ಒಂದೇ ತಾಲೂಕಿನ ಇಬ್ಬರು ಶಾಸಕರ ಪೈಕಿ ಯಾರಿಗೆ ಮಂತ್ರಿಗಿರಿ? ಟ್ರಬಲ್ ಶೂಟರ್‌ಗಿದ್ಯಾ ಅವಕಾಶ..?
ಈ ಕ್ಷೇತ್ರದಲ್ಲಿ ಯಾವ ಶಾಸಕಗೆ ಇದೆ ಮಂತ್ರಿಗಿರಿ ಪಡೆಯುವ ಅವಕಾಶ..? ಯಾರ ಪರವಾಗಿ ಇದೆ ಬಿಜೆಪಿಗರ ಒಲವು..?
ಚನ್ನಪಟ್ಟಣ (ನ.13): ದೀಪಾವಳಿ ಬಳಿಕ ಪುನರ್ ರಚನೆಗೊಳ್ಳಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಪಡೆಯುವ ತಾಲೂಕಿನ ಎಂಎಲ್‌ಸಿ ಯಾರು? ಮಂತ್ರಿಗಿರಿ ಸಿ.ಪಿ.ಯೋಗೇಶ್ವರ್‌ಗೆ ಸಿಗಲಿದೆಯಾ? ಇಲ್ಲಾ ಪುಟ್ಟಣ್ಣ ಪಾಲಾಗಲಿದೆಯಾ? ಇದು ಸದ್ಯಕ್ಕೆ ತಾಲೂಕು ರಾಜಕೀಯ ಪಾಳಯದ ಪ್ರಮುಖ ಚರ್ಚೆಯ ವಸ್ತುವಾಗಿದೆ.
ಸಂಪುಟ ಪುನರ್ ರಚನೆಯ ಸುದ್ದಿ ಹೊರ ಬೀಳುತ್ತಿದ್ದಂತೆ ಸಾಕಷ್ಟುಮಂದಿ ಗಾದಿಗಾಗಿ ಲಾಭಿ ಆರಂಭಿಸಿದ್ದಾರೆ. ಇನ್ನೂ ಕೆಲವು ಹೆಸರುಗಳು ಹರಿದಾಡುತ್ತಿವೆ. ಹೀಗೆ ಹರಿದಾಡುತ್ತಿರುವ ಹೆಸರಿನಲ್ಲಿ ತಾಲೂಕಿನ ಇಬ್ಬರು ಎಂಎಲ್‌ಸಿಗಳಾಗಿರುವ ಯೋಗೇಶ್ವರ್ ಮತ್ತು ಪುಟ್ಟಣ್ಣ ಅವರ ಹೆಸರು ಸಾಕಷ್ಟುಚಾಲ್ತಿಗೆ ಬಂದಿದ್ದು, ಇಬ್ಬರಲ್ಲಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ತಾಲೂಕಿನ ಜನತೆಯಲ್ಲಿ ಮೂಡಿದೆ.
ಮೂರನೇ ಬಾರಿಯಾದರೂ ಸಿಕ್ಕೀತೆ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಯೋಗೇಶ್ವರ್ ಪಾತ್ರ ಪ್ರಮುಖವಾದದ್ದು. ಈ ಕಾರಣಕ್ಕೆ ಯೋಗೇಶ್ವರ್ ಅವರಿಗೆ ಮೊದಲ ಅವಧಿಯಲ್ಲೇ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ, ಮೊದಲ ಹಂತದ ಸಂಪುಟ ವಿಸ್ತರಣೆಯ ವೇಳೆ ಕೊನೆಕ್ಷಣದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರು ಕಂಡು ಬಂದಿತಾದರೂ ಯೋಗೇಶ್ವರ್ ಹೆಸರು ಇರಲಿಲ್ಲ.
ಎರಡನೇ ಬಾರಿಗೆ ಯೋಗೇಶ್ವರ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಅವರ ಬೆಂಬಲಿಗರು ನಂಬಿದ್ದರು. 10+3 ಸೂತ್ರದಡಿಯಲ್ಲಿ 10 ಮಂದಿ ಮತದಾರರಿಂದ ಅರ್ಹರಾದ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರಾದ ಉಮೇಶ್‌ಕತ್ತಿ, ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿಗೆ ಅವಕಾಶ ಸಿಗಲಿದೆ ಎಂಬ ಸುದ್ದಿ ದಟ್ಟಗೊಂಡಿತ್ತು. ತಾಲೂಕು ಬಿಜೆಪಿ ಕಾರ್ಯಕರ್ತರು ನಮ್ಮ ನಾಯಕನಿಗೆ ಸಚಿವ ಸ್ಥಾನ ಖಚಿತ ಎಂದು ನಗರದಾದ್ಯಂತ ಬ್ಯಾನರ್ ಹಾಕಿಸಿ ಶುಭಾಶಯ ಕೋರಿದ್ದರು.
ಆದರೆ, ಕೊನೆಕ್ಷಣದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸೇರಿದಂತೆ ಕೆಲ ಮಂದಿ ಬಂಡೆದ್ದ ಹಿನ್ನೆಲೆಯಲ್ಲಿ ಪಕ್ಷದ ಮೂರು ಮಂದಿಗೆ ಸಚಿವ ಸ್ಥಾನ ನೀಡುವುದನ್ನು ಕೈ ಬಿಟ್ಟು ಉಳಿದ ಮತದಾರರಿಂದ ಅರ್ಹರಾದ 10 ಮಂದಿ ಶಾಸಕರಿಗೆ ಅವಕಾಶ ನೀಡಲಾಯಿತು. ಸ್ವಪಕ್ಷದ ಕೆಲ ಮಂದಿಯ ಬಂಡಾಯದಿಂದಾಗಿ ಯೋಗೇಶ್ವರ್‌ಗೆ ಎರಡನೇ ಬಾರಿಯೂ ಸಚಿವ ಸ್ಥಾನ ಕೈತಪ್ಪಿತು.
ಇದೀಗ ಮೂರನೇ ಬಾರಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಯೋಗೇಶ್ವರ್ ಅವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ತಾಲೂಕಿನ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಯೋಗೇಶ್ವರ್ ಅವರಿಗೆ ಹೈಕಮ್ಯಾಂಡ್ ಮನ್ನಣೆ ನೀಡಲಿದೆ. ಅಲ್ಲದೆ ಸಂಘಪರಿವಾರವೂ ಇವರ ಪರವಾಗಿದೆ ಯೋಗೇಶ್ವರ್ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಮುನ್ನೆಲೆಗೆ ಬಂದ ಪುಟ್ಟಣ್ಣ ಹೆಸರು: ಇತ್ತೀಚಿಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಸಿರುವ ಪುಟ್ಟಣ್ಣ ಅವರ ಹೆಸರು ಇದೀಗ ಸಚಿವ ಸಂಪುಟದ ರೇಸಿನಲ್ಲಿ ಕೇಳಿಬರುತ್ತಿದೆ. ನಾಲ್ಕನೇ ಬಾರಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪುಟ್ಟಣ್ಣಹೆಸರು ಇದೀಗ ಪ್ರಚಲಿತಕ್ಕೆ ಬಂದಿದ್ದು, ಇವರು ಸಹ ಚನ್ನಪಟ್ಟಣ ತಾಲೂಕಿನವರು ಎಂಬುದು ವಿಶೇಷ.
ಶಿರಾ ಸೋಲಿನ ಹಿಂದೆ ಪರಮೇಶ್ವರ್ : ಗಂಭೀರ ಆರೋಪ .
ಪುಟ್ಟಣ್ಣ ಅವರಿಗೆ ಮಂತ್ರಿ ಸ್ಥಾನ ನೀಡಿ ಎಚ್‌ಡಿಕೆ ಮತ್ತು ಡಿಕೆಶಿ ಪ್ರಾಬಲ್ಯದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಹೊಣೆ ಹೊರಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪುಟ್ಟಣ್ಣ ಸಹ ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಮೇಲ್ಮನೆ ಉಪಸಭಾಪತಿ ಹುದ್ದೆಯನ್ನು ಎರಡು ಬಾರಿ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಇವರಿಗೆ ಅವಕಾಶ ಸಿಗಲಿದೆ ಎಂಬ ಮಾತು ಇದೀಗ ವ್ಯಾಪಕವಾಗಿ ಕೇಳಿಬರುತ್ತಿದೆ.
ಯೋಗೇಶ್ವರ್ ಪರ ಕಾರ್ಯಕರ್ತರ ಒಲವು: ಸ್ಥಳೀಯ ಬಿಜೆಪಿ ಕಾರ್ಯಕರ್ತರು ಯೋಗೇಶ್ವರ್ ಪರವಾಗಿ ಒಲವು ವ್ಯಕ್ತಪಡಿಸಿದ್ದು, ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಸಂಘಟನೆಗೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯೋಗೇಶ್ವರ್ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ತಳಮಟ್ಟದ ಕಾರ್ಯಕರ್ತರ ಜತೆಗೆ ನಿಕಟವಾಗಿದ್ದಾರೆ. ಜಿಲ್ಲೆಯ ಪ್ರಭಾವಿ ನಾಯಕರಾದ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಲು ಯೋಗೇಶ್ವರ್ ಅವರೇ ಸೂಕ್ತ ಅವರಿಗೆ ಪಕ್ಷ ಅವಕಾಶ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ರಚನೆಯಾಗಲಿರುವ ಸಂಪುಟದ ರೇಸಿನಲ್ಲಿ ತಾಲೂಕಿನ ಇಬ್ಬರು ಎಂಎಲ್‌ಸಿಗಳ ಹೆಸರು ಕೇಳಿಬರುತ್ತಿದ್ದು, ಇಬ್ಬರ ಪೈಕಿ ಯಾರಿಗೆ ಅವಕಾಶ ಸಿಕ್ಕುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಕೊನೆಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಪ್ರಮಾಣ ವಚನ ಸ್ವೀಕರಿಸಲು ಯಾರಿಗೆ ಅವಕಾಶ ಮಾಡಿಕೊಡಲಿದೆ ಎಂದು ಕಾಯ್ದು ನೋಡಬೇಕಿದೆ.