ಮಂಡ್ಯ (ನ.16):  ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ನ.17ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷರು ಯಾರಾಗುತ್ತಾರೆ ಎಂಬ ವಿಚಾರ ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟು 15 ಸದಸ್ಯ ಬಲ ಹೊಂದಿರುವ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ 7, ಜೆಡಿಎಸ್‌ 4 ಸ್ಥಾನಗಳನ್ನು ಹೊಂದಿದ್ದು, ನಿರ್ದೇಶಕರಾಗಿ ಆಯ್ಕೆಯಾಗಿರುವ ಸಿ.ಅಶ್ವಥ್‌ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸಮಾನ ವಿಶ್ವಾಸ ಕಾಯ್ದುಕೊಂಡು ಮುಂದುವರೆದಿದ್ದಾರೆ. ಬ್ಯಾಂಕ್‌ನಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಹಿಡಿಯಬಹುದು ಎಂಬ ಲೆಕ್ಕಾಚಾರವಿದ್ದರೂ ಕೊನೆಯ ಹಂತದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರಾಜ್ಯ ರಾಜಕೀಯಕ್ಕೆ ಅಚ್ಚರಿಯ ಎಂಟ್ರಿ! ಬಿಜೆಪಿಯಿಂದ ಸೂಪರ್‌ಸ್ಟಾರ್‌ ಕಣಕ್ಕೆ?

ಜೆಡಿಎಸ್‌ ಬೆಂಬಲಿತ ಮತಗಳಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಿ.ಅಶ್ವಥ್‌ ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲಿತ ನಿರ್ದೇಶಕರ ಬೆಂಬಲದಿಂದ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದರೆ, ಮತ್ತೊಬ್ಬ ನಿರ್ದೇಶಕ ಕೆ.ಸಿ.ಜೋಗೀಗೌಡ ಅವರು ಕಾಂಗ್ರೆಸ್‌ ಬೆಂಬಲದಿಂದಲೇ ಅಧ್ಯಕ್ಷರಾಗುವ ಪ್ರಯತ್ನ ನಡೆಸಿದ್ದಾರೆ. ಇದರ ನಡುವೆ ಬಿಜೆಪಿ ನಾಮ ನಿರ್ದೇಶಿತ ನಿರ್ದೇಶಕನನ್ನೇ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಯತ್ನಗಳೂ ಒಳಗೊಳಗೆ ಚುರುಕನ್ನು ಪಡೆದುಕೊಂಡಿದೆ.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲೇ ತೀವ್ರ ಪೈಪೋಟಿ ನಡೆಸುತ್ತಿರುವ ಹೊತ್ತಿನಲ್ಲೇ ಬಿಜೆಪಿ ಜೊತೆಗೂಡಿ ಜೆಡಿಎಸ್‌ ಹೊಸ ರಾಜಕೀಯ ಅಸ್ತ್ರವನ್ನು ಪ್ರಯೋಗಿಸಿದೆ.

ಅಧ್ಯಕ್ಷರ ಆಯ್ಕೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದರ ಮೂಲಕ ತನ್ನ ಎದುರಾಳಿ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ಜೆಡಿಎಸ್‌ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ ಕಾಂಗ್ರಸ್‌ 7 ಸ್ಥಾನ, ಜೆಡಿಎಸ್‌ 4 ಸ್ಥಾನಗಳನ್ನು ಪಡೆದಿದ್ದು, ಅಧಿಕಾರಿ ವರ್ಗ 3 ಹಾಗೂ ಸರ್ಕಾರಿ ನಾಮನಿರ್ದೇಶನ 1 ಸ್ಥಾನ ಹೊಂದಿದೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಸಿ.ಅಶ್ವಥ್‌ ಎರಡೂ ಪಕ್ಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಪ ಚುನಾವಣೆಯ ಸೋಲಿನ ನಂತರ ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಸಿ.ಎಸ್‌.ಪುಟ್ಟರಾಜು ಜೊತೆಗೂಡಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ಮಂಡ್ಯ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.

ಬಿಜೆಪಿ ಸರ್ಕಾರದಿಂದ ನಾಮನಿರ್ದೇಶನ ಮಾಡುವ ನಿರ್ದೇಶಕರನ್ನೇ ಅಧ್ಯಕ್ಷರನ್ನಾಗಿ ಮಾಡುವುದು, ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ನೀಡುವುದು. ಆ ಮೂಲಕ ಡಿಸಿಸಿ ಬ್ಯಾಂಕ್‌ ಆಡಳಿತವನ್ನು ಬಿಜೆಪಿಗೆ ನೀಡುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಕುಗ್ಗಿಸುವ ಪ್ರಯತ್ನ ನಡೆಸಿದ್ದಾರೆಯೇ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಇತ್ತೀಚಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿರುವ ಆರೋಪ ಎದುರಿಸುತ್ತಿರುವ ಜೆಡಿಎಸ್‌ ಡಿಸಿಸಿ ಬ್ಯಾಂಕ್‌ನಲ್ಲೂ ಬಿಜೆಪಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ಗೆ ಮುಳುವಾಗಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾಜಿ ಸಚಿವ ಎನ್‌. ಚಲುರಾಯಸ್ವಾಮಿ ರಾಜಕೀಯ ಬಲವರ್ಧನೆಗೆ ಕಾರಣವಾಗಲಿದ್ದು, ಇದನ್ನು ತಪ್ಪಿಸಲು ಎಚ್‌.ಡಿ. ಕುಮಾರಸ್ವಾಮಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನುವುದು ಚರ್ಚಿತ ವಿಷಯವಾಗಿದೆ. ಜೆಡಿಎಸ್‌ ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಬಿಜೆಪಿ ಸೇರಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ತಂದುಕೊಟ್ಟಿರುವ ಸಚಿವ ಕೆ.ಸಿ.ನಾರಾಯಣಗೌಡ ಅವರು ಇದಕ್ಕೆ ಒಪ್ಪುತ್ತಾರೆಯೇ ಎನ್ನುವುದು ಪ್ರಶ್ನೆಯಾಗಿದೆ.