಂಬಸ್ಥರು ಕಾಲ ಕಳೆಯುವಂತಾಗಿದೆ.